ಸುಪ್ತ ಪ್ರತಿಭೆ ಹೊರತರಲು ಬೇಸಿಗೆ ಶಿಬಿರ ಸಹಕಾರಿ: ರೆಜ್ಜಿ
ಕನ್ನಡಪ್ರಭ ವಾರ್ತೆ, ಯಾದಗಿರಿ, ಮೇ 30
ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರತೆಗೆದು ಸುಂದರವಾದ ವಿಗ್ರಹವನ್ನಾಗಿ ರೂಪಿಸಲು ಬೇಸಿಗೆ ಶಿಬಿರಗಳು ವರದಾನ ಎಂದು ಡಾನ್ ಬಾಸ್ಕೊ ಸಮಾಜ ಸೇವಾ ಕೇಂದ್ರದ ನಿರ್ದೇಶಕ ಫಾದರ್ ರೆಜ್ಜಿ ಜಾಕೋಬ್ ಹೇಳಿದರು.
ತಾಲೂಕಿನ ಹಳಿಗೇರಾ ಗ್ರಾಮದ ಡಾನ್ ಬಾಸ್ಕೊ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬಾಲ ಭವನ ಸೊಸೈಟಿ ಬೆಂಗಳೂರು ಇವರ ಆಶ್ರಯದಲ್ಲಿ ಡಾನ್ ಬಾಸ್ಕೋ ಸಮಾಜ ಸೇವಾ ಕೇಂದ್ರದ ನೇತೃತ್ವದಲ್ಲಿ ಬೇಸಿಗೆ ತರಬೇತಿ ಶಿಬಿರ ಬೆಳಗುವ ದೀಪಗಳು ಸೀಸನ್-2 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರತಿಭೆ ಗುರುತಿಸಲು ಸಹಕಾರಿ: ಮಕ್ಕಳಲ್ಲಿ ನಾಡು- ನುಡಿ ಮತ್ತು ಸಂಸ್ಕೃತಿಯ ಬಗ್ಗೆ ಅಭಿಮಾನ ಮೂಡಿಸಿ ಸಂಸ್ಕಾರ ಮತ್ತು ಸೇವಾ ಮನೋಭಾವನೆ ತುಂಬಲು ಶಿಕ್ಷಣ ಅವಶ್ಯ. ಅದರಲ್ಲಿ ಸ್ವಲ್ಪ ಇಂಗ್ಲಿಷ್ ಜ್ಞಾನವೂ ಬೇಕು. ಶಿಬಿರದಲ್ಲಿ ಮಕ್ಕಳಿಗೆ ಇಂಗ್ಲಿಷ್ ಕಲಿಕೆ ಬಗ್ಗೆ ತಿಳಿವಳಿಕೆ ನೀಡಲಾಗುತ್ತಿದೆ. ಜತೆಗೆ ಗ್ರಾಮೀಣ ಪ್ರದೇಶದ ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಲು ಈ ಶಿಬಿರ ತುಂಬಾ ಅವಶ್ಯವಾಗಿದೆ ಎಂದರು.
ಸೇವಾ ಮನೋಭಾವ ಬೆಳೆಸಿಕೊಳ್ಳಿ: ಬಿಇಡಿ ಕಾಲೇಜಿನ ಪ್ರಾಂಶುಪಾಲ ಫಾ. ಜೋಷಿ ಮಾತನಾಡಿ, ಮಕ್ಕಳು ಬಾಲ್ಯದಿಂದಲೇ ಶಿಸ್ತು, ಸಂಯಮ ಮತ್ತು ಸಮಾಜಮುಖಿ ಮನೋಭಾವನೆಯನ್ನು ಅಳವಡಿಸಿಕೊಂಡು ಮುನ್ನಡೆಯಲು ಮಕ್ಕಳ ಬೇಸಿಗೆ ಶಿಬಿರವು ಸಹಕಾರಿಯಾಗಿದೆ. ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರಚೆಲ್ಲಲು ಸೂಕ್ತವಾದ ವೇದಿಕೆಯಾಗಿದೆ. ಮಕ್ಕಳು ನಾಡು- ನುಡಿಯ ಉಳಿವಿಗೆ ಹೋರಾಟ ಮಾಡುವ ಮನೋಭಾವನೆ ಬೆಳೆಸಿಕೊಂಡು ಪರೋಪಕಾರ ಮತ್ತು ಸೇವಾ ಮನೋಭಾವ ಅಳವಡಿಸಿಕೊಂಡು ಮುನ್ನಡೆದು ಶ್ರೇಷ್ಠ ನಾಗರಿಕರಾಗಬೇಕೆಂದು ಸಲಹೆ ನೀಡಿದರು.
ಗ್ರಾಮೀಣ ಮಕ್ಕಳಲ್ಲಿ ಅಗಾಧ ಪ್ರತಿಭೆ: ಹಳಿಗೇರಾ ಶಾಲೆಯ ಮುಖ್ಯ ಗುರುಗಳಾದ ವಿಶ್ವನಾಥ ಕರ್ಲಿ ಮಾತನಾಡಿ, ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಅಗಾಧ ಪ್ರತಿಭೆ ಅಡಗಿರುತ್ತದೆ. ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲು ಬೇಸಿಗೆ ಶಿಬಿರ ಅವಶ್ಯಕ. ಹಳಿಗೇರಾ ಗ್ರಾಮದಲ್ಲಿ ಡಾನ್ ಬಾಸ್ಕೊ ಸಮಾಜ ಸೇವಾ ಕೇಂದ್ರ ಹಮ್ಮಿಕೊಂಡಿರುವ ಈ ಶಿಬಿರದಿಂದ ಮಕ್ಕಳ ಜೀವನದಲ್ಲಿ ಬದಲಾವಣೆಯಾಗಲಿದೆ ಎಂದರು.
ಬಾಲಕಾರ್ಮಿಕ ವಿಶೇಷ ಶಾಲೆಯ ಮಕ್ಕಳು ಪ್ರಾರ್ಥನೆ ಹಾಡಿದರು. ಸಮಾಜ ಸೇವಕ ದೇವಿದ್ರಪ್ಪ ಸ್ವಾಗತಿಸಿದರು. ಶರಣಪ್ಪ ಕಾರ್ಯಕ್ರಮ ನಿರೂಪಿಸಿದರು. ಹಳಿಗೇರಾ ಉರ್ದು ಶಾಲೆಯ ಮುಖ್ಯ ಗುರುಗಳಾದ ಪಟೇಲ್, ನಿತೀನ್, ಅಂಥೋನಿ ಇದ್ದರು.
--