ಮರಳು ಸಾಗಣೆಗೆ ಅವಕಾಶ ನೀಡದಿದ್ದರೆ ಪ್ರತಿಭಟನೆ
ಗುಲ್ಬರ್ಗ/ಶಹಾಬಾದ್: ಸರ್ಕಾರ ಮರಳು ಸಾಗಣೆ ಸ್ಥಗಿತಗೊಳಿಸಿದ್ದರಿಂದ ಕಟ್ಟಡ ಕಾರ್ಮಿಕರು ನಿರುದ್ಯೋಗಿಗಳಾಗಿದ್ದು, ಸರ್ಕಾರ ಕೂಡಲೇ ಮರಳು ಸಾಗಣೆ ಆರಂಭಕ್ಕೆ ಅವಕಾಶ ನೀಡದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಕಟ್ಟಡ ಕಾರ್ಮಿಕರು ಘೋಷಿಸಿದರು.
ಪಟ್ಟಣದ ಕಮಲಿಬಾಬಾ ದರ್ಗಾದಲ್ಲಿ ಶುಕ್ರವಾರ ಸೋಶಿಯಲಿಸ್ಟ್ ಯೂನಿಟ್ ಸೆಂಟರ್ ಆಫ್ ಇಂಡಿಯಾ (ಎಸ್ಯುಸಿಐ) ಕಮ್ಯುನಿಸ್ಟ್ ಪಕ್ಷದ ವತಿಯಿಂದ ನಡೆಸಿದ ಕಟ್ಟಡ ಕಾರ್ರ್ಮಿಕರ ಸಭೆಯಲ್ಲಿ ಕಾರ್ಮಿಕರು ಸರ್ಕಾರದ ನೀತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪಕ್ಷದ ವಾಡಿ ಸಮಿತಿ ಕಾರ್ಯದರ್ಶಿ ವೀರಭದ್ರಪ್ಪ ಆರ್.ಕೆ. ಮಾತನಾಡಿ, ಮರಳು ಸಾಗಣೆ ಸ್ಥಗಿತಗೊಂಡಿದ್ದರಿಂದ ಅಭಿವೃದ್ಧಿ ಕಾಮಗಾರಿಗಳು ಸಂಪೂರ್ಣ ನೆನೆಗುದಿಗೆ ಬಿದ್ದಿವೆ. ಕೆಲಸವಿಲ್ಲದ ಕಾರಣ ಕಾರ್ಮಿಕರ ಸ್ಥಿತಿ ಚಿಂತಾಜನಕವಾಗಿದೆ. ಕಾರ್ಮಿಕರ ಕೈಯಲ್ಲಿದ್ದ ಕೆಲಸವನ್ನು ಕಸಿದುಕೊಂಡು ಅವರನ್ನು ದಿವಾಳಿ ಎಬ್ಬಿಸಿ, ಅವರ ಜೀವನದೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ದೂರಿದರು.
ಕಟ್ಟಡ ಕಾರ್ಮಿಕರಿಗೆ ಜೀವನ ಭದ್ರತೆ, ಆರೋಗ್ಯ ವಿಮೆ, ಸೇರಿದಂತೆ ವಿವಿಧ ಸೌಲಭ್ಯ ಒದಗಿಸದೆ ನಿರ್ಲಕ್ಷ್ಯ ವಹಿಸಿದ್ದು, ಸರ್ಕಾರದ ಈ ಕ್ರಮವನ್ನು ಖಂಡಿಸಿ ಒಗ್ಗಟ್ಟಾಗಿ ಹೋರಾಟ ಮಾಡಬೇಕಾಗಿದೆ ಎಂದು ಕರೆ ನೀಡಿದರು.
ಮರಳು ಸಾಗಣೆ ನಿಷೇಧದ ವಿರುದ್ಧ ನ.5ರಂದು ಸುತ್ತಲಿನ ಗ್ರಾಮಗಳ ಕಾರ್ಮಿಕರ ಸಭೆ ನಡೆಸಿ ಮುಂದಿನ ಹೋರಾಟದ ರೂಪರೇಶೆಗಳನ್ನು ಸಿದ್ಧಪಡಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಎಸ್ಯುಸಿಐ ಸದಸ್ಯ ವಿಠ್ಠಲ್ ರಾಠೋಡ, ಕಟ್ಟಡ ಕಾರ್ಮಿಕರಾದ ಶಿವಾಜಿ ಪವಾರ, ಸೂರ್ಯಕಾಂತ ರಾಠೋಡ, ಮಹೆಬೂಬ್ ಸಾಬ್, ಪುರಂದಾಸ ರೆಡ್ಡಿ, ಸಿದ್ದಪ್ಪ ಬಾಚವಾರ, ಶಂಕರ ಭಂಡಾರಿ, ರಾಮರಾವ ಪವಾರ, ಗುರುಲಿಂಗಪ್ಪ ಮಿಸ್ತ್ರಿ, ಬಾಬು ಪಟೇಲ್ ಇತರರು ಸಭೆಯಲ್ಲಿ ಪಾಲ್ಗೊಂಡಿದ್ದರು.