ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಅವ್ಯವಸ್ಥೆ ಆಗರವಾದ ಚಿಂಚೋಳಿ ಬಸ್ ನಿಲ್ದಾಣ

Lingaraj Badiger
Updated On : 31 May 2013, 11:58 am

ಕ.ಪ್ರ. ವಾರ್ತೆ, ಚಿಂಚೋಳಿ, ಮೇ 30
ಪಟ್ಟಣದ ಸಾರಿಗೆ ಇಲಾಖೆಗೆ ಒಳಪಟ್ಟಿರುವ ಬಸ್ ನಿಲ್ದಾಣದಲ್ಲಿ ಮೂಲ ಸೌಲಭ್ಯಗಳಿಲ್ಲದೆ ಪ್ರಯಾಣಿಕರು ಪ್ರಯಾಸ ಪಡುವಂತಾಗಿದೆ.
ಬಸ್ ನಿಲ್ದಾಣದಲ್ಲಿ ಮಹಿಳೆಯರಿಗೆ ಪ್ರತ್ಯೇಕ ವಿಶ್ರಾಂತಿ ಕೋಣೆಗಳಿಲ್ಲ, ಕುಳಿತುಕೊಳ್ಳಲು ಸರಿಯಾದ ಆಸನಗಳಿಲ್ಲ. ನಿಲ್ದಾಣದಲ್ಲಿ ದುರ್ವಾಸನೆ, ಅಲ್ಲಲ್ಲಿ ಗುಟುಕಾ, ಪಾನ್ ತಿಂದು ಉಗುಳಿದ ಕಲೆಗಳು, ವಿದ್ಯುತ್ ದೀಪಗಳಿಲ್ಲ, ಶೌಚಾಲಯವು ಗಬ್ಬು ವಾಸನೆ ಬರುತ್ತಿದ್ದು ಬೇರೆ ಊರಿಗೆ ಹೋಗುವ ಬಸ್ಸಿಗಾಗಿ ಕಾಯುವ  ಪ್ರಯಾಣಿಕರು ಮೂಗು ಮುಚ್ಚಿಕೊಂಡೇ ನಿಲ್ಲಬೇಕಾಗಿದೆ ಎನ್ನುತ್ತಾರೆ ಪ್ರಯಾಣಿಕರು.
ಮನವಿಗೆ ಸ್ಪಂದಿಸದ ನಿಯಂತ್ರಣಾಧಿಕಾರಿ: ಚಿಂಚೋಳಿಯಿಂದ ತಾಂಡೂರ, ಹುಮನಾಬಾದ್, ಸೇಡಂ, ಚಿಟಗುಪ್ಪ, ಗುಲ್ಬರ್ಗ ಮುಂತಾದ ಕಡೆಗೆ ಸಂಚರಿಸುವ ಬಸ್ಸುಗಳು ಸರಿಯಾದ ಸಮಯಕ್ಕೆ ಬರುವುದಿಲ್ಲ. ಬಸ್ಗಳ ಬಗ್ಗೆ ನಿಯಂತ್ರಣಾಧಿಕಾರಿಗಳಿಗೆ ವಿಚಾರಿಸಿದರೆ ಸರಿಯಾದ ಉತ್ತರ ನೀಡುವುದಿಲ್ಲ ಪ್ರಯಾಣಿಕರ ದೂರು.
ಮಾಂಸದ ಅಂಗಡಿ- ಕಾಗೆಗಳ ಕಾಟ: ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿನ ಸೌಲಭ್ಯವಿಲ್ಲ. ಕ್ಯಾಟಿನ್ ಮುಚ್ಚಲಾಗಿದೆ. ತಿಂಡಿ- ತಿನಿಸು ಮತ್ತು ಉಪಹಾರಕ್ಕಾಗಿ ಬೇರೆ ಕಡೆ ಹೋಗಬೇಕಾಗಿದೆ. ಬಸ್ ನಿಲ್ದಾಣದ ಮುಂದೆ ಚಹಾ ಅಂಗಡಿ, ತರಕಾರಿ ಮತ್ತು ಕಟಿಂಗ್ ಸಲೂನ್ ಅಂಗಡಿ, ಮಾಂಸದ ಅಂಗಡಿಗಳಿರುವುದರಿಂದ ದಿನಾಲೂ ಪ್ರಯಾಣಿಕರಿಗೆ ಕಾಗೆಗಳ ಕಾಟ ವಿಪರೀತವಾಗಿದೆ.
ಮಳೆ ಬಂದರೆ ಸಾಕು ಸೆಲ್ಟರ್ ಸಂಪೂರ್ಣವಾಗಿ ಸೋರುತ್ತದೆ. ಇದರಿಂದ ಪ್ರಯಾಣಿಕರಿಗೆ ಕುಳಿತುಕೊಳ್ಳಲೂ ಹೆಣಗಬೇಕಾದ ದುಸ್ಥಿತಿ ಬಂದೊದಗಿದೆ. ಸಾರಿಗೆ ಸಂಸ್ಥೆ ವತಿಯಿಂದ ಬಸ್ ನಿಲ್ದಾಣ ದುರಸ್ತಿಗಾಗಿ ಲಕ್ಷಾಂತರ ರು. ಖರ್ಚು ಮಾಡಲಾಗಿದೆ. ಆದರೆ ಕಳಪೆ ಮಟ್ಟದ ಕಾಮಗಾರಿಯಿಂದ ಮಳೆ ನೀರು ಸಮರ್ಪಕವಾಗಿ ಹರಿದು ಹೋಗುವುದಿಲ್ಲ.
ಟಿನ್ ಶೆಡ್ ಆದ್ರೂ ನಿರ್ಮಿಸಲಿ: ಶಾಲೆ- ಕಾಲೇಜುಗಳಿಂದ ಬರುವ ವಿದ್ಯಾರ್ಥಿಗಳಿಗೆ ನಿಲ್ಲಲು ಸ್ಥಳವಿಲ್ಲ. ಸುತ್ತಲೂ ತೆರೆದ ಸ್ಥಳವಿದೆ. ಇಲ್ಲಿ ಟಿನ್ ಶೆಡ್ ನಿರ್ಮಿಸಿದರೆ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂಬುದು ಪ್ರಯಾಣಿಕರ ಅಭಿಪ್ರಾಯವಾಗಿದೆ.  ಸಾರಿಗೆ ಸಂಸ್ಥೆ ಇತ್ತ ಗಮನ ಹರಿಸುವುದೇ ಕಾದು ನೋಡಬೇಕಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement