ಕೋಟ್ಯಂತರ ಹಣ ದುರ್ಬಳಕೆ
ಕನ್ನಡಪ್ರಭ ವಾರ್ತೆ, ಆಳಂದ, ಮೇ 31
ಆಳಂದ ಪಟ್ಟಣದ ಸ್ಟೇಟ್ ಬ್ಯಾಂಕ್ ಆಫ್ ಹೈದ್ರಾಬಾದ್ ಶಾಖೆಯ ವ್ಯವಸ್ಥಾಪಕ ಬಿ. ವೆಂಕಟರಾಮರಾಜು (39) ಅವರು ಕಳೆದ ಮೂರ್ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದು, ಅವರು ಆಂಧ್ರದ ಜಹಿರಾದಾಬದ್ ಲಾಡ್ಜ್ಮೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.
ನೆರೆಯ ಆಂಧ್ರದ ಗುಂಟೂರು ಜಿಲ್ಲೆಯ ಜಹಿರಾಬಾದ್ನ ಲಾಡ್ಜ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆ ಶವ ಬಿ. ವೆಂಕಟರಾಮರಾಜು ಅವರದ್ದೇ ಎಂದು ಬಲ್ಲ ಮೂಲಗಳು ಖಚಿತಪಡಿಸಿವೆ.
ಪ್ರಮುಖ ವ್ಯವಹಾರಗಳು ಸ್ಥಗಿತ: ಎಸ್ಬಿಎಚ್ ಬ್ಯಾಂಕಿನಲ್ಲಿ ಕಂಪ್ಯೂಟರ್ ಮೂಲಕ ಕೋಟ್ಯಾಂತರ ರು.ಗಳ ಅವ್ಯವಹಾರ ನಡೆಸಿದ್ದರಿಂದ ಮೇಲಾಧಿಕಾರಿಗಳ ತನಿಖಾ ತಂಡವು ಶಾಖೆಗೆ ಆಗಮಿಸುತ್ತಿರುವುದು ಖಚಿತ ಪಡಿಸಿಕೊಂಡು ವ್ಯವಸ್ಥಾಪಕ ಬಿ. ವೆಂಕಟರಾಮರಾಜು ತಮ್ಮ ಊರಾದ ಜಹಿರಾಬಾದ್ಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಈಗಾಗಲೇ ಬ್ಯಾಂಕಿನ ಪ್ರಮುಖ ವ್ಯವಹಾರಗಳು ಸ್ಥಗಿತಗೊಂಡಿವೆ. ಬ್ಯಾಂಕಿನ ಹಿರಿಯ ಅಧಿಕಾರಿಗಳು ಬ್ಯಾಂಕಿನಲ್ಲಿನ ಎಲ್ಲ ಕಡತಗಳನ್ನು ಪರಿಶೀಲಿಸುತ್ತಿದ್ದಾರೆ.
ಎಸ್ಬಿಎಚ್ ಬ್ಯಾಂಕ್ ವ್ಯವಸ್ಥಾಪಕ ಬಿ. ವೆಂಕಟರಾಮರಾಜು ಅವರು ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಬ್ಯಾಂಕಿನ ಅಧಿಕಾರಿಗಳು ಏನನ್ನೂ ಹೇಳುತ್ತಿಲ್ಲ. ಅಲ್ಲದೇ ಬ್ಯಾಂಕ್ ವ್ಯವಸ್ಥಾಪಕ ಅವರು ನಾಪತ್ತೆಯಾದ ಕುರಿತಾಗಲಿ, ಆತ್ಮಹತ್ಯೆ ಮಾಡಿಕೊಂಡ ಕುರಿತಾಗಲಿ ಪ್ರಕರಣ ದಾಖಲಾದ ಬಗ್ಗೆಯೂ ವರದಿಯಾಗಿಲ್ಲ.
ಹಿರಿಯ ಅಧಿಕಾರಿಗಳು ಗಪ್ಚಿಪ್: ಆದಾಗ್ಯೂ, ಬಿ. ವೆಂಕಟರಾಮರಾಜು ಅವರು ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಬ್ಯಾಂಕಿನ ಹಿರಿಯ ಅಧಿಕಾರಿಗಳು ಮೌಖಿಕವಾಗಿ ಒಪ್ಪಿಕೊಳ್ಳುತ್ತಿದ್ದು, ಅವರು ಯಾಕೆ ಆತ್ಮಹತ್ಯೆ ಮಾಡಿಕೊಂಡರು, ಎಷ್ಟು ಅವ್ಯವಹಾರ ನಡೆಸಿದ್ದಾರೆ. ಇತ್ಯಾದಿ ಪ್ರಶ್ನೆಗಳಿಗೆ ಮಾತ್ರ ಹಿರಿಯ ಅಧಿಕಾರಿಗಳು ಉತ್ತರ ನೀಡುತ್ತಿಲ್ಲ.
ಆಳಂದನ ರೇವಣಸಿದ್ಧೇಶ್ವರ ಬಡಾವಣೆಯ ಮನೆಯೊಂದರಲ್ಲಿ ಬಾಡಿಗೆ ಹೊಂದಿರುವ ವೆಂಕಟರಾಮರಾಜು ಅವರು ಜಹಿರಾಬಾದಿಗೆ ಹೋಗಿ ಆತ್ಮಹತ್ಯೆಗೆ ಶರಣಾದ ಕುರಿತು ಅಲ್ಲಿಯ ಪೊಲೀಸರು ದೃಢಪಡಿಸಿದ್ದಾರೆ ಎನ್ನಲಾಗಿದೆ. ಹೆಚ್ಚಿನ ಮಾಹಿತಿಗೆ ಶಾಖಾ ಸಿಬ್ಬಂದಿಗೆ ಹಾಗೂ ಮನೆಯ ಮಾಲೀಕರಿಗೆ ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ.
ಆದರೆ, ವೆಂಕಟರಾಮರಾಜು ಮೃತಪಟ್ಟ ಮರುದಿನ ಪಟ್ಟಣದಲ್ಲಿ ಬಾಡಿಗೆ ಹೊಂದಿದ್ದ ಮನೆಬಾಗಿಲು ತೆರೆದುಕೊಂಡಿತ್ತು. ಯಾರೋ ಬಂದು ಸಾಮಗ್ರಿ ತೆಗೆದುಕೊಂಡು ಹೋಗಿರುವ ಕುರಿತು ಬಡಾವಣೆಯ ನಿವಾಸಿಗಳು ಮನೆಯ ಮಾಲೀಕರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
ಎಸ್ಬಿಎಚ್ ವ್ಯವಸ್ಥಾಪಕ ಆತ್ಮಹತ್ಯೆ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಮೇ 31
ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಹೈದ್ರಾಬಾದ್ನ ಆಳಂದ ಶಾಖೆಯಲ್ಲಿ ವ್ಯವಸ್ಥಾಪಕ ಆಗಿ ಸೇವೆ ಸಲ್ಲಿಸುತ್ತಿದ್ದ ಪಿ. ವೆಂಕಟರಾಮರಾಜು ಎಂಬುವರು ಆಂಧ್ರ ಪ್ರದೇಶದ ಜಹೀರಾಬಾದ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬ್ಯಾಂಕ್ಗೆ ಸಂಬಂಧಿಸಿದ ಹಣವನ್ನು ಅವರು ತೆಗೆದುಕೊಂಡು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದರು, ಅದು ಪೂರ್ಣವಾಗಿ ನಷ್ಟವಾಗಿದೆ ಎನ್ನಲಾಗಿದ್ದು, ಇದರಿಂದ ಮನನೊಂದು ಆಳಂದನಿಂದ ತೆರಳಿ ಸ್ವಂತ ಊರಾಗಿರುವ ಜಹೀರಾಬಾದ್ಗೆ ಹೋಗಿ ಅಲ್ಲಿನ ಲಾಡ್ಜ್ನ ಕೋಣೆಯೊಂದರಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ವ್ಯವಸ್ಥಾಪಕ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಬ್ಯಾಂಕ್ ಅಧಿಕಾರಿಗಳು ದೃಢಪಡಿಸಿದ್ದಾರೆ. ಆದರೆ ಕಾರಣ ಗೊತ್ತಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಎರಡು ದಿನಗಳ ಹಿಂದೇ ಆಂಧ್ರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಗುರುವಾರ ಗೊತ್ತಾಗಿದೆ.
ಬ್ಯಾಂಕ್ನ ಹಿರಿಯ ಅಧಿಕಾರಿಗಳ ತಂಡಮೊಂದು ಪರಿಶೀಲನೆ ನಡೆಸಲು ಆಳಂದಕ್ಕೆ ಆಗಮಿಸಿ ಬ್ಯಾಂಕ್ನಲ್ಲಿನ ದಾಖಲೆಗಳನ್ನು ಪರಿಶೀಲನೆ ನಡೆಸಿದೆ. ಆದರೆ, ಹಣ ಎಷ್ಟು ಪ್ರಮಾಣದಲ್ಲಿ ಬಳಕೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿಯನ್ನು ಯಾರೂ ನೀಡಲಿಲ್ಲ.