ಚಾಕುವಿನಿಂದ ತಿವಿದು ಹಲ್ಲೆ
ಗುಲ್ಬರ್ಗ: ಮದ್ಯ ಕುಡಿಸಲು ನಿರಾಕರಿಸಿರುವುದಕ್ಕೆ ವ್ಯಕ್ತಿಯೊಬ್ಬನಿಗೆ ಹಲ್ಲೆ ನಡೆಸಿ ಬ್ಲೇಡ್, ಚಾಕುವಿನಿಂದ ಕುತ್ತಿಗೆಗೆ ತಿವಿದು ಕೊಲೆಗೆ ಯತ್ನಿಸಿದ ಘಟನೆ ಗುರುವಾರ ಕೇಂದ್ರ ಬಸ್ ನಿಲ್ದಾಣದ ಬಳಿ ನಡೆದಿದೆ.
ಚಿಂಚೋಳಿ ತಾಲೂಕಿನ ವಜ್ಜರಗಾಂವ ಗ್ರಾಮದ ಶರಣಯ್ಯ ಮಠಪತಿ ಎಂಬಾತ ಗಾಯಗೊಂಡಿದ್ದಾನೆ. ಶರಣಯ್ಯ ಮಠಪತಿ ಮತ್ತು ಶರಣಪ್ಪ ಇಬ್ಬರು ನಗರದ ಕೇಂದ್ರ ಬಸ್ ನಿಲ್ದಾಣದಿಂದ ಗ್ರಾಮಕ್ಕೆ ಹೋಗುವ ಮುಂಚೆ ಬಸ್ ನಿಲ್ದಾಣ ಪಕ್ಕದಲ್ಲಿರುವ ಬಾರ್ವೊಂದರಲ್ಲಿ ಕುಡಿಯಲೆಂದು ಹೋದ ಸಂದರ್ಭದಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ಕರೆದು ಕುಡಿಸಲು ಒತ್ತಾಯಿಸಿದ್ದರು.
ಆಗ ಶರಣಯ್ಯ ಮಠಪತಿ ನಿರಾಕರಿಸಿದ್ದಕ್ಕೆ ಕುಪಿತಗೊಂಡ ಆ ಇಬ್ಬರು ವ್ಯಕ್ತಿಗಳು ಶರಣಯ್ಯನ ಮೇಲೆ ಹಲ್ಲೆ ನಡೆಸಿ ಬ್ಲೇಡ್ ಮತ್ತು ಚಾಕಿವಿನಿಂದ ಕುತ್ತಿಗೆಗೆ ತಿವಿದು ಕೊಲೆ ಮಾಡಲು ಯತ್ನಿಸಿದ್ದರು. ಬಿಡಿಸಲು ಬಂದ ಶರಣಪ್ಪನ ಮೇಲೂ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಈ ಕುರಿತು ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಲಾ ಪ್ರಾರಂಭೋತ್ಸವ
ಗುಲ್ಬರ್ಗ: ನಗರದ ವಿವಿಧ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಮುಖ್ಯಗುರುಗಳು ಹಾಗೂ ಶಿಕ್ಷಕರು ಶುಕ್ರವಾರ ಬೆಳಗ್ಗೆ ಮಕ್ಕಳಿಗೆ ಸಿಹಿ ತಿನ್ನಿಸಿ ಶಾಲೆಗೆ ಬರಮಾಡಿಕೊಂಡರು.
ಕೆಲವೊಂದು ಶಾಲೆಗಳಲ್ಲಿ ಉಚಿತ ಪಠ್ಯಪುಸ್ತಕ ಮತ್ತು ಸಮವಸ್ತ್ರದ ಜತೆಗೆ ಸಿಹಿ ತಿನ್ನಿಸಿ ಶಾಲೆಗೆ ಬರಮಾಡಿಕೊಳ್ಳಲಾಯಿತು. ಕಳೆದ ಎರಡು ತಿಂಗಳ ರಜೆ ದಿನಗಳು ಮಜಾ ಮಾಡಿದ ಮಕ್ಕಳು ಕರ್ತವ್ಯವೆಂಬಂತೆ ಶಾಲೆಗೆ ಬ್ಯಾಗ್ ಹಾಕಿಕೊಂಡು ಶಾಲೆಗೆ ಕಡೆಗೆ ಹೆಜ್ಜೆ ಹಾಕುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಮಾನಸಿಕ ಒತ್ತಡದಿಂದ ದೂರವಾಗಿದ್ದ ಮಕ್ಕಳಿಗೆ ಮತ್ತೆ ಎಂದಿನಂತೆ ಜವಾಬ್ದಾರಿ ಶುರುವಾಗಿ ಹಾಯಾಗಿ ಬೆಳಗ್ಗೆ 8ರವರೆಗೆ ಹಾಸಿಗೆಯ ರುಚಿ ನೋಡುತ್ತಿದ್ದ ಮಕ್ಕಳಿಗೆ ಈಗ ಶಾಲೆಯ ಎಚ್ಚರಿಕೆ ಗಂಟೆ ಬಾರಿಸುತ್ತಿದೆ. ಮಕ್ಕಳು ಎಂದಿನಂತೆ ಶಾಲೆಗೆ ಹೋಗಿ ಭವಿಷ್ಯ ರೂಪಿಸಿಕೊಳ್ಳಲಿ ಎಂಬ ಉದ್ದೇಶದಿಂದ ಪಾಲಕರು ಮಕ್ಕಳನ್ನು ತಯಾರು ಮಾಡಿ ಶಾಲೆಗೆ ಕಳುಹಿಸಬೇಕಾಗಿದೆ.