ಬಸವಣ್ಣ ಸಕಲ ಜೀವಾತ್ಮರಿಗೂ ಲೇಸನ್ನೇ ಬಯಸಿದ ದಾರ್ಶನಿಕ: ದರ್ಗಾ
ಯಾದಗಿರಿ: ದಯವೇ ಧರ್ಮದ ಮೂಲವಯ್ಯ ಎಂದು ಹೇಳುವ ಮೂಲಕ ಸಕಲ ಜೀವಾತ್ಮಗಳಿಗೂ ಲೇಸನ್ನು ಬಯಸುವ ಮಂತ್ರವನ್ನು ಜಗತ್ತಿಗೆ ಸಾರಿದ ಮಹಾನ್ ದಾರ್ಶನಿಕ ಬಸವಣ್ಣ. ಮಾನವ ಹಕ್ಕುಗಳ ಕುರಿತು, ಪಶು ಪಕ್ಷಿ, ಕ್ರಿಮಿಕೀಟಗಳ ಹಕ್ಕುಗಳ ಕುರಿತು ಮೊದಲು ಮಾತನಾಡಿದವರು ಬಸವಣ್ಣ ಎಂದು ಪತ್ರಕರ್ತ ರಂಜಾನ್ ದರ್ಗಾ ಹೇಳಿದರು.
ನಗರದ ಸಿನ್ನೂರ್ ಜಿನ್ ಸಭಾಭವನದಲ್ಲಿ ಪತ್ರಕರ್ತ ಇಂದೂಧರ್ ಸಿನ್ನೂರ್ ಅವರ ನೇತೃತ್ವದಲ್ಲಿ ಏರ್ಪಡಿಸಿದ್ದ 7ನೇ ವರ್ಷದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉಪನ್ಯಾಸ ನೀಡಿದರು.
ವಚನ ಕ್ರಿಯೆ: ಬಸವಣ್ಣ ಎಲ್ಲರಿಗೂ ಅರ್ಥವಾಗುವಂತೆ ಮಾತಿನ ಸಂರಚನೆಯನ್ನು ವಚನ ಸಾಹಿತ್ಯದ ಮೂಲಕ ತೋರಿಸಿಕೊಡುತ್ತಾರೆ. ಬಸವನ ದೃಷ್ಟಿಯಲ್ಲಿ ವಚನ ಎಂಬುದು ಕೇವಲ ಮಾತಲ್ಲ, ಅದೊಂದು ಕ್ರಿಯೆ. ನಡೆ-ನುಡಿ-ಸಿದ್ಧಾಂತ ಸೇರಿದ ಅರಿವು ಮತ್ತು ಆಚಾರ ಎರಡೂ ಒಂದೇ ಆಗಿರುವ ಪ್ರಕ್ರಿಯೆಯೇ ವಚನ. ಇಂದಿನ ಮಠಗಳು ಸರ್ಕಾರದಿಂದ ಬರುವ ಹಣದ ಕಡೆ ಗಮನ ಹರಿಸುತ್ತಿವೆಯೇ ಹೊರೆತು ನಶಿಸಿ ಹೋಗುತ್ತಿರುವ ವಚನ ಕಡೆಗೆ ಗಮನ ಹರಿಸುತ್ತಿಲ್ಲ ಎಂದು ದರ್ಗಾ ವಿಷಾದಿಸಿದರು.
ಶಾಸಕ ಡಾ.ಎ.ಬಿ. ಮಾಲಕರೆಡ್ಡಿ ಮಾತನಾಡಿ, ಬಸವಣ್ಣ ಎಂದೆಂದಿಗೂ ಪ್ರಸ್ತುತರು. ಕಳೆದು ನೂರಾರು ವರ್ಷಗಳಿಂದಲೂ ಬಸವಣ್ಣ ಜನಮಾನಸದಲ್ಲಿ ಉಳಿದುಕೊಂಡು ಬಂದಿರಲು ಆತ ನೀಡಿದ ಅಮೂಲ್ಯ ಚಿಂತನೆಗಳು ಕಾರಣ. ಬಸವಣ್ಣ ಹೇಳಿದ ಮಾತುಗಳಲ್ಲಿ ಒಂದೆರಡನ್ನು ಅಳವಡಿಸಿಕೊಂಡರೆ ಸಾಕು ಜೀವನ ಶ್ರೇಷ್ಠವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ವಿಚಾರ ಜೀವಂತ: ಗುರುಮಠಕಲ್ ಖಾಸಾಮಠದ ಶಾಂತವೀರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಬಸವ ಜಯಂತಿ ಆಚರಣೆ ಮೂಲಕ ಬಸವಣ್ಣನವರನ್ನು ನೆನಪಿಸಿಕೊಳ್ಳುವುದು, ಆ ಮೂಲಕ ಅವರ ವಿಚಾರಗಳನ್ನು ಜೀವಂತವಾಗಿಡುವ ಕಾಯಕ ನಿಜಕ್ಕೂ ಶ್ರೇಷ್ಠ ಎಂದು ಶ್ಲಾಘಿಸಿದರು.
ಸುದ್ದಿವಾಹಿನಿ ಛಾಯಾಗ್ರಾಹಕ ಗಿರೀಶ್ ಇಂಡಿ, ಪತ್ರಕರ್ತ ಸಿ.ಎಂ. ಪಟ್ಟೆದಾರ್, ಪಿಯುನಲ್ಲಿ ಹೆಚ್ಚು ಅಂಕ ಗಳಿಸಿದ ಭವಾನಿ ಆರ್. ಶೀಲವಂತ್ ಹಾಗೂ ಸಿಪಿಐ ಶಂಕರಗೌಡ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು.
--