ಉಜನಿ ಡ್ಯಾಂನಿಂದ ಭೀಮಾಕ್ಕೆ ನೀರು ಬಿಡುವಂತೆ ಆಗ್ರಹಿಸಿ ಕರವೇ ರಸ್ತೆ ತಡೆ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಮೇ 31
ಭೀಮಾ ನದಿ ಸಂಪೂರ್ಣ ಬತ್ತಿರುವುದರಿಂದ ಅಫಜಲ್ಪುರ ಪಟ್ಟಣವೂ ಸೇರಿದಂತೆ ನದಿ ತೀರದ ಗ್ರಾಮಗಳಲ್ಲಿ ಎದುರಾಗಿರುವ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಮಹಾರಾಷ್ಟ್ರದ ಉಜನಿ ಜಲಾಶಯದಿಂದ ನೀರು ಬಿಡುವಂತೆ ಒತ್ತಡ ಹೇರಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯಿಸಿ ಇಲ್ಲಿನ ದೇವಣಗಾಂವ್ ಸೇತುವೆ ಮೇಲೆ ರಸ್ತೆ ತಡೆ ಚಳವಳಿ ನಡೆಸಿತು.
ನದಿಯ ಮೇಲ್ಭಾಗದ ಮಹಾರಾಷ್ಟ್ರ ತನ್ನ ಎಲ್ಲ ಬ್ಯಾರೇಜ್ಗಳನ್ನು ಭರ್ತಿ ಮಾಡಿಕೊಂಡಿದೆ. ಹೀಗಾಗಿ ನದಿಯ ಕರ್ನಾಟಕ ಪಾತ್ರ ಸಂಪೂರ್ಣ ಬತ್ತಿ ಹೋಗಿ ನದಿ ತೀರದ ಜನರು ಕೊಡ ನೀರಿಗಾಗಿ ಪರದಾಡುತ್ತಿದ್ದಾರೆ. ಹೀಗಾಗಿ ಮಹಾರಾಷ್ಟ್ರ ಉಜನಿ ಜಲಾಶಯದಿಂದ ನದಿಗೆ ನೀರು ಹರಿಸುವುದು ಅಗತ್ಯವಾಗಿದೆ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಬಜಾವತ್ ತೀರ್ಪಿನಂತೆ ಭೀಮಾ ನದಿಯಲ್ಲಿ ಕರ್ನಾಟಕಕ್ಕೆ 15 ಟಿಎಂಸಿ ಲಭ್ಯವಾಗಿದೆ. ಆದರೆ, ಮಹಾರಾಷ್ಟ್ರದ ಅಕ್ರಮ ಯೋಜನೆಗಳಿಂದಾಗಿ ಕರ್ನಾಟಕದಲ್ಲಿ ಭೀಮಾ ನದಿಯಲ್ಲಿ ನೀರು ಹರಿಯುತ್ತಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಕೂಡಲೇ ಮಹಾರಾಷ್ಟ್ರ ಉಜನಿ ಜಲಾಶಯದಿಂದ ನೀರು ಬಿಡಿಸಲು ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಮತ್ತೊಂದು ಹಂತದ ಹೋರಾಟ ನಡೆಸುವುದು ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.
ವೇದಿಕೆಯ ತಾಲೂಕು ಘಟಕದ ಅಧ್ಯಕ್ಷ ಶಿವಕುಮಾರ ನಾಟೀಕಾರ್, ಸಿಂದಗಿ ಘಟಕದ ಅಧ್ಯಕ್ಷ ತನ್ವೀರ್ ಭೈರಾಮಡಗಿ ಹಾಗೂ ಉತ್ತರ ಕರ್ನಾಟಕ ವಲಯ ಅಧ್ಯಕ್ಷ ಸಂತೋಷ ಪಾಟೀಲ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಕರವೇ ಮುಖಂಡ ಮಲ್ಲು ಆಲಮೇಲ, ಅವಣ್ಣ ಲಾಳಸಂಗಿ, ಸೈಬಣ್ಣ ಹಾದಿಮನಿ, ಶ್ರೀಕಾಂತ ಬಿಜಾಪುರ ಸೇರಿದಂತೆ ಅಫಜಲ್ಪುರ ಹಾಗೂ ಸಿಂದಗಿ ತಾಲೂಕಿನ ರೈತರು ಇದ್ದರು.