11ರಂದು ತಾಪಂ ಸಾಮಾನ್ಯ ಸಭೆ
ಗುಲ್ಬರ್ಗ: ತಾಲೂಕು ಪಂಚಾಯತ್ ಅಧ್ಯಕ್ಷ ಚನ್ನವೀರಪ್ಪ ಎಂ. ಸಲಗರ ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯತಿಯ ಸಾಮಾನ್ಯ ಸಭೆಯು ನ.11 ರಂದು ಬೆಳಗ್ಗೆ 11 ಗಂಟೆಗೆ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದ್ದಾರೆ.
ನ.6ರಿಂದ 16ರವರೆಗೆ ವಿದ್ಯುತ್ ವ್ಯತ್ಯಯ
ಗುಲ್ಬರ್ಗ: ಜೆಸ್ಕಾಂ ವ್ಯಾಪ್ತಿಯ ಅಫಜಲ್ಪುರ ತಾಲೂಕಿನ 765 ಕಿಲೋ ವ್ಯಾಟ್ ಜೋಡಣೆ ಹೊಸ ಮಾರ್ಗದ ಸುಧಾರಣೆ ಕೆಲಸ ಕೈಗೊಂಡಿರುವ ಪ್ರಯುಕ್ತ ತಾಲೂಕಿನ ವ್ಯಾಪ್ತಿಯ ಈ ಕೆಳಕಂಡ ಪ್ರದೇಶಗಳಲ್ಲಿ ನ. 6ರಿಂದ 16ರವರೆಗೆ ಬೆಳಗಿನ 8 ರಿಂದ ಸಂಜೆ 6ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಜೆಸ್ಕಾಂ ಗುಲ್ಬರ್ಗದ ಕಾರ್ಯ ಮತ್ತು ಪಾಲನೆ ವಿಭಾಗ-1ರ ಕಾರ್ಯನಿರ್ವಾಹಕ ಅಭಿಯಂತರರು(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಫಜಲ್ಪುರ ಉಪವಿತರಣಾ ಕೇಂದ್ರದ ವ್ಯಾಪ್ತಿಯ ಎಫ್-6 ಹಳಿಯಾಳ(ಎ), ಎಫ್-6 ಹಳಿಯಾಳ(ಬಿ) ಹಾಗೂ ಎಫ್-7 ಬಳ್ಳೂರ್ಗಿ ಫೀಡರಗಳ ಮೇಲೆ ಬರುವ ಹಳಿಯಾಳ, ಬಳ್ಳೂರ್ಗಿ, ಬಳ್ಳೂರ್ಗಿ ತಾಂಡಾ, 110.33.11 ಕೆ.ವಿ ಕರಜಗಿ ಉಪವಿತರಣಾ ಕೆಂದ್ರದ ವ್ಯಾಪ್ತಿಯ ಎಫ್-6 ನಂದರಗಾ ಹಾಗೂ ಎಫ್-11 ಜೇವರ್ಗಿ ಎನ್.ಜೆ.ವೈ ಹಾಗೂ ಗೌರ (ಬಿ) ಫೀಡರಗಳ ಮೇಲೆ ಬರುವ ಗೌರ (ಬಿ), ಗೌರ (ಕೆ), ಅಶೋಕ ನಗರ, ಬಂಕಲಗಾ, ದಿಕ್ಕಸಂಗಾ, ತೆಲ್ಲೋಣಿ, ಜೇವರ್ಗಿ (ಬಿ), ಜೇವರ್ಗಿ (ಕೆ) ಮತ್ತು ನಂದರಗಾ ಗ್ರಾಮ ಮತ್ತು ಇತರೆ ಸುತ್ತಮುತ್ತಲಿನ ಗ್ರಾಮಗಳ ಗ್ರಾಹಕರು ಜೆಸ್ಕಾಂನೊಂದಿಗೆ ಸಹಕರಿಸುವಂತೆ ಕೋರಲಾಗಿದೆ.
10ರಂದು ಕುರುಬ ಸಮಾಜದ ಸಭೆ
ಜೇವರ್ಗಿ: ಬರುವ 20ರಂದು ನಡೆಯಲಿರುವ ಕನಕದಾಸರ ಜಯಂತ್ಯುತ್ಸವದ ನಿಮಿತ್ತ ಪಟ್ಟಣದಲ್ಲಿ ತಾಲೂಕು ಕುರುಬ ಸಮಾಜದ ಸಭೆ ಕರೆಯಲಾಗಿದೆ ಎಂದು ಸಮಾಜದ ತಾಲೂಕಾಧ್ಯಕ್ಷ ನಿಂಗಣ್ಣ ಭಂಡಾರಿ ಹಾಗೂ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಪಾಟೀಲ್ ಹರವಾಳ ತಿಳಿಸಿದ್ದಾರೆ. ನ. 10ರಂದು ಪಟ್ಟಣದಲ್ಲಿರುವ ಮಾಳಿಂಗೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆ 10 ಗಂಟೆಗೆ ಸಭೆ ನಡೆಯಲಿದ್ದು, ಸಭೆಯಲ್ಲಿ ತಾಲೂಕಪ ಆಡಳಿತ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನಡೆಯಲಿರುವ ಕನಕದಾಸರ ಜಯಂತ್ಯುತ್ಸವವನ್ನು ಅದ್ಧೂರಿಯಾಗಿ ಆಚರಿಸುವ ನಿಟ್ಟಿನಲ್ಲಿ ಚರ್ಚೆ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಘಟಕದ ಪದಾಧಿಕಾರಿಗಳ ಆಯ್ಕೆ ಮತ್ತು ಜಿಲ್ಲಾ ಕುರುಬ ಸಂಘಕ್ಕೆ 6 ಜನ ನಿರ್ದೇಶಕರನ್ನು ನೇಮಕ ಮತ್ತು ಸಮಾಜದ ಕುಂದು ಕೊರತರಗಳ ಕುರಿತು ಚರ್ಚಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ತಾಲೂಕು ಕುರುಬ ಸಮಾಜದ ಬಾಂಧವರು ಸಭೆಯಲ್ಲಿ ಪಾಲ್ಗೊಂಡು ಸಲಹೆ ಸೂಚನೆಗಳು ನೀಡಿ ಕಾರ್ಯಕ್ರಮ ಯಶ್ವಸ್ವಿಗೊಳಿಸಬೇಕೆಂದು ಪ್ರಕಟಣೆ ಮೂಲಕ ಕೋರಿದ್ದಾರೆ.
ಗ್ರಾಮಸ್ಥರಿಗೆ ಜನಸ್ಪಂದನ ಅಧಿಕಾರಿಗಳ ನೆರವು ಅವಶ್ಯ: ಮಲ್ಲಣ್ಣಗೌಡ
ಜೇವರ್ಗಿ: ಜನಸ್ಪಂದನಾ ಕಾರ್ಯಕ್ರಮದಿಂದ ಯೋಜನೆಗಳು ಗ್ರಾಮಸ್ಥರ ಮನೆ ಬಾಗಿಲಿಗೆ ಹಾಗೂ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಅಧಿಕಾರಿಗಳ ತಂಡ ಗ್ರಾಮಗಳಿಗೆ ಬರುತ್ತಿದೆ. ಅಂತಹ ಸಂದರ್ಭದಲ್ಲಿ ಸಮಸ್ಯೆಗಳಿಗೆ ಗ್ರಾಮಸ್ಥರು ಪರಿಹಾರ ಕಲ್ಪಿಸಿಕೊಳ್ಳುವುದು ಅಗತ್ಯ ಎಂದು ತಾಪಂ ಅಧ್ಯಕ್ಷ ಮಲ್ಲಣ್ಣಗೌಡ ಪಾಟೀಲ್ ನೆದಲಗಿ ಹೇಳಿದರು.
ತಾಲೂಕಿನ ನೆದಲಗಿ ಗ್ರಾಮದಲ್ಲಿ ಮಂಗಳವಾರ ಜನಸ್ಪಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾಮದಲ್ಲಿರುವ ಸಮಸ್ಯೆಗಳ ಕುರಿತು ಬೆಳಕು ಚೆಲಿದರು.
ಗ್ರಾಮದಲ್ಲಿ 2011- 12ನೇ ಸಾಲಿನಲ್ಲಿ ಬಸವ ಇಂದಿರಾ ಅವಾಜ್ ಯೋಜನೆಯಡಿ ಆಯ್ಕೆಯಾದ 55 ಮನೆಗಳು ಬಹುತೇಕರು ಕಟ್ಟಿಕೊಂಡಿದ್ದಾರೆ. ಆದರೆ, ಫಲಾನುಭವಿಗಳಿಗೆ ಪೂರ್ಣ ಪ್ರಮಾಣದ ಹಣ ಬಿಡುಗಡೆ ಯಾಗಿಲ್ಲ. ಕೂಡಲೇ ಬಿಡುಗಡೆಗೊಳಿಸುವಂತೆ ಫಲಾನುಭವಿಗಳು ಸ್ಪಂದನಾ ಸಭೆಯಲ್ಲಿ ಅಳಲು ತೊಡಿಕೊಂಡರು.
ಸಭೆ ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಮಲ್ಲಿಕಾರ್ಜುನರೆಡ್ಡಿ ಪಾಟೀಲ್ ಅವರು, ಜನರ ಸಮಸ್ಯೆಗೆ ಅಲ್ಲಿಯೆ ಇದ್ದ ಕೆಲವು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಇಲಾಖಾವಾರು ಸಮಸ್ಯೆಗಳ ಪರಿಹಾರಕ್ಕಾಗಿ ತಹಸೀಲ್ದಾರರು ಅಧಿಕಾರಿಗಳಿಗೆ ಗಡುವು ನೀಡಿದರು. ಗ್ರಾಮದಲ್ಲಿ ರುದ್ರಭೂಮಿ ಮಂಜುರು ಮಾಡಬೇಕು, ಗ್ರಂಥಾಲಯ, ಸಮುದಾಯ ಭವನ ನಿರ್ಮಿಸಲು ಗ್ರಾಮಸ್ಥರು ಮನವಿ ಮಾಡಿದರು.
ಸಭೆಯಲ್ಲಿ ಗ್ರಾಪಂ ಉಪಾಧ್ಯಕ್ಷ ಪಿರಪ್ಪ ಬಿಲ್ಲಾಡ, ಚಿದಾನಂದ ಪೊಲೀಸ್ ಪಾಟೀಲ್, ಸೂರ್ಯಕಾಂತ ನಾಯ್ಕೊಡಿ, ಸಾಹೇಬಗೌಡ ಪಾಟೀಲ್, ಲಕ್ಷ್ಮಣ ಕಲ್ಲೂರ, ನಾನಾಗೌಡ ಬಳ್ಳುಂಡಗಿ, ಶಿವಾನಂದ ಕಲ್ಲೂರ್, ಸೋಮಣ್ಣ ಗುತ್ತೇದಾರ, ಭೀಮರಾಯ ಯಲಗೋಡ, ತಿಪ್ಪಣ್ಣ ಇತರರು ಇದ್ದರು.