'ಶಿಫಾರಸ್ಸಾದ ತಳಿ ಬಿತ್ತನೆ ಬೀಜವನ್ನೇ ನಾಟಿ ಮಾಡಿ'
ಯಾದಗಿರಿ: ಈಗ ಮುಂಗಾರು ಆರಂಭವಾಗುತ್ತಿದ್ದು, ರೈತರು ಬಿತ್ತನೆ ಬೀಜ ಖರೀದಿಸುವಾಗ ಅಗತ್ಯ ಮಾಹಿತಿಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಅಧಿಕೃತ ಮಾರಾಟಗಾರರಿಂದಲೇ ಬಿತ್ತನೆ ಬೀಜವನ್ನು ಖರೀದಿಸಬೇಕೆಂದು ಕೃಷಿ ಇಲಾಖೆಯ ಸಿಬ್ಬಂದಿ ಸುರೇಶ ತಿಳಿಸಿದರು.
ತಾಲೂಕಿನ ಸೈದಾಪುರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬಿತ್ತನೆ ಬೀಜದ ಕುರಿತು ಮಾಹಿತಿ ನೀಡಿದ ಅವರು, ರೈತರು ತಮ್ಮ ಪ್ರದೇಶಕ್ಕೆ ಮತ್ತು ಹವಾಗುಣಕ್ಕೆ ಸೂಕ್ತವಾಗುವ ಹಾಗೂ ಶಿಫಾರಸು ಮಾಡಿದ ತಳಿಯ ಬೀಜವನ್ನೇ ಉಪಯೋಗಿಸಬೇಕು.
ಖಾತ್ರಿಪಡಿಸಿಕೊಳ್ಳಿ: ಬಿತ್ತನೆ ಬೀಜವು ಸಂಬಂಧಪಟ್ಟ ಪ್ರಾಧಿಕಾರದಿಂದ ಪರೀಕ್ಷಿಸಲ್ಪಟ್ಟು ಗುಣಮಟ್ಟದ ಬಗ್ಗೆ ದೃಢೀಕರಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು. ದೃಢೀಕರಣ ಟ್ಯಾಗ್ಗಳನ್ನು ಲಗತ್ತಿಸಲಾಗಿದೆಯೇ ಎನ್ನುವುದನ್ನು ಖಾತರಿಪಡಿಸಿಕೊಳ್ಳಬೇಕು. ಬಿತ್ತನೆ ಬೀಜದ ಉತ್ಪಾದಕರು ಹಾಗೂ ಮಾರಾಟಗಾರರ ವಿಳಾಸವನ್ನು ಗಮನಿಸಬೇಕು. ಬಿತ್ತನೆ ಬೀಜ ಖರೀದಿಸಿದಾಗ ತಪ್ಪದೇ ಅಧಿಕೃತ ರಶೀದಿ ಪಡೆಯಬೇಕೆಂದು ಸಲಹೆ ನೀಡಿದರು. ಉತ್ಪಾದನಾ ದಿನಾಂಕ ಮತ್ತು ಅದರ ಅವಧಿಯನ್ನು ಗಮನಿಸಬೇಕು. ಬಿತ್ತನೆ ಬೀಜದ ಚೀಲ, ಸ್ವಲ್ಪ ಪ್ರಮಾಣದ ಬೀಜ, ಟ್ಯಾಗುಗಳನ್ನು ಬೆಳೆ ಕಟಾವು ಆಗುವವರೆಗೆ ಸುರಕ್ಷಿತವಾಗಿ ಕಾಯ್ದಿಟ್ಟುಕೊಳ್ಳಬೇಕು. ಬೀಜಗಳಿಗೆ ಕೀಟನಾಶಕಗಳಿಂದ ಉಪಚರಿಸಲಾಗಿದೆಯೇ ಎಂಬುದನ್ನು ಗಮನಿಸಬೇಕು. ಬೀಜಗಳಿಗೆ ಜೈವಿಕ ಗೊಬ್ಬರಗಳಿಂದ ಬೀಜೋಪಚಾರ ಮಾಡಿ ಬಿತ್ತನೆ ಮಾಡಬೇಕು. ಸುರೇಶ, ರಾಜಕುಮಾರ ಹಾಗೂ ನೀಲಾ ನಾಯ್ಕ ರೈತರಿಗೆ ಮಾಹಿತಿ ನೀಡಿದರು.