ಮರಾಠಿಯಲ್ಲಿ ಪ್ರಮಾಣ: ಶಾಸಕರ ಪ್ರತಿಕೃತಿ ದಹನ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಮೇ 30
ನೂತನ ಶಾಸಕರಾಗಿ ಆಯ್ಕೆಯಾದ ಬೆಳಗಾವಿ ಶಾಸಕರು ಮರಾಠಿ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದನ್ನು ಖಂಡಿಸಿ ಜೈ ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಗುರುವಾರ ನಗರದ ಸರ್ದಾರ ವಲ್ಲಭಬಾಯಿ ಪಟೇಲ್ ವೃತ್ತದಲ್ಲಿ ಶಾಸಕರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಬೆಳಗಾವಿ ಶಾಸಕರಾದ ಸಂಭಾಜಿ ಪಾಟೀಲ್ ಮತ್ತು ಅರವಿಂದ ಪಾಟೀಲ್ ಅವರು ಕನ್ನಡ ಭಾಷಿಕರ ಮತಗಳಿಂದ ಚುನಾಯಿತರಾಗಿ ಕನ್ನಡ ಭಾಷೆಗೆ ದ್ರೋಹ ಮಾಡಿದ್ದಾರೆ ಎಂದು ವೇದಿಕೆ ಉತ್ತರ ಕರ್ನಾಟಕದ ಅಧ್ಯಕ್ಷ ಶರಣು ಗದ್ದುಗೆ ಆರೋಪಿಸಿದರು.
ಶಾಸಕರ ವರ್ತನೆ ನಾಚಿಕೆಗೇಡು: ಮರಾಠಿ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದರೂ ಅದನ್ನು ಕಂಡು ಸುಮ್ಮನೆ ಕುಳಿತ ಕನ್ನಡ ಭಾಷೆಯ ಶಾಸಕರ ವರ್ತನೆ ನಾಚಿಕೆಗೇಡಿತನವಾಗಿದೆ. ಕನ್ನಡ ಭಾಷೆಗೆ ದ್ರೋಹ ಮಾಡಿದ ಮರಾಠಿ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಶಾಸಕರನ್ನು ಕೂಡಲೇ ವಜಾಗೊಳಿಸಬೇಕು ಮತ್ತು ತಕ್ಷಣ ಕನ್ನಡಿಗರಿಗೆ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದರು.
ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನ್ನಡ ಭಾಷೆ, ಸಂಸ್ಕೃತಿ, ಪರಂಪರೆ, ಗಡಿ, ಜಲ ಸೇರಿದಂತೆ ಅಖಂಡ ಕರ್ನಾಟಕಕ್ಕೆ ಧಕ್ಕೆ ಬರದಂತೆ, ಯಾವುದಕ್ಕೂ ರಾಜಿಯಾಗದೆ ಸರ್ಕಾರವನ್ನು ಸಮೃದ್ಧಿಯತ್ತ ಕೊಂಡ್ಯೊಯಬೇಕು ಎಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ರಾಜ್ಯ ಉಪಾಧ್ಯಕ್ಷ ಮಂಜುನಾಥ ಹಾಗರಗಿ, ಜಿಲ್ಲಾ ಕಾರ್ಯಾಧ್ಯಕ್ಷ ಸಚಿನ್ ಫರಹತಾಬಾದ್, ಮುಖಂಡರಾದ ಜಗನ್ನಾಥ ಪಟ್ಟಣಶೆಟ್ಟಿ, ಕಾಶಿನಾತ ಮಾಲಗೆ, ಶ್ರೀಕಾಂತ ಜಾಧವ, ಬಾಬುರಾವ ಚಿಂಚನಸೂರ, ಅಶೋಕ ಬಾಣಿಕರ್, ಲಕ್ಷ್ಮೀಕಾಂತ, ಸತೀಶ, ಶಿವು ಹಾಗರಗ, ಖ್ಯಾಮಲಿಂಗ್ ಪಾಟೀಲ್, ಅಲೀಂ ಖಾನ್, ಚನ್ನು ಮರಬ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.