ರಂಗಮಂದಿರ ನಿರ್ಮಾಣಕ್ಕೆ ಆಗ್ರಹ: ರಾಜ್ಯಪಾಲರಿಗೆ ಮನವಿ
ಸಿಂಧನೂರು: ನಗರದಲ್ಲಿ ನೆನೆಗುದಿಗೆ ಬಿದ್ದಿರುವ ರಂಗಮಂದಿರ ನಿರ್ಮಾಣ ಕಾಮಗಾರಿಯನ್ನು ಶೀಘ್ರ ಕೈಗೊಳ್ಳುವಂತೆ ಆಗ್ರಹಿಸಿ ತಹಸೀಲ್ದಾರರ ಮೂಲಕ ರಾಜ್ಯಪಾಲರಿಗೆ ಶುಕ್ರವಾರ ರಂಗಮಂದಿರ ನಿರ್ಮಾಣ ಹೋರಾಟ ಸಮಿತಿಯಿಂದ ಮನವಿ ಸಲ್ಲಿಸಿ ಒತ್ತಾಯಿಸಿತು.
ರಂಗಾಸಕ್ತರ ಒತ್ತಾಯದ ಮೇರೆಗೆ ರಂಗಮಂದಿರ ನಿರ್ಮಾಣಕ್ಕೆ ಆ.15, 2011ರಂದು ಕಾಮಗಾರಿ ಚಾಲನೆ ಗೊಂಡಿತು. ಈ ಕಾಮಗಾರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ 20 ಲಕ್ಷ, ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ 10 ಲಕ್ಷ ಹಾಗೂ ಶಾಸಕರ ಅನುದಾನದಲ್ಲಿ 28 ಲಕ್ಷ, 2012- 13ರಲ್ಲಿ ಬಿಆರ್ಜಿಎಫ್ ಯೋಜನೆಯಲ್ಲಿ 30 ಲಕ್ಷ ಸೇರಿ ಒಟ್ಟು 78 ಲಕ್ಷ ಅನುದಾನ ಡಿಸಿ ಹಾಗೂ ಜಿಪಂ ಖಾತೆಯಲ್ಲಿದೆ.
ಕಾಮಗಾರಿ ಹೊಣೆಯನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಿದ್ದು, ಸದ್ಯ ಕಾಮಗಾರಿ ನಡೆಯುತ್ತಿಲ್ಲ. ಕಾಮಗಾರಿ ಪ್ರಾರಂಭಿಸಿ 2 ವರ್ಷವಾದರೂ ಮರು ಚಾಲನೆ ಸಿಕ್ಕಿಲ್ಲ. ಇದರಿಂದಾಗಿ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲು ತಡೆಯೊಡ್ಡಿದಂತಾಗಿದೆ.
ಆದ್ದರಿಂದ ರಂಗಮಂದಿರದ ಕಾಮಗಾರಿಯನ್ನು ಈ ಕೂಡಲೇ ಕೈಗೆತ್ತಿಕೊಳ್ಳಲು ಸಂಬಂಧಿಸಿದ ಇಲಾಖೆಗೆ ಆದೇಶ ನೀಡಲು ಮತ್ತು ಸಿಬಿಐಗೆ ನಿರ್ದೇಶನ ನೀಡುವಂತೆ ಮನವಿ ಮಾಡಲಾಯಿತು.
ಈ ವೇಳೆ ಎಸ್.ದೇವೇಂದ್ರಗೌಡ, ಎಸ್.ಶರಣೇಗೌಡ, ಅಶೋಕ ಗದ್ರಟಗಿ, ವೈ.ನರೇಂದ್ರನಾಥ, ವೆಂಕಣ್ಣಾಚಾರ್ ಜೋಷಿ, ಸುಭಾಷ್ ಫ್ರಾಂಕ್ಲಿನ್, ಕನ್ನಡಪರ ಸಂಘಟನೆಯ ಮುಖಂಡರು ಇನ್ನಿತರರು ಇದ್ದರು.