ಕುಡಿವ ನೀರಿಗಾಗಿ ಗ್ರಾಪಂ ಕಚೇರಿ ಮುತ್ತಿಗೆ
ಕ.ಪ್ರ. ವಾರ್ತೆ, ಯಾದಗಿರಿ, ಮೇ 31
ಕುಡಿವ ನೀರಿಗಾಗಿ ಆಗ್ರಹಿಸಿ ಶಹಾಪುರ ತಾಲೂಕಿನ ವಡಗೇರಾದ ಆಶ್ರಯ ಬಡಾವಣೆ ಮಹಿಳೆಯರು ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಶುಕ್ರವಾರ ಪ್ರತಿಭಟನೆ ಮಾಡಿದರು.
ಕಳೆದ 15 ದಿನಗಳಿಂದ ಬಡಾವಣೆಗೆ ಕುಡಿವ ನೀರಿಲ್ಲದೆ ತೊಂದರೆ ಅನುಭವಿಸುತ್ತಿದ್ದೇವೆ. ಇದರ ಬಗ್ಗೆ ಅನೇಕ ಬಾರಿ ಪಂಚಾಯಿತಿ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರೂ ಪ್ರಯೋಜನವಾಗಿಲ್ಲ. ನಮ್ಮ ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿಗಳು ಬೇಕಾಗಿಲ್ಲ. ಆದಷ್ಟು ಶೀಘ್ರ ಸಮಸ್ಯೆ ಬಗೆಹರಿಸಬೇಕೆಂದು ಬಡಾವಣೆಯ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಿಗಳ ವರ್ತನೆಗೆ ಆಕ್ರೋಶ: ಕಳೆದ 15 ದಿನಗಳಿಂದ ಬಡಾವಣೆಗೆ ನೀರಿಲ್ಲದೆ ಸುಮಾರು ಒಂದು ಕಿಮೀ ದೂರದಲ್ಲಿರುವ ಬಾವಿಯಿಂದ ಕುಡಿವ ನೀರನ್ನು ತರುತ್ತಿದ್ದೇವೆ. ಬಡಾವಣೆಯಲ್ಲಿ ಇರುವ ಎರಡು ಬೋರ್ವೆಲ್ ಕೆಟ್ಟು ಹೋಗಿವೆ. ಕಂದಳ್ಳಿ ಬ್ಯಾರೇಜ್ನಿಂದ ಬರುವ ನೀರು ಸಹ ನಿಂತು ಹೋಗಿದೆ. ಇದರಿಂದಾಗಿ ಬೆಳಗ್ಗೆ ಎದ್ದು ಎಲ್ಲ ಕೆಲಸಗಳನ್ನು ಬಿಟ್ಟು ಕುಡಿಯುವ ನೀರಿಗಾಗಿ ಅಲೆಯುವಂತಾಗಿದೆ. ಆದರೂ ಪಂಚಾಯಿತಿ ಅಧಿಕಾರಿಗಳು ಇದಕ್ಕೂ ನಮಗೂ ಸಂಬಂಧವಿಲ್ಲವೆಂಬಂತೆ ವರ್ತಿಸುತ್ತಿದ್ದಾರೆ ಎಂದು ಪ್ರತಿಭಟನಾ ನಿರತ ಮಹಿಳೆಯರು ಆರೋಪಿಸಿದರು.
ಆಕ್ರೋಶಗೊಂಡ ಮಹಿಳೆಯರು ಪಂಚಾಯಿತಿ ಕಚೇರಿಗೆ ಬೀಗ ಹಾಕಲು ಮುಂದಾದರು. ಆಗ ಪಂಚಾಯಿತಿ ಅಧ್ಯಕ್ಷರು ಸ್ಥಳಕ್ಕೆ ಬಂದು ಸಮಸ್ಯೆಯನ್ನು ಆಲಿಸಿದರು. ಒಂದು ದಿನದ ಅವಕಾಶ ಕೊಡಿ, ನೀರಿನ ಸಮಸ್ಯೆಯನ್ನು ಬಗೆಹರಿಸುತ್ತೇನೆಂದು ಹೇಳಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದರು.
ಮೋಟಾರ್ ದುರಸ್ತಿಗೆ ಸೂಚನೆ: ಕಾರ್ಯದರ್ಶಿಗೆ ಕರೆ ಮಾಡಿ ಸಮಸ್ಯೆಯ ಬಗ್ಗೆ ಹೇಳಿದಾಗ, ಕಂದಳ್ಳಿ ಗ್ರಾಮಕ್ಕೆ ಹೋಗುವ ಮಾರ್ಗದಲ್ಲಿರುವ ನೀರು ಸರಬರಾಜು ಕೇಂದ್ರದ ಮೋಟಾರು ಸುಟ್ಟು ಹೋಗಿದೆ. ಆದ್ದರಿಂದ ಆಶ್ರಯ ಬಡಾವಣೆಗೆ ನೀರಿನ ಸಮಸ್ಯೆಯಾಗಿದೆ ಎಂದು ಹೇಳಿದರು. ಸುಟ್ಟಿರುವ ಮೋಟಾರ್ ದುರಸ್ತಿ ಮಾಡಿ ಕುಡಿವ ನೀರು ಸರಬರಾಜು ಮಾಡುವಂತೆ ಅಧ್ಯಕ್ಷರು ಸೂಚಿಸಿದರು. ಬಡಾವಣೆಯ ಮಹಿಳೆಯರಾದ ಅಹ್ಮದಿ ಬೇಗಂ, ಯಂಕಮ್ಮ, ಫಿರೋಜಾ ಬೇಗಂ, ಮಹಾದೇವಮ್ಮ, ತಾಯಮ್ಮ, ರಿಯಾನಾ, ಸೈದಮ್ಮ, ಸಿದ್ದಮ್ಮ ಸೇರಿದಂತೆ ನೂರಾರು ಮಹಿಳೆಯರು ಇದ್ದರು.