ಸಂಭ್ರಮದೊಂದಿಗೆ ಶಾಲಾ ಪ್ರಾರಂಭೋತ್ಸವ
ಕೆಂಭಾವಿ: ಪ್ರತಿಯೊಂದು ಮಗು ಶಿಕ್ಷಣ ಕಲಿತು ಮುಂದೆ ಬಂದು ಇಂದಿನ ಯಾಂತ್ರಿಕ ಯುಗದಲ್ಲಿ ಉನ್ನತ ಮಟ್ಟಕ್ಕೇರಬೇಕು. ಇದಕ್ಕಾಗಿ ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳನ್ನು ತಪ್ಪದೇ ಶಾಲೆಗೆ ಕಳುಹಿಸಿ ವಿದ್ಯಾವಂತರನ್ನಾಗಿ ಮಾಡಬೇಕೆಂದು ಪಟ್ಟಣದ ಬಾಲಕರ ಸರ್ಕಾರಿ ಪ್ರೌಢಶಾಲೆಯ ಮುಖ್ಯಗುರು ಜಗದೀಶ ಸಜ್ಜನ್ ಹೇಳಿದರು.
ಶಾಲಾ ಪ್ರಾರಂಭೋತ್ಸವದ ದಿನವಾದ ಶುಕ್ರವಾರ ವಿದ್ಯಾರ್ಥಿಗಳನ್ನು ಬರಮಾಡಿಕೊಂಡು ಅವರು ಮಾತನಾಡಿದರು. 2013- 14ರ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭವಾಗಿದ್ದು ಓದಿನ ಕಡೆ ಹೆಚ್ಚು ಗಮನಹರಿಸುವ ಮೂಲಕ ವಿದ್ಯಾರ್ಥಿಗಳು ಹೆಚ್ಚು ಅಂಕ ಗಳಿಸಿ ಶಾಲೆಗೆ ಮತ್ತು ಪಟ್ಟಣಕ್ಕೆ ಉತ್ತಮ ಹೆಸರು ತರಬೇಕೆಂದು ಕಿವಿಮಾತು ಹೇಳಿದರು.
ಶಾಲೆಯನ್ನು ತಳಿರು ತೋರಣಗಳಿಂದ ಅಲಂಕರಿಸಿ ಸಿಂಗರಿಸಲಾಗಿತ್ತು. ಎಲ್ಲರಿಗೂ ಸಿಹಿ ಹಂಚುವ ಮೂಲಕ ಶಾಲೆಯ ಪ್ರಾರಂಭೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಶಿಕ್ಷಕರಾದ ಬಸವರಾಜ ಬಂಟನೂರ, ಯಲ್ಲಣ್ಣ ಗೋನಾಳ, ಕೆ.ಆರ್. ಪಾಟೀಲ, ಇಬ್ರಾಹಿಂ ಮನಗೂಳಿ, ಆನಂದ ಕಟ್ಟಿಮನಿ, ಅಶೋಕ ಹರಿಜನ ಇದ್ದರು.
ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಡಶಾಲೆ, ಕನ್ಯಾ ಪ್ರಾಥಮಿಕ ಶಾಲೆ, ಬಾಲಕರ ಹಿರಿಯ ಪ್ರಾಥಮಿಕ ಶಾಲೆ ಸೇರಿದಂತೆ ಎಲ್ಲ ಸರ್ಕಾರಿ ಮತ್ತು ಸರ್ಕಾರೇತರ ಶಾಲಾ ಕಾಲೇಜುಗಳಲ್ಲಿ ಶಾಲಾ ಪ್ರಾರಂಭೋತ್ಸವವನ್ನು ಆಚರಿಸಲಾಯಿತು.
ಅಕ್ರಮ ಮರಳು: 8 ಟ್ರ್ಯಾಕ್ಟರ್ ವಶ
ಶಹಾಪುರ: ತಾಲೂಕು ಕಂದಾಯ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಪೊಲೀಸ್ ಅಧಿಕಾರಿಗಳ ಜಂಟಿ ಕಾರ್ಯಾಚರಣೆಯಲ್ಲಿ ತಾಲೂಕಿನ ಯಕ್ಷಿಂತಿ ಬಳಿ ಅಕ್ರಮವಾಗಿ ಮರಳು ಸಾಗಣೆ ಮಾಡುತ್ತಿದ್ದ 8 ಟ್ರ್ಯಾಕ್ಟರ್ಗಳನ್ನು ಜಪ್ತಿ ಮಾಡಿದ್ದಾರೆ. ತಹಸೀಲ್ದಾರ್ ಕೆ.ಎಲ್. ಭಜಂತ್ರಿ, ಗಣಿ ಮತ್ತು ಭೂವಿಜ್ಞಾನ ಅಧಿಕಾರಿ ಕಿರಣ .ಕೆ, ಸಿಪಿಐ ಪವನನಂದಿ, ಪಿಎಸ್ಐ ಸುನೀಲ್ ಮೂಲಿಮನಿ ಇತರರು ದಾಳಿಯಲ್ಲಿ ಪಾಲ್ಗೊಂಡಿದ್ದರು.
ಹೈ.ಕ.ಕ್ಕೆ ನರ್ಮ್ ವಿಸ್ತರಣೆ, ಸ್ವಾಗತ
ಯಾದಗಿರಿ: ಕೇಂದ್ರ ಸರ್ಕಾರದ ನರ್ಮ್ ಯೋಜನೆಯನ್ನು ಹೈ-ಕ ಜಿಲ್ಲೆಗಳಿಗೆ ವಿಸ್ತರಿಸಿರುವುದನ್ನು ಕೆಪಿಸಿಸಿ ಎಸ್ಪಿ ವಿಭಾಗದ ಕಾರ್ಯದರ್ಶಿ ಭೀಮರಾಯ ಠಾಣಗುಂದಿ ಸ್ವಾಗತಿಸಿದ್ದಾರೆ. ಹೈಕ ಜಿಲ್ಲೆಗಳಾದ ರಾಯಚೂರು, ಯಾದಗಿರಿ, ಗುಲ್ಬರ್ಗ ಜಿಲ್ಲೆಗಳಿಗೆ ವಿಸ್ತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದಕ್ಕೆ ಕೇಂದ್ರ ಕಾರ್ಮಿಕ ಸಚಿವ ಖರ್ಗೆಯವರ ಪರಿಶ್ರಮ ಕಾರಣ. ಆದ್ದರಿಂದ ಖರ್ಗೆ ಅವರಿಗೆ ಅಭಿನಂದಿಸುವುದಾಗಿ ತಿಳಿಸಿದ್ದಾರೆ.