ಚಿಂಚೋಳಿ ರೈತರ ಪಾದಯಾತ್ರೆ ಶುರು
ಕನ್ನಡಪ್ರಭ ವಾರ್ತೆ, ಚಿಂಚೋಳಿ, ನ.4
ಕರ್ನಾಟಕ ಪ್ರಾಂತ ರೈತ ಸಂಘ ತಾಲೂಕು ಸಮಿತಿ ಮುಖಂಡರು ತಾಲೂಕಿನ ರೈತರ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಸೋಮವಾರ ಚಿಂಚೋಳಿ ಪಟ್ಟಣದಿಂದ ಗುಲ್ಬರ್ಗ ಜಿಲ್ಲಾಧಿಕಾರಿ ಕಚೇರಿಯವರೆಗೆ ಪಾದಯಾತ್ರೆ ಪ್ರಾರಂಭಿಸಿದರು.
ತಾಲೂಕು ಸಿಪಿಐ(ಎಂ) ಮುಖಂಡ ಶರಣಬಸಪ್ಪ ಮಮಶೆಟ್ಟಿ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿ, ರೈತರಿಗೆ ತೊಗರಿ ಬೆಂಬಲ ಬೆಲೆಗಾಗಿ, ಬೆಳೆ ವಿಮೆ ಜಾರಿಗಾಗಿ ಮತ್ತು ಹೋಬಳಿ ಮಟ್ಟದಲ್ಲಿ ತೊಗರಿ ಖರೀದಿ ಕೇಂದ್ರ ಪ್ರಾರಂಭಿಸಲು, ಅತಿವೃಷ್ಟಿ ಮಳೆಯಿಂದ ಹಾನಿಯಾದ ತೊಗರಿ ಬೆಳೆಗೆ ಪರಿಹಾರಕ್ಕಾಗಿ, ಕಬ್ಬು ಬೆಳೆಯುವ ರೈತರಿಗೆ ಸಕ್ಕರೆ ಕಾರ್ಖಾನೆ ಕೆಲಸ ಪ್ರಾರಂಭಿಸಲು, ಸರ್ಕಾರಿ ಭೂಮಿ ಅರಣ್ಯ ಭೂಮಿ ಸಾಗುವಳಿದಾರರಿಗೆ ಪಟ್ಟಾಕ್ಕಾಗಿ ಬಸವ ಮನೆ- ನಿವೇಶನಕ್ಕಾಗಿ, ಎಲ್ಲ ರೈತರಿಗೆ ಸರಳವಾಗಿ ಬ್ಯಾಂಕುಗಳಿಂದ ಬೆಳೆ ಸಾಲ ಹಾಗೂ ಶಿಕ್ಷಣಕ್ಕಾಗಿ ಸಲ ಮಂಜೂರಾತಿಗೆ ಒತ್ತಾಯಿಸಿ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ರೈತರ ಬೇಡಿಕೆಗಳನ್ನು ಈಡೇರಿಸಲು ಈ ಪಾದಯಾತ್ರೆ ನಡೆಸಲಾಗುತ್ತಿದೆ ಎಂದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತರು ಹಾಗೂ ಕೂಲಿಕಾರರ ವಿರೋಧಿ ನೀತಿ ಅನುಸರಿಸುತ್ತಿವೆ. ಗ್ರಾಮೀಣ ಪ್ರದೇಶದಲ್ಲಿ ಅತ್ಯಂತ ಸಂಕಷ್ಟದಲ್ಲಿರುವಾಗಲೂ ಸರ್ಕಾರ ರೈತರ ನೆರವಿಗೆ ಬರುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
ಪಾದಯಾತ್ರೆಯನ್ನು ನ.4ರಿಂದ ಪ್ರಾರಂಭಿಸಿ ನ.7ರಂದು ಗುಲ್ಬರ್ಗಕ್ಕೆ ತಲುಪಿ ಮಧ್ಯಾಹ್ನ 1 ಗಂಟೆಗೆ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಗುವುದೆಂದು ಹೇಳಿದರು.
ಪಾದಯಾತ್ರೆಗೆ ಹಿರಿಯ ಸಾಹಿತಿ, ನಾಟಕಕಾರ ಎಸ್.ಎನ್. ದಂಡಿನಕುಮಾರ್ ಚಾಲನೆ ನೀಡಿದರು. ಪಾದಯಾತ್ರೆಯಲ್ಲಿ ತಾಲೂಕು ಅದ್ಯಕ್ಷ ಸಿದ್ದಲಿಂಗಯ್ಯ ಸ್ವಾಮಿ ಎಂಪಳ್ಳಿ, ಪ್ರದೀಪ ತಿರಲಾಪುರ, ಹಣಮಂತರೆಡ್ಡಿ ಸೇರಿಕಾರ, ಜಾಫರಖಾನ್ ಮಿರಿಯಾಣ ಮುಂತಾದವರು ನೇತೃತ್ವ ವಹಿಸಿದ್ದಾರೆ. ಪಾದಯಾತ್ರೆಯಲ್ಲಿ ತಾಲೂಕಿನ ವಿವಿಧ ಗ್ರಾಮಗಳ 50 ಜನ ರೈತರು ಭಾಗವಹಿಸಿದ್ದಾರೆ.