ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ದಶಕ ಕಳೆದರೂ ಪೂರ್ಣಗೊಳ್ಳದ ಗುರುಭವನ

Lingaraj Badiger
Updated On : 31 May 2013, 12:02 pm

ಕೆಂಭಾವಿ: ಹಿಂದೆ ಕಾಂಗ್ರೆಸ್ ಸರ್ಕಾರವಿದ್ದಾಗ ಆರಂಭವಾಗಿದ್ದ ಗುರುಭವನ ಮತ್ತೆ ಕಾಂಗ್ರೆಸ್ ಸರ್ಕಾರ ಅಸ್ಥಿತ್ವಕ್ಕೆ ಬರುವವರೆಗೂ ನೆನೆಗುದಿಗೆ ಬಿದ್ದು, ಆ ಅಪೂರ್ಣ ಕಟ್ಟಡವು ಅನೈತಿಕ ಚಟುವಟಿಕೆಯ ತಾಣವಾಗಿ ಮಾರ್ಪಟ್ಟಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಹಣ ಬಿಡುಗಡೆ: ಇಲ್ಲಿಗೆ ಸಮೀಪದಲ್ಲಿ 10 ವರ್ಷಗಳ ಹಿಂದೆ ಆರಂಭಿಸಿದ್ದ ಗುರುಭವನ ಕಟ್ಟಡ ಕಾಮಗಾರಿ ಇದುವರೆಗೆ ಪೂರ್ಣಗೊಂಡಿಲ್ಲ. ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿದ್ದ ಎಚ್. ವಿಶ್ವನಾಥ ಅವರು ರಾಜ್ಯದ ಗ್ರಾಮಾಂತರ ಪ್ರದೇಶದಲ್ಲಿರುವ ಶಿಕ್ಷಕರಿಗಾಗಿ ವಸತಿ ಗೃಹಗಳನ್ನು ನಿರ್ಮಿಸುವುದಕ್ಕಾಗಿ ಯೋಜನೆಯೊಂದನ್ನು ರೂಪಿಸಿ ಹಣ ಬಿಡುಗಡೆಮಾಡಿದ್ದರು. ಆದರೆ ಕಾಮಗಾರಿ ಮಾತ್ರ ಪೂರ್ಣಗೊಳ್ಳದೇ ಮತ್ತೆ ಕಾಂಗ್ರೆಸ್ ಸರ್ಕಾರವೇ ಅಧಿಕಾರಿಕ್ಕೆ ಬಂದರೂ ಈ ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ. ಈಗಲಾದರೂ ಈ ಯೋಜನೆ ಪೂರ್ಣಗೊಂಡು ವಸತಿ ಗೃಹಗಳು ಬಳಕೆಗೆ ಸಿಗುವಂತಾಗಬೇಕು ಎನ್ನುವುದು ಶಿಕ್ಷಕರ ಬೇಡಿಕೆಯಾಗಿದೆ.
  ಪಟ್ಟಣದ ಹೊರವಲಯದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಜಿಲ್ಲಾಡಳಿತದ ವತಿಯಿಂದ ನಿರ್ಮಿತಿ ಕೇಂದ್ರದವರು 25 ಲಕ್ಷ ವೆಚ್ಚದಲ್ಲಿ ಗುರು ಭವನ ಕಟ್ಟಡ ಕಾಮಗಾರಿ ನಿರ್ವಹಿಸುತ್ತಿದೆ. ಇದು ಅರ್ಧಕ್ಕೆ ನಿಂತಿದ್ದು, 4 ವರ್ಷಗಳಿಂದ ಇದೇ ಸ್ಥಿತಿಯಲ್ಲಿದೆ. ಇದರಿಂದಾಗಿ ಕಟ್ಟಡ ಅನೈತಿಕ ಚಟುವಟಿಕೆಗಳ ತಾಣವಾಗಿದೆ.
ಕೆಲಸ ಬಾಕಿ: ಎರಡು ಅಂತಸ್ತಿನ ಈ ಕಟ್ಟಡದಲ್ಲಿ ಶಿಕ್ಷಕರು ವಾಸಮಾಡಲು ಎಲ್ಲ ಸೌಕರ್ಯಗಳನ್ನು ಮಾಡಬೇಕಿದೆ. ಕಟ್ಟಡ ಪೂರ್ಣಗೊಳ್ಳುವ ಹಂತದಲ್ಲಿದ್ದರೂ ಸಹ ಇದಕ್ಕೆ ಇನ್ನೂ ಕಿಟಕಿ ಬಾಗಿಲುಗಳು ಜೋಡಿಸಿಲ್ಲ. ಬೆಡ್ ಕಾಂಕ್ರೀಟ್ ಕೆಲಸ ಬಾಕಿಯಿದೆ. ಗುಲ್ಬರ್ಗ ನಿರ್ಮಿತ ಕೇಂದ್ರದ ಅಧಿಕಾರಿಗಳು ಈ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು, ಅಧಿಕಾರಿಗಳು ಮಾತ್ರ ಯಾರಿಗೂ ಸಿಗುತ್ತಿಲ್ಲ. ಈ ಬಗ್ಗೆ ಯಾದಗಿರಿ ಜಿಲ್ಲಾ ನಿರ್ಮಿತಿ ಕೇಂದ್ರದವರನ್ನು ಸಂಪರ್ಕಿಸಿದರೆ ಜಿಲ್ಲೆಯ ಹುಣಸಗಿ, ಕೆಂಭಾವಿ, ನಾಯಕಲ್, ತಡಿಬಿಡಿ ಗ್ರಾಮದಲ್ಲಿ ನಿರ್ಮಿಸಲಾಗುತ್ತಿರುವ ಕಟ್ಟಡಗಳೂ ಅರ್ಧಕ್ಕೆ ನಿಂತಿವೆ ಎಂದು ಹೇಳುತ್ತಾರೆ. ಜಿಲ್ಲೆಯಾಗಿ ನಾಲ್ಕು ವರ್ಷವಾಗುತ್ತ ಬಂದರೂ ಜಿಲ್ಲಾಡಳಿತ ಮಾತ್ರ ಗುಲ್ಬರ್ಗ ನಿರ್ಮಿತಿ ಕೇಂದ್ರದತ್ತ ಕೈಮಾಡಿ ತೋರಿಸುತ್ತಿರುವುದು ನಿಂತಿಲ್ಲ. ಸುಮಾರು 25 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಕಟ್ಟಡದಲ್ಲಿ ಶಿಕ್ಷಕರು ವಾಸಿಸುವ ಮೊದಲೇ ಕಟ್ಟಡ ಹಾಳಾಗುವುದು ಬೇಡ ಎನ್ನುತ್ತಾರೆ ಪ್ರಜ್ಞಾವಂತ ನಾಗರಿಕರು.  
  ಇದರಿಂದ ಗ್ರಾಮೀಣ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಬೇರೆ ಕಡೆ ಮನೆ ಬಾಡಿಗೆ ಹಿಡಿಯುವುದು ಅನಿವಾರ್ಯವಾಗಿದೆ. ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸವಿವರು ಹಾಗೂ ಶಾಸಕರು ಈ ಬಗ್ಗೆ ಗಮನ ಹರಿಸಬೇಕಿದೆ. ಶೀಘ್ರದಲ್ಲಿ ಕಟ್ಟಡ ಕಾಮಗಾರಿಯನ್ನು ಪೂರ್ಣಗೊಳಿಸಿ ಶಿಕ್ಷಕರಿಗೆ ಅನುಕೂಲವಾಗುವಂತೆ ಮಾಡಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement