ಇಂದು ವಿಶ್ವ ಹಾಲಿನ ದಿನ
ಗುಲ್ಬರ್ಗ: ಗುಲ್ಬರ್ಗ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿಯು ಪ್ರತಿ ವರ್ಷದಂತೆ ಜೂ.1ರಂದು ವಿಶ್ವ ಹಾಲಿನ ದಿನಾಚರಣೆಯನ್ನು ಆಚರಿಸಲಿದೆ. ಇದರಂಗವಾಗಿ ಗುಲ್ಬರ್ಗ ಡೇರಿಯಿಂದ ಹಾಲು ವಿತರಣಾ ವಾಹನಗಳು ಹಾಗೂ ಗುಲ್ಬರ್ಗ- ಬೀದರ್ -ಯಾದಗಿರಿ ಹಾಲು ಒಕ್ಕೂಟದ ಅಧಿಕಾರಿಗಳು ಹಾಗೂ ಗುಲ್ಬರ್ಗ ಡೇರಿಯ ಸಿಬ್ಬಂದಿಗಳೊಂದಿಗೆ ನಗರದ ಗಂಜ, ಸೂಪರ್ ಮಾರ್ಕೆಟ್, ಮಿನಿ ವಿಧಾನಸೌಧ, ಸರ್ದಾರ ವಲ್ಲಭಬಾಯಿ ಪಟೇಲ್ ವೃತ್ತದಿಂದ ಐವಾನ-ಇ-ಶಾಹಿ, ನಿಷ್ಠಿ ಆಸ್ಪತ್ರೆ, ಏಶೀಯನ್ ಮಾಲ್ ಮುಖಾಂತರ ಸಂತ್ರಾಸವಾಡಿ, ಹಫ್ತಗುಂಬಜ, ನೆಹರು ಗಂಜ ಮಾರ್ಗವಾಗಿ ಜಾಥಾ ಕಾರ್ಯಕ್ರಮ ಆಯೋಜಿಸಲಾಗಿದೆ. ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ ಬಿರಾದಾರ ಜಾಥಾಕ್ಕೆ ಚಾಲನೆ, ಮಲ್ಲಿಕಾರ್ಜುನ ಬುಕ್ಕಾ ನೇತೃತ್ವ ವಹಿಸುವರು.
ಇಂದು ಸಂಪರ್ಕ ಸಭೆ
ಚಿಂಚೋಳಿ: ತಾಲೂಕಿನ ಐನಾಪುರ ವಲಯದ ಚಂದನಕೇರಾ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಕೊಟಗಾ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಜೂನ್ 1ರಂದು ಬೆ.10ಕ್ಕೆ ಜನ ಸಂಪರ್ಕ ಸಭೆ ನಡೆಯಲಿದೆ ಎಂದು ತಹಸೀಲ್ದಾರ್ ಜಗನ್ನಾಥರೆಡ್ಡಿ ಧರ್ಮರೆಡ್ಡಿ ತಿಳಿಸಿದ್ದಾರೆ. ಶಾಸಕ ಡಾ. ಉಮೇಶ ಜಾಧವ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ ಐನಾಪುರ ವಲಯದ ಗ್ರಾಮಸ್ಥರು ತಮ್ಮ ಗ್ರಾಮಗಳ ಸಮಸ್ಯೆ ಮತ್ತು ಕುಂದುಕೊರತೆಗಳನ್ನು ಲಿಖಿತ ರೂಪದಲ್ಲಿ ಸಲ್ಲಿಸಬಹುದು.
ನಾಳೆ ವಿದ್ಯುತ್ ವ್ಯತ್ಯಯ
ಗುಲ್ಬರ್ಗ: 11 ಕೆ.ವಿ. ಶರಣನಗರ ಫೀಡರ್ ಮೇಲೆ ತುರ್ತು ದುರಸ್ತಿ ಕಾರ್ಯ ಕೈಗೊಳ್ಳುವ ಪ್ರಯುಕ್ತ ಜೂ. 2ರಂದು ಬೆ.11ರಿಂದ ಮ.2ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಜೆಸ್ಕಾಂನೊಂದಿಗೆ ಸಹಕರಿಸಲು ಕೋರಲಾಗಿದೆ. ಬಡಾವಣೆಗಳ ವಿವರ- ಲಾಲಗೇರಿಕ್ರಾಸ್, ಗೋವಾ ಹೋಟೆಲ್, ಎಂಎಂ ಪಂಡಿತರಂಗಮಂದಿರ, ಎಸ್ಪಿ ಕಚೇರಿ, ಎನ್ವಿ ಶಾಲೆ, ಶರಣನಗರ, ಗಣೇಶಮಂದಿರ ಬಡಾವಣೆ, ಕಳವಿಬಜಾರ, ವೀರಶೈವ ಕಲ್ಯಾಣ ಮಂಟಪ, ಕ.ವಿ.ಪ್ರ.ನಿ.ನಿ. ಕಚೇರಿ, ಕೆಎಸ್ಸಾರ್ಟಿಸಿ ಗೆಸ್ಟ್ ಹೌಸ್, ಸಂಗಮೇಶ್ವರ ಕಾಲೋನಿ, ಎಐಆರ್, ಜಗತ್, ಅನ್ನಪೂರ್ಣ ಆಸ್ಪತ್ರೆ, ಆದಿತ್ಯ ಹೋಟೆಲ್, ಆದಾಯ ತೆರಿಗೆ ಪ್ರಧಾನ ಕಚೇರಿ, ಪಿಎಲ್ಡಿ ಬ್ಯಾಂಕ್.
ಶಿವಶರಣಪ್ಪ ನಿಧನ
ಗುಲ್ಬರ್ಗ: ನಗರದ ಖ್ಯಾತ ಕಲಾ ಪೋಷಕರಾಗಿದ್ದ ಶಿವಶರಣಪ್ಪ ಉಪ್ಪಿನ(67) ಶುಕ್ರವಾರ ನಿಧನರಾದರು. ಮೃತರು ಅಪಾರ ಕಲಾಭಿಮಾನಿಗಳನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಗುಲ್ಬರ್ಗದ ಅವರ ಉಪ್ಪಿನ ತೋಟದಲ್ಲಿ ನೆರವೇರಿತು. ನಗರದ ಅವರ ಉಪ್ಪಿನ ತೋಟದಲ್ಲಿ ಕಲಬುರ್ಗಿ ಕಂಪು ಎಂಬ ಕಾರ್ಯಕ್ರಮ ನಡೆಸಲು ಅವಕಾಶ ಮಾಡಿಕೊಡುವ ಮೂಲಕ ಅವರು ದೊಡ್ಡ ಕಲಾಪೋಷಕರೆಂದು ಸಾಬೀತುಪಡಿಸಿಕೊಂಡರು. ನಗರದ ಕಲೆ, ಸಾಹಿತ್ಯ ಕ್ಷೇತ್ರದ ಬೆಳವಣಿಗೆಗೆ ಶ್ರಮಿಸಿದ್ದರು. ರಾಜ್ಯಸಭಾ ಸದಸ್ಯ ಡಾ. ಬಸವರಾಜ ಪಾಟೀಲ್ ಸೇಡಂ, ಕಲಬುರ್ಗಿ ಕಂಪು ತಂಡ, ಕಲಾಭಿಮಾನಿಗಳು, ಸಾಹಿತಿಗಳು ಸಂತಾಪ ಸೂಚಿಸಿದ್ದಾರೆ.