ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಸಂಚಾರಿ ನಿಯಮ ಟೈಟ್

Lingaraj Badiger
Updated On : 30 May 2013, 11:20 am

ಕನ್ನಡಪ್ರಭ ವಾರ್ತೆ  ಯಾದಗಿರಿ  ಮೇ 29
ಜಿಲ್ಲೆಯ ನಗರ ಪ್ರದೇಶಗಳಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣ ಹೆಚ್ಚಾಗಿದ್ದು, ಇದರಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಜೂನ್ ತಿಂಗಳಿಂದ ಕಟ್ಟುನಿಟ್ಟಿನ ನಿಯಮ ಜಾರಿಗೆ ಜಿಲ್ಲಾ ಪೊಲೀಸ್ ಇಲಾಖೆ ನಿರ್ಧರಿಸಿದೆ.
  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ವಂಶಿಕೃಷ್ಣ ತಮ್ಮ ಕಚೇರಿಯಲ್ಲಿ ಬುಧವಾರ ಈ ಕುರಿತು ಮಾತನಾಡಿ, ಇತರ ನಗರಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಸಂಚಾರಿ ನಿಯಮ ಪಾಲನೆಯಾಗುತ್ತಿಲ್ಲ. ಇಲಾಖೆಯಲ್ಲಿನ ಸಿಬ್ಬಂದಿ ಹಾಗೂ ಟ್ರಾಫಿಕ್ ಠಾಣೆ ಕೊರತೆ ಮಧ್ಯೆಯೂ ಇರುವ ಇತಿಮಿತಿಯೊಳಗೇ ಕಾನೂನು ಪಾಲನೆಗೆ ಆದ್ಯತೆ ನೀಡಲು ನಿರ್ಧರಿಸಲಾಗಿದೆ.
ಇಂದು ಸಭೆ: ಆದ್ದರಿಂದ ಆಟೋರಿಕ್ಷಾ ಚಾಲಕರು ಹಾಗೂ ಮಾಲೀಕರು, ಲಾರಿ, ವಿವಿಧ ಸರಕು ಸಾಗಣೆ ವಾಹನಗಳ ಚಾಲಕರ ಸಂಘ, ಸಂಘಸಂಸ್ಥೆಗಳು, ವ್ಯಾಪಾರಸ್ಥರು ಹಾಗೂ ಸಾರ್ವಜನಿಕರಿಂದ ಸಲಹೆ ಸೂಚನೆಗಳನ್ನು ಪಡೆಯಲು ಗುರುವಾರ ಸಭೆ ಕರೆಯಲಾಗುವುದು. ಅವುಗಳ ಆಧಾರದ ಮೇಲೆ ಆರಂಭದಲ್ಲಿ ಜಾಗೃತಿ ಕಾರ್ಯಕ್ರಮ, ಕಾನೂನು ಅರಿವು ಇತ್ಯಾದಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ನಂತರ ಹಂತಹಂತವಾಗಿ ಸಂಚಾರಿ ನಿಯಮ ಪಾಲಿಸುವಂತೆ ಸೂಚಿಸಲಾಗುವುದು. ಜೂನ್ ಅಂತ್ಯದಿಂದ ಸಂಚಾರಿ ನಿಯಮ ಕಟ್ಟುನಿಟ್ಟು ಗೊಳಿಸಲಾಗುವುದು ಎಂದು ಅವರು ತಿಳಿಸಿದರು.
ಜನರ ಅನುಕೂಲಕ್ಕಾಗಿ: ಜಿಲ್ಲಾ ಕೇಂದ್ರ ಯಾದಗಿರಿ ಹಾಗೂ ಶಹಾಪುರದಲ್ಲಿ ಜನದಟ್ಟಣೆ ಹೆಚ್ಚುತ್ತಿದ್ದು, ವಾಹನ ಸಂಚಾರವೂ ಹೆಚ್ಚಾಗಿದೆ. ಆದ್ದರಿಂದ ಯಾದಗಿರಿ ನಗರಕ್ಕೆ ಟ್ರಾಫಿಕ್ ಠಾಣೆ ಅಗತ್ಯವಿದೆ. ಅಲ್ಲದೇ ಯಾದಗಿರಿ ಹಾಗೂ ಶಹಾಪುರ ನಗರಗಳಲ್ಲಿ ಮತ್ತೊಂದು ಪೊಲೀಸ್ ಠಾಣೆ ಅಗತ್ಯವೂ ಇದೆ. ಸುರಪುರದಲ್ಲಿ ಉಪವಿಭಾಗ ಪ್ರಾರಂಭಕ್ಕೂ ಪ್ರಸ್ತಾವನೆ ಸಲ್ಲಿಸಲಾಗಿದೆ. ಇವು ಸರ್ಕಾರದ ಮಟ್ಟದಲ್ಲಿ ಆಗಬೇಕಿದೆ. ಸಂಚಾರಿ ನಿಯಮ ಕಟ್ಟುನಿಟ್ಟುಗೊಳಿಸುವುದು ಜನರ ಅನುಕೂಲಕ್ಕಾಗಿ ಎನ್ನುವುದನ್ನು ಎಲ್ಲರೂ ತಿಳಿದುಕೊಳ್ಳಬೇಕು.
  ಅದಕ್ಕಾಗಿ ಎಲ್ಲ ಇಲಾಖೆ ಹಾಗೂ ಸಾರ್ವಜನಿಕರ ಸಹಕಾರ ಬೇಕು. ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಲು ಇಲಾಖೆ ಎಲ್ಲ ರೀತಿಯಲ್ಲಿ ಸಜ್ಜಾಗಿದ್ದು, ಎಲ್ಲರಿಂದಲೂ ಸಲಹೆ ಸೂಚನೆ ಸ್ವೀಕರಿಸಲಿದೆ ಎಂದು ಅವರು ಹೇಳಿದರು.
ಮೊದಲು ಜಾಗೃತಿ: ಯಾದಗಿರಿ ನಗರದ ಶಾಸ್ತ್ರಿ ಚೌಕ, ಸುಭಾಷ ವೃತ್ತ, ಗಾಂಧಿ ಚೌಕ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಜನದಟ್ಟಣೆ ಹೆಚ್ಚಿದೆ. ಶಹಾಪುರ ಬಸ್ ನಿಲ್ದಾಣ ಸಮೀಪ, ಸುರಪುರ ಗಾಂಧಿ ವೃತ್ತದಲ್ಲೂ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಅಲ್ಲಿ ನಿಯಮ ಜಾರಿ ಹೇಗೆ ಕೈಗೊಳ್ಳಬೇಕು ಎಂಬುದರ ಬಗ್ಗೆ ಪರಿಶೀಲಿಸಲಾಗುವುದು. ಸಂಚಾರಿ ನಿಯಮ ಕಟ್ಟುನಿಟ್ಟುಗೊಳಿಸುವ ಮುನ್ನ ಜೂನ್ ಮೊದಲ ವಾರದಿಂದ ಜಾಗೃತಿ ಕಾರ್ಯಕ್ರಮ ಹಾಗೂ ಕಾನೂನು ಅರಿವು ಮೂಡಿಸಲಾಗುವುದು.
  ಆಟೋ ರಿಕ್ಷಾ ಚಾಲಕರಿಗೂ ಈ ನಿಟ್ಟಿನಲ್ಲಿ ತಿಳಿವಳಿಕೆ ನೀಡಲಾಗುವುದು. ಕಾಲೇಜು ವಿದ್ಯಾರ್ಥಿಗಳು, ಸಂಘಸಂಸ್ಥೆಗಳ ಆಶ್ರಯದಲ್ಲಿ ಜಾಥಾ ಹಮ್ಮಿಕೊಳ್ಳಲಾಗುವುದು. ಈ ಹಂತದಲ್ಲಿ ನಿಯಮ ಉಲ್ಲಂಘನೆ ಮಾಡಿದವರಿಗೆ ಎಚ್ಚರಿಕೆ ನೀಡಲಾಗುವುದು. ಆದರೆ ನಿಗದಿತ ಅವಧಿಯ ನಂತರವೂ ಉಲ್ಲಂಘನೆ ಪ್ರಕರಣ ಮುಂದುವರಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಆದ್ದರಿಂದ ಈ ನಿಟ್ಟಿನಲ್ಲಿ ಎಲ್ಲರೂ ಕಾನೂನು ಪಾಲನೆಗೆ ಒತ್ತು ನೀಡಬೇಕು ಎಂದು ಕೋರಿದರು.
ದಂಡ ಹಾಗೂ ಶಿಕ್ಷೆ: ನಗರದಲ್ಲಿ ಅಪ್ರಾಪ್ತರು ವಾಹನ ಚಲಾಯಿಸುತ್ತಿರುವುದು ಕಂಡುಬರುತ್ತಿದೆ. ಅಲ್ಲದೇ ಪರವಾನಗಿ ಇಲ್ಲದೇ ವಾಹನ ಚಲಾಯಿಸುತ್ತಿರುವ ಪ್ರಕರಣವೂ ಹೆಚ್ಚಾಗಿದೆ. ಕಳೆದ ಜನವರಿಯಿಂದ ಇದುವರೆಗೆ 203 ಅಪಘಾತ ಪ್ರಕರಣಗಳು ಸಂಭವಿಸಿದ್ದು, 60 ಜನರು ಪ್ರಾಣ ಕಳೆದುಕೊಂಡಿದ್ದಾರೆ.
  ಪರವಾನಗಿ ಇಲ್ಲದೇ ಆಟೋ ರಿಕ್ಷಾ ಓಡಿಸಲಾಗುತ್ತಿದೆ. ಇದೆಲ್ಲವನ್ನೂ ಗಂಭೀರವಾಗಿ ಪರಿಗಣಿಸಲಾಗುವುದು. ರಾತ್ರಿ 11ರ ನಂತರ ಜನರ ಓಡಾಟವೂ ಜಾಸ್ತಿಯಾಗಿದೆ. ಕಾನೂನು ಪಾಲನೆ ದೃಷ್ಟಿಯಿಂದ ಇದೆಲ್ಲವುಗಳಿಗೂ ಕಡಿವಾಣ ಹಾಕುವುದು ಅನಿವಾರ್ಯವಾಗಿದೆ. ಪರವಾನಗಿ ಹಾಗೂ ವಾಹನಗಳ ದಾಖಲೆಪತ್ರಗಳನ್ನು ಹೊಂದಿರದಿದ್ದರೆ ನಿಯಮದಂತೆ ದಂಡ ಹಾಗೂ ಶಿಕ್ಷೆ ವಿಧಿಸಲಾಗುವುದು.
   ಇದಕ್ಕೂ ಮುನ್ನ ನಗರಗಳಲ್ಲಿ ಪಾರ್ಕಿಂಗ್ ಸ್ಥಳ, ಆಟೋ ನಿಲ್ದಾಣಗಳಿಗೆ ಸ್ಥಳ ಗುರುತಿಸಬೇಕಿದೆ. ರಸ್ತೆ ಅತಿಕ್ರಮಣ ತೆರವಿಗೆ ನಗರಸಭೆ ಹಾಗೂ ಇನ್ನಿತರ ಇಲಾಖೆಗಳು ಸಹಕಾರ ನೀಡಬೇಕಿದೆ. ಒಟ್ಟಿನಲ್ಲಿ  ಜೂನ್ ಅಂತ್ಯದಲ್ಲಿ ಸಂಚಾರಿ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಎಂದು ಎಸ್ಪಿ ವಂಶಿಕೃಷ್ಣ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement