ಯುವತಿ ಆತ್ಮಹತ್ಯೆ ಯತ್ನ
ಕ.ಪ್ರ. ವಾರ್ತೆ, ಚಿಂಚೋಳಿ, ನ.4
ತಾಲೂಕಿನ ಚಿಮ್ಮನಚೋಡ ಗ್ರಾಮದ ಯುವತಿಯೊಬ್ಬಳು ಜೀವನದಲ್ಲಿ ಜಿಗುಪ್ಸೆಗೊಂಡು ಸೋಮವಾರ ಬೆಳಿಗ್ಗೆ ಚಿಂಚೋಳಿ ಪಟ್ಟಣದ ಹೊರವಲಯದ ಬಸವೇಶ್ವರ ವೃತ್ತದ ಹತ್ತಿರದ ಚಿಂಚೋಳಿ-ಗುಲ್ಬರ್ಗ ರಾಜ್ಯ ಹೆದ್ದಾರಿ ರಸ್ತೆಯಲ್ಲಿರುವ ಮುಲ್ಲಾಮಾರಿ ನದಿಯ ಸೇತುವೆ ಮೇಲಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ತಾಲೂಕಿನ ಚಿಮ್ಮನಚೋಡ ಗ್ರಾಮದ ನಾಗಮ್ಮ ತಂದೆ ನರಸಪ್ಪ (26) ಎಂಬ ಯುವತಿಯೂ ಹಲವು ದಿನಗಳಿಂದ ಮಾನಸಿಕ ಅಸ್ವಸ್ಥಗೊಂಡಿದ್ದರಿಂದ ಸೋಮವಾರ ತನ್ನ ತಾಯಿ ಮತ್ತು ಅಜ್ಜಿಯೊಂದಿಗೆ ಚಿಂಚೋಳಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆಂದು ಬರುತ್ತಿರುವಾಗ ಪಟ್ಟಣದ ಬಸವೇಶ್ವರ ವೃತ್ತದ ಹತ್ತಿರದಲ್ಲಿ ಬಸ್ಸಿನಿಂದ ಇಳಿದ ನಂತರ ತಾಯಿ ಮತ್ತು ಅಜ್ಜಿ ಕೈಯಿಂದ ಬಿಡಿಸಿಕೊಂಡು ಓಡಿ ಹೋಗಿ ಮುಲ್ಲಾಮಾರಿ ನದಿ ಸೇತುವೆ 50 ಅಡಿ ಮೇಲಿಂದ ಹಾರಿ ಜಿಗಿದಿದ್ದಾಳೆ.
ನದಿಯ ಕರಿ ಕಲ್ಲಿನ ಮೇಲೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ಯುವತಿಯನ್ನು ನದಿಯಲ್ಲಿ ವಾಹನ ಸ್ವಚ್ಛಗೊಳಿಸುತ್ತಿದ್ದ ಆಟೋ ಚಾಲಕರು ಕೂಡಲೇ ಆಕೆಯನ್ನು ಅಟೋದಲ್ಲಿ ಹಾಕಿಕೊಂಡು ಚಂದಾಪುರ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ. ಯುವತಿಯ ಎರಡು ಕೈ ಮತ್ತು ಸೊಂಟ, ತಲೆಗೆ ತೀವ್ರ ಪೆಟ್ಟಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ಅವಳನ್ನು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಗುಲ್ಬರ್ಗದ ಬಸವೇಶ್ವರ ಆಸ್ಪತ್ರೆಗೆ ಸೇರಿಸಲಾಗಿದೆ.
ಗಾಯಗೊಂಡಿರುವ ನಾಗಮ್ಮ ತಂದೆ ನರಸಪ್ಪ ತಾಲೂಕಿನ ಹಸರಗುಂಡಗಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಅನುಕಂಪ ಆಧಾರದ ಮೇಲೆ ದ್ವೀತಿಯ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಯುವತಿ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಚಿಂಚೋಳಿ ಪಿಎಸ್‌ಐ ಶಿವಶಂಕರ ಸಾಹು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಘಟನೆಗೆ ಕಾರಣ: ನಾಗಮ್ಮ ಚಿಮ್ಮನಚೋಡ ಇವಳು ಕಳೆದ ಆಗಸ್ಟ್‌ನಲ್ಲಿ ನಡೆದ ಇಲಾಖಾ ಪರೀಕ್ಷೆಗೆ ಹಾಜರಾಗಲು ಗುಲ್ಬರ್ಗಕ್ಕೆ ಬಸ್ಸನಲ್ಲಿ ಪ್ರಯಾಣಿಸುತ್ತಿದ್ದಾಗ ತಾಜಲಾಪುರ ಗ್ರಾಮದ ಮೋಹನರೆಡ್ಡಿ ಪೊಲೀಸ್ ಪೇದೆ (ಕಮಲಾಪುರ ಪೊಲೀಸ್ ಠಾಣೆ) ಪರಿಚಯಿಸಿಕೊಂಡು ಯುವತಿಯನ್ನು ಪುಸಲಾಯಿಸಿಕೊಂಡು ತನ್ನ ಗೆಳೆಯನ ಮನೆಗೆ ಕರೆದುಕೊಂಡು ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ. ನಂತರ ಮದುವೆಯಾಗಿ ನಂಬಿಸಿ ಮೋಸ ಮಾಡಿದ್ದಾನೆ. ಹೀಗಾಗಿ, ಆಕೆಯೂ ತುಂಬಾ ಮಾನಸಿಕ ಅಸ್ವಸ್ಥಳಾಗಿ ಜೀವನದಲ್ಲಿ ಜಿಗುಪ್ಸೆಗೊಂದು ಸೇತುವೆ ಮೇಲಿಂದ ಹಾರಿ ಅತ್ಯಹತ್ಯೆಗೆ ಯತ್ನಿಸಿದ್ದಾಳೆ ಎಂದು ತಿಳಿದು ಬಂದಿದೆ.
ಘಟನೆ ಕುರಿತು ತನಿಖೆ ನಡೆಸುವಂತೆ ಜಿಲ್ಲಾ ಹೆಚ್ಚುವರಿ ಎಸ್ಪಿ ಕಾಶಿನಾಥ ತಳಕೇರಿ ಅವರು ಸಿಪಿಐ ಇಸ್ಮಾಯಿಲ್ ಶರೀಫ್ ಅವರಿಗೆ ಆದೇಶಿಸಿದ್ದಾರೆ. ಮೋಹನರೆಡ್ಡಿ ಅವರ ವಿರುದ್ಧ ಕ್ರಮ ಕೈಕೊಳ್ಳಲಾಗುವುದೆಂದು ಚಿಂಚೋಳಿ ಡಿವೈಎಸ್ಪಿ ರವಿ ಪಾಟೀಲ್ ತಿಳಿಸಿದ್ದಾರೆ.
ನೆರವು: ತೀವ್ರವಾಗಿ ಗಾಯಗೊಂಡಿರುವ ಯುವತಿಯನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸಲು 108 ಅಂಬುಲೆನ್ಸ್ ವಾಹನದಲ್ಲಿ ಡೀಸೆಲ್ ಇಲ್ಲದ ಕಾರಣ ತಾಲೂಕಿನ ಹಿರಿಯ ಮುಖಂಡ ಗೋಪಾಲರಾವ್ ಕಟ್ಟಿಮನಿ ಆರ್ಥಿಕ ನೆರವು ನೀಡಿದರು. ಕಾಂಗ್ರೆಸ್ ಮುಖಂಡ ಕೆ.ಎಂ.ಬಾರಿ ಇತರರು ಸಹಕರಿಸಿದರು.