ಸೂಗೂರು ಸಂತ್ರಸ್ತರಿಗಿಲ್ಲ ಸೌಲಭ್ಯ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಮೇ 31
ತಾಲೂಕಿನ ಸೂಗೂರು(ಎನ್) ಗ್ರಾಮದ ಹೊರವಲಯದಲ್ಲಿ ನಿರಾಶ್ರಿತರಿಗೆ ನಿರ್ಮಿಸಿದ ಮನೆಗಳಿಗೆ ಅಗತ್ಯ ಸೌಲಭ್ಯ ಇಲ್ಲದಿರುವುದರಿಂದ ಸಂತ್ರಸ್ತರು ನರಕಯಾತನೆ ಅನುಭವಿಸುತ್ತಿದ್ದಾರೆ.
2010ರಲ್ಲಿ ಜಿಲ್ಲೆಯಲ್ಲಿ ಆದ ಪ್ರಕೃತಿ ವಿಕೋಪದಿಂದ ತಾಲೂಕಿನ ಸೂಗೂರ(ಎನ್) ಗ್ರಾಮದಲ್ಲಿ ನೆರೆ ಪ್ರವಾಹದಿಂದ ಅನೇಕ ಕುಟುಂಬಗಳು ನಿರಾಶ್ರಿತರಾದಾಗ ಬೆಂಗಳೂರಿನ ಇನ್ಫೋಸಿಸ್ ಟೆಕ್ನಾಲಜಿಸ್ ಲಿಮಿಟೆಡ್ ಅವರ ಅನುದಾನದಲ್ಲಿ ಕೋತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸೇಡಂ ಇವರ ವತಿಯಿಂದ ಗ್ರಾಮದ ಅರ್ಧ ಫರ್ಲಾಂಗ್ ದೂರದಲ್ಲಿ 30್ಗ50 ಅಳತೆಯಲ್ಲಿ ಅಂದಾಜು ಮೊತ್ತ 1.5 ಲಕ್ಷ ಅನುದಾನದಲ್ಲಿ 71 ಮನೆಗಳನ್ನು ನಿರ್ಮಿಸಲಾಗಿದೆ.
ನೀರಿಗಾಗಿ ಅರ್ಧ ಫರ್ಲಾಂಗ್: ಈ ಮನೆಗಳು ನಿರ್ಮಾಣಗೊಂಡು ಏಪ್ರಿಲ್ 2011ರಲ್ಲಿ ಜಿಲ್ಲಾಧಿಕಾರಿಗೆ ಹಸ್ತಾಂತರ ಮಾಡಲಾಗಿದೆ. ಆದರೆ ಜಿಲ್ಲಾಡಳಿತವು ಅಲ್ಲಿ ಕುಡಿಯುವ ನೀರು, ಚರಂಡಿ ಸೇರಿದಂತೆ ಮೂಲ ಸೌಲಭ್ಯಗಳನ್ನು ಒದಗಿಸದೆ ಮನೆಗಳನ್ನು ಸಂತ್ರಸ್ತರಿಗೆ ಹಂಚಿಕೆ ಮಾಡಿರುವುದರಿಂದ 71 ಕುಟುಂಬಗಳು ಅಲ್ಲಿ ವಾಸಿಸುತ್ತಿದ್ದಾರೆ.
ಸಂತ್ರಸ್ತರಿಗೆ ಜಿಲ್ಲಾಡಳಿತವು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸದೆ ಇರುವುದರಿಂದ ನಿವಾಸಿಗಳು ಒಂದು ವರ್ಷದಿಂದ ಅರ್ಧ ಫರ್ಲಾಂಗ್ ದೂರದಲ್ಲಿರುವ ಸೂಗೂರ ಗ್ರಾಮಕ್ಕೆ ಹೋಗಿ ನೀರು ತರಬೇಕಾಗಿದೆ.
ಕುಡ್ಯಾಕ ನೀರಿಲ್ಲ, ...ಅದಕ ಎಲ್ಲಿಂದ ತರೋಣ: 'ಪ್ರತಿದಿನ ನೀರು ತರುವುದೇ ನಮಗ ದೊಡ್ಡ ಕೆಲ್ಸ ಆಗ್ಯಾದ ಮುಂಜಾನೆ ಸಂಜೆಗೆ ಎರಡು ಹೊತ್ತು ಊರಿಗೆ ಹೋಗಿ ನೀರು ತರುತ್ತೇವೆ. ನೀರಿನ ವ್ಯವಸ್ಥೆ ಮಾಡಲಿಕ್ಕೆ ಹೇಳಿ ಹೇಳಿ ಸಾಕಾಗ್ಯಾದ. ಈಗ ನೀರಿನ ಸೌಲಭ್ಯ ಕಲ್ಪಿಸಲು ಪೈಪ್ಲೈನ್ ಕೆಲಸ ಚಾಲು ಮಾಡ್ಯಾರ್. ಆದರ ಅದು ಸವಕಾಶ ನಡೆದ್ಯಾದ' ಎಂದು ಸಂತ್ರಸ್ತೆ ಗುಂಡಮ್ಮ 'ಕನ್ನಡಪ್ರಭ'ಕ್ಕೆ ತಮ್ಮ ಗೋಳು ತೋಡಿಕೊಂಡರು.
ಇಸ್ಫೋಸಿಸ್ ಕಂಪನಿ ನಿರ್ಮಿಸಿದ ಸಂತ್ರಸ್ತರ ಮನೆಗಳ ನಿವಾಸಿಗಳಿಗೆ ವೈಯಕ್ತಿಕ ಶೌಚಾಲಯ ನಿರ್ಮಿಸಿ ಕೊಟ್ಟಿದ್ದಾರೆ. ಆದರೆ ಅಲ್ಲಿ ಸರಿಯಾದ ಪೈಪ್ಲೈನ್ ಹಾಗೂ ನೀರಿನ ವ್ಯವಸ್ಥೆ ಮಾಡದೆ ಇರುವುದರಿಂದ ಅಲ್ಲಿಯ ಜನರು ಕುಡಿಯಾಕ ನೀರಿಲ್ಲ, ಶೌಚಾಲಯ ಬಳಕೆಗೆ ನೀರು ಎಲ್ಲಿಂದ ತರೋಣ ಎಂದು ಅಲ್ಲಿಯ ಜನತೆ ನೋವಿನಿಂದ ಹೇಳುತ್ತಾರೆ.
ಈಗಲಾದರೂ ಜಿಲ್ಲಾಧಿಕಾರಿ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳು ಹಾಗೂ ಜನರು ಅನುಭವಿಸುತ್ತಿರುವ ತೊಂದರೆಗೆ ಪರಿಹಾರ ಕಂಡುಹಿಡಿಯಲು ಕಡಬೂರ ಗ್ರಾಪಂ, ತಾಲೂಕು ಆಡಳಿತ ಜನಪ್ರತಿನಿಧಿಗಳು ಈ ಬಡಾವಣೆ ಕಡೆಗೆ ಗಮನ ಹರಿಸಿ ಕುಡಿವ ನೀರಿನ ವ್ಯವಸ್ಥೆ ಸೇರಿದಂತೆ ಮೂಲ ಸೌಲಭ್ಯ ಕಲ್ಪಿಸಬೇಕು ಎಂದು ಬಡಾವಣೆಯ ನಿವಾಸಿಗಳು ಒತ್ತಾಯಿಸಿದ್ದಾರೆ.