ಕುಡಿವ ನೀರು ಯೋಜನೆ ಸ್ಥಗಿತಕ್ಕೆ ಒತ್ತಾಯ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಮೇ 30
ಗುಲ್ಬರ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲ ವಾರ್ಡ್ಗಳಿಗೆ ವಿಸ್ತರಣೆ ಮಾಡಲು ಹೊರಟಿರುವ ನಿರಂತರ ಕುಡಿಯುವ ನೀರು ಯೋಜನೆಯನ್ನು ಕೂಡಲೇ ಸ್ಥಗಿತಗೊಳಿಸಬೇಕು. ನೀರಿನ ಹಕ್ಕಿಗಾಗಿ ಜನಾಂದೋಲನಕ್ಕೆ ಕರ್ನಾಟಕ ಸಂಘಟನೆಯ ರಾಜ್ಯ ಸಂಚಾಲಕ ರಾಜೇಂದ್ರ ಪ್ರಭಾಕರ್ ಒತ್ತಾಯಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಹಾನಗರದ 11 ವಾರ್ಡ್ಗಳಲ್ಲಿ ಈಗಾಗಲೇ ಪ್ರಾರಂಭಿಸಲಾದ ಈ ಯೋಜನೆ ವಿಫಲಗೊಂಡರೂ ಫ್ರಾನ್ಸ್ ಮೂಲದ ವಿಯೋಲಿಯಾ ಕಂಪನಿಯು ಯೋಜನೆ ಯಶಸ್ವಿಯಾಗಿದ್ದು, ಎಲ್ಲ 55 ವಾರ್ಡ್ಗಳಿಗೆ ವಿಸ್ತರಿಸಬೇಕೆಂದು ರಾಜ್ಯ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ಹಣ ಲೂಟಿ ಮಾಡುವ ಹುನ್ನಾರಕ್ಕೆ ಇಳಿದಿದೆ ಎಂದು ಆರೋಪಿಸಿದರು.
ಪಾಲಿಕೆ ಸದಸ್ಯರಿಗೆ ಮಾಹಿತಿಯೇ ಇಲ್ಲ: 11 ವಾರ್ಡ್ಗಳಲ್ಲಿ ದುಬಾರಿ ಶುಲ್ಕ ಭರಿಸಲಾರದೆ ಸುಮಾರು 182 ಮನೆಯವರು ನೀರಿನ ಸಂಪರ್ಕ ಕಳೆದುಕೊಂಡಿದ್ದಾರೆ. ಈ ಕುರಿತು ಪಾಲಿಕೆ ಸದಸ್ಯರಿಗೆ ಮಾಹಿತಿಯೇ ಇಲ್ಲ ಎಂದು ಹೇಳುತ್ತಿದ್ದಾರೆ. ಒಟ್ಟಾರೆ ಕಂಪನಿಯೂ ದುಬಾರಿ ಶುಲ್ಕ ಪಡೆದು ಹಣ ಲೂಟಿ ಮಾಡಲು ಹೊರಟಿದೆ ಎಂದರು.
ರಾಜ್ಯದ ಮೈಸೂರು, ಹುಬ್ಬಳ್ಳಿ ಧಾರವಾಡ, ಬೆಳಗಾಂವ ಜಿಲ್ಲೆಗಳಲ್ಲಿ ಚಾಲನೆಗೊಂಡಿರುವ ನಿರಂತರ ನೀರು ಯೋಜನೆಯನ್ನು ಕೂಡಲೇ ಸ್ಥಗಿತಗೊಳಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.
ನಿಷೇಧಿಸುವ ಶಾಸನ ಜಾರಿಗೆ ಮಾಡಿ: ರಾಜ್ಯದಲ್ಲಿನ ನೀರಿನ ಖಾಸಗೀಕರಣ ವಿರುದ್ಧ ತನ್ನ ನಿಲುವನ್ನು ರಾಜ್ಯ ಸರ್ಕಾರ ಸ್ಪಷ್ಟಪಡಿಸಬೇಕು, ನೀರು ಒಂದು ನೈಸರ್ಗಿಕ ಸಂಪನ್ಮೂಲ ಎಂಬ ಅಂಶವನ್ನು ರಕ್ಷಿಸಲು ಶಾಸನ ಜಾರಿಗೊಳಿಸಬೇಕು, ನೀರಿನ ಕ್ಷೇತ್ರದಲ್ಲಿ ಅದರಲ್ಲೂ ವಿಶೇಷವಾಗಿ ನೀರಿನ ಸೇವೆಗಳ ನಿರ್ವಹಣೆಗಳಲ್ಲಿ ಖಾಸಗಿ ಕಂಪನಿಗಳನ್ನು ನಿಷೇಧಿಸುವ ಶಾಸನ ಜಾರಿಗೆ ಮಾಡಬೇಕು ಎಂದು ಆಗ್ರಹಿಸಿದರು.
ನೀರಿನ ಕ್ಷೇತ್ರದಲ್ಲಿ ಎಲ್ಲ ತರಹದ ವ್ಯಾಪಾರಿ ಮಾದರಿಗಳನ್ನು ಅಥವಾ ಲಾಭ ಬಳಕೆಯನ್ನು ನಿಷೇಧಿಸುವ ಕಾಯ್ದೆಯನ್ನು ಜಾರಿಗೊಳಿಸಬೇಕು, ಗುಲ್ಬರ್ಗ ನಗರದ ನೀರಿನ ಸರಬರಾಜು ಮಹಾನಗರ ಪಾಲಿಕೆ ವಹಿಸಿಕೊಳ್ಳಬೇಕು, ಗುಲ್ಬರ್ಗ ನಗರದ ಸ್ಲಂ ನಿವಾಸಿಗಳಿಗೆ, ಬೀದಿ ವ್ಯಾಪಾರಿಗಳಿಗೆ, ಆಟೋ ಚಾಲಕರಿಗೆ, ಸಂಘಟಿತ ಕೂಲಿ ಕಾರ್ಮಿಕರಿಗೆ, ನಗರ ವಂಚಿತ ಸಮುದಾಯಕ್ಕೆ ಉಚಿತವಾಗಿ ನೀರು ಕೊಡಬೇಕು, ಗುಲ್ಬರ್ಗ ನಾಗರಿಕರಿಗೆ ಒಂದು ತಲೆಗೆ 135 ಲೀಟರ್ ನೀರು ಪ್ರತಿದಿನ ಉಚಿತವಾಗಿ ಕೊಡಬೇಕು, ಇದರ ಮೇಲ್ಪಟ್ಟ ಬಳಕೆ ಮಾಡಿದರೆ ಅದಕ್ಕೆ ಕನಿಷ್ಠ ದರವನ್ನು ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.
ನಿರಂತರ ನೀರು ಸರಬರಾಜು ಯೋಜನೆಯ ಖಾಸಗೀಕರಣ ವಿರುದ್ಧ ಜನತೆ ಧ್ವನಿ ಎತ್ತಲು ಯೋಜನೆ ಅನುಷ್ಠಾನಗೊಂಡಿರುವ ಜಿಲ್ಲೆಗಳಲ್ಲಿ ಜನತೆಯಲ್ಲಿ ಅರಿವು ಮೂಡಿಸುವ ಕೆಲಸ ಮಾಡಲಿದೆ. ಇದೊಂದು ಜನಾಂದೋಲನವಾಗಿ ರೂಪಗೊಂಡು ಈ ಯೋಜನೆ ಸ್ಥಗಿತಗೊಳ್ಳುವವರೆಗೆ ನಿರಂತರ ಹೋರಾಟ ನಡೆಯಲಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕ್ಷಿತೀಜ್ ಅರಸ, ಬಾಬುರಾವ ದಂಡಿನಕರ್, ಬಸವರಾಜ, ರೇಣುಕಾ ಸರಡಗಿ, ನಾಗರಾಜ ವಾಡೇಕರ್, ಗಣೇಶ ಕಾಂಬಳೆ ಇತರರು ಉಪಸ್ಥಿತರಿದ್ದರು.