ಶಾಲೆಗೆ ಹೋಗೋಣ ಬಾರಾ
ಯಾದಗಿರಿ: ಬೇಸಿಗೆ ರಜೆ ಮುಗಿದಿದ್ದು, ಮೇ 31ರಂದು ಶಾಲೆಗಳು ಪುನಾರಂಭಗೊಳ್ಳಲಿವೆ. ಜಿಲ್ಲೆಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಮಕ್ಕಳಿಗೆ ಅಗತ್ಯವಿರುವ ಪುಸ್ತಕಗಳ ಪೈಕಿ ಶೇ.90ರಷ್ಟು ಪೂರೈಕೆಯಾಗಿದ್ದು, ಸಮವಸ್ತ್ರಗಳನ್ನು ರಜೆಗಿಂತ ಮೊದಲೇ ಮಕ್ಕಳಿಗೆ ನೀಡಲಾಗಿದೆ. ಈ ಶೈಕ್ಷಣಿಕ ವರ್ಷದ ಮೊದಲ ದಿನವನ್ನು ಹಬ್ಬದಂತೆ ಆಚರಿಸಲು ನಿರ್ಧರಿಸಲಾಗಿದೆ. ಆದ್ದರಿಂದ ಮಕ್ಕಳೇ ಶುಕ್ರವಾರವೇ ಶಾಲೆಗೆ ಬನ್ನಿ.
ಪ್ರಾರಂಭೋತ್ಸವ: ಮೇ 31ರಿಂದಲೇ ವಿದ್ಯಾರ್ಥಿಗಳಿಗೆ ತರಗತಿ ಆರಂಭವಾಗಲಿದೆ. ಶೈಕ್ಷಣಿಕ ವರ್ಷದ ಸ್ವಾಗತಕ್ಕೆ ಶಿಕ್ಷಣ ಇಲಾಖೆ ಸಂಪೂರ್ಣ ಸಜ್ಜಾಗಿದೆ. ಅದಕ್ಕಾಗಿ ಜಿಲ್ಲೆಯ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಅಗತ್ಯ ಪಠ್ಯಪುಸ್ತಕ ಸಂಗ್ರಹಿಸಿಕೊಂಡಿದೆ. ಈಗಾಗಲೇ ಜಿಲ್ಲೆಯ ಎಲ್ಲ ಬಿಇಒಗಳ ಮೂಲಕ ಪುಸ್ತಕಗಳನ್ನು ಆಯಾ ಶಾಲೆಗೆ ಸರಬರಾಜು ಮಾಡುವ ಪ್ರಕ್ರಿಯೆಯೂ ನಡೆದಿದೆ. ಸಮವಸ್ತ್ರ ಕೂಡ ಪೂರೈಕೆಯಾಗಿದ್ದು, ಮಕ್ಕಳಿಗೆ ಶಾಲಾ ಪ್ರಾರಂಭೋತ್ಸವದ ದಿನವೇ ವಿತರಿಸಲಾಗುತ್ತಿದೆ. 1ರಿಂದ 10ನೇ ತರಗತಿವರೆಗಿನ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ ಮಾಡಲಾಗುತ್ತಿದ್ದು, ಜಿಲ್ಲೆಯ ಬೇಡಿಕೆಯ ಶೇ.90ರಷ್ಟು ಪುಸ್ತಕಗಳು ಈಗಾಗಲೇ ಸರ್ಕಾರದಿಂದ ಪೂರೈಕೆಯಾಗಿದ್ದು, ಇನ್ನು ಕೆಲವು ದಿನಗಳಲ್ಲಿ ಪೂರ್ಣಪ್ರಮಾಣದಲ್ಲಿ ಸರಬರಾಜು ಆಗಲಿದೆ.
ಪುಸ್ತಕ ಪೂರೈಕೆ: ಪ್ರಸಕ್ತ ಶೈಕ್ಷಣಿಕ ಸಾಲಿಗಾಗಿ ಉಚಿತ ವಿತರಣೆಗಾಗಿ 11.32 ಲಕ್ಷ ಪುಸ್ತಕಗಳ ಬೇಡಿಕೆ ಸಲ್ಲಿಸಲಾಗಿತ್ತು. ಅದರಲ್ಲಿ ಈಗಾಗಲೇ 7.58 ಲಕ್ಷ ಪುಸ್ತಕಗಳು ಪೂರೈಕೆಯಾಗಿದ್ದು, ಶೇ.90.5ರಷ್ಟು ಉಚಿತ ವಿತರಣೆ ಪುಸ್ತಕಗಳು ಜಿಲ್ಲೆಯ ಶಾಲೆಗಳನ್ನು ತಲುಪಿವೆ. ಯಾದಗಿರಿ ತಾಲೂಕಿಗೆ 3.54 ಲಕ್ಷ ಪುಸ್ತಕಗಳ ಬೇಡಿಕೆಯಿದ್ದು, 2.27 ಲಕ್ಷ ಪುಸ್ತಕಗಳು ಪೂರೈಕೆಯಾಗಿವೆ. ಶಹಾಪುರ ತಾಲೂಕಿಗೆ 3.67 ಲಕ್ಷ ಪುಸ್ತಕ ಬೇಡಿಕೆ ಸಲ್ಲಿಸಲಾಗಿದ್ದು, ಈ ಪೈಕಿ 2.39 ಲಕ್ಷ ಪುಸ್ತಕಗಳು ಸರಬರಾಜು ಆಗಿವೆ. ಸುರಪುರ ತಾಲೂಕಿಗೆ 4.10 ಲಕ್ಷ ಪುಸ್ತಕ ಬೇಡಿಕೆ ಸಲ್ಲಿಕೆಯಾಗಿದ್ದು, ಅದರಲ್ಲಿ 2.92 ಲಕ್ಷ ಪುಸ್ತಕ ಬಂದಿವೆ. ಈಗಾಗಲೇ ಎಲ್ಲ ಶಾಲೆಗಳಿಗೆ ಪುಸ್ತಕ ಸರಬರಾಜು ಮಾಡಲಾಗಿದೆ. ಈ ಬಾರಿ 6 ಮ್ತು 9ನೇ ತರಗತಿ ಪಠ್ಯಪುಸ್ತಕ ಬದಗಲಾಗಿರುವ ಹಿನ್ನೆಲೆಯಲ್ಲಿ ಕೆಲ ಶೀರ್ಷಿಕೆಗಳು ಜಿಲ್ಲೆಗೆ ಪೂರೈಕೆಯಾಗಿಲ್ಲ. ಇನ್ನು ಕೆಲ ದಿನಗಳಲ್ಲಿ ಪೂರ್ಣ ಪ್ರಮಾಣದ ಪುಸ್ತಕಗಳು ಸರಬರಾಜಾಗಲಿವೆ ಎಂದು ಡಿಡಿಪಿಐ ರಾಮಾಂಜನೇಯ ತಿಳಿಸಿದ್ದಾರೆ.
ಸಮವಸ್ತ್ರವೂ ಬಂದಿದೆ: ಜಿಲ್ಲೆಯ ಪ್ರಾಥಮಿಕ ಹಾಗೂ ಹೈಸ್ಕೂಲ್ಗಳ 1,88,986 ಮಕ್ಕಳಿಗೆ ಈಗಾಗಲೇ ಸರ್ಕಾರದಿಂದ ಸಮವಸ್ತ್ರ ಪೂರೈಕೆಯಾಗಿದೆ. ಈ ಶೈಕ್ಷಣಿಕ ಸಾಲಿನಲ್ಲಿ ಎಷ್ಟು ಮಕ್ಕಳು ಶಾಲೆಗೆ ಸೇರುತ್ತಾರೆ ಎನ್ನುವುದು ಮೊದಲೇ ಗೊತ್ತಾಗದ ಹಿನ್ನೆಲೆಯಲ್ಲಿ ಹೆಚ್ಚಿನ ಸಮವಸ್ತ್ರಗಳಿಗೆ ಬೇಡಿಕೆ ಸಲ್ಲಿಸಲಾಗಿತ್ತು. ಈ ಹೆಚ್ಚುವರಿ ಸಮವಸ್ತ್ರಗಳು ಬರಬೇಕಿದೆ. ಪ್ರತಿ ವಿದ್ಯಾರ್ಥಿಗೆ ಒಂದು ಜೊತೆ ಸಮವಸ್ತ್ರಗಳನ್ನು ನೀಡಲಾಗುತ್ತಿದೆ.
2013-14ನೇ ಸಾಲಿನ ಶೈಕ್ಷಣಿಕ ವರ್ಷ ಮೇ 31ರಿಂದಲೇ ಆರಂಭವಾಗಲಿದ್ದು, ತರಗತಿಗಳು ಅಂದೇ ಶುರುವಾಗಲಿದೆ. ಪಾಲಕರು ಮಕ್ಕಳನ್ನು ಆರಂಭದ ದಿನದಿಂದಲೇ ಶಾಲೆಗೆ ಕಳುಹಿಸಬೇಕು. ಫಲಿತಾಂಶದಲ್ಲಿ ಕೊನೆಯ ಸ್ಥಾನ ಪಡೆದು ಶೈಕ್ಷಣಿಕ ಸೌಲಭ್ಯಗಳ ಕಡೆ ಬೊಟ್ಟು ತೋರಿಸುತ್ತ ಕಾಲಹರಣ ಮಾಡದೆ ಈ ಬಾರಿಯಾದರೂ ಅದಕ್ಕೊಂದು ಮಾರ್ಗೋಪಾಯ ಕಂಡುಕೊಳ್ಳಬೇಕಿದೆ. ಇದಕ್ಕೆ ಶಿಕ್ಷಕರೊಂದಿಗೆ ಪಾಲಕರು ಹಾಗೂ ಇಡಿ ಸಮಾಜವೇ ಕೈಜೋಡಿಸಬೇಕಿದೆ. ಶೈಕ್ಷಣಿಕ ವರ್ಷದ ಆರಂಭದಿಂದಲೇ ಗುರಿ ನಿಗದಿ ಮಾಡಿಕೊಂಡು ಸಾಧಿಸುವತ್ತ ಶಿಕ್ಷಣ ಇಲಾಖೆ ಶ್ರಮಿಸಬೇಕಿದೆ. ಕೇವಲ ಸರ್ಕಾರ ಹಾಗೂ ಶಿಕ್ಷಕರಿಂದಲೇ ಶೈಕ್ಷಣಿಕ ಸುಧಾರಣೆ ಅಸಾಧ್ಯ ಎನ್ನುವುದನ್ನು ಅರಿತುಕೊಳ್ಳಬೇಕು. ಸಮುದಾಯದ ಪಾತ್ರವೂ ಈ ನಿಟ್ಟಿನಲ್ಲಿ ಅಗತ್ಯವಾಗಿದೆ. ಪಾಲಕರು ತಮ್ಮ ಮಕ್ಕಳನ್ನು ನಿರಂತರವಾಗಿ ಶಾಲೆಗೆ ಕಳುಹಿಸಿ, ಜಿಲ್ಲೆಯ ಶೈಕ್ಷಣಿಕ ಕ್ಷೇತ್ರದ ಸುಧಾರಣೆ ಕೈಜೋಡಿಸಬೇಕಿದೆ. ಶಾಲಾ ಪ್ರಾರಂಭೋತ್ಸವದಲ್ಲಿ ಮಕ್ಕಳೊಂದಿಗೆ ಪಾಲಕರೂ ಪಾಲ್ಗೊಂಡು ಹಬ್ಬದ ವಾತಾವರಣ ನಿರ್ಮಿಸಬೇಕಿದೆ. ಶಾಲೆ ಎನ್ನುವುದು ಮಕ್ಕಳಿಗೆ ಸಂತಸ ತರುವ ಸ್ಥಳವಾಗಿ ಮಾರ್ಪಡಬೇಕಿದೆ.