'ಕಡುಬಡವರಿಗೆ ಸಹಾಯಧನ ಹಂಚಿಕೆಯಾಗಲಿ'
ಕನ್ನಡಪ್ರಭ ವಾರ್ತೆ, ಅಫಜಲ್ಪುರ, ನ.5
ತಾಲೂಕಿನ ಕಡುಬಡವರಿಗೆ ಆಹಾರ ಧಾನ್ಯ ಸರಿಯಾಗಿ ವಿತರಿಸುತ್ತಿಲ್ಲ. ಸಂಧ್ಯಾಸುರಕ್ಷಾ, ವಿಧವಾ, ಅಂಗವಿಕಲ ವೇತನ ವಿತರಿಸಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಕೂಡಲೇ ಕಡುಬಡವರಿಗೆ ಸರ್ಕಾರದಿಂದ ಬರುವ ಸಹಾಯಧನ ಹಂಚಿಕೆ ಮಾಡಬೇಕೆಂದು ತಹಸೀಲ್ದಾರ್ ಗೌಸುದ್ದೀನ್ ಅವರಿಗೆ ತಾ.ಪಂ. ಸಾಮಾನ್ಯ ಸಭೆಯಲ್ಲಿ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಸಾ.ಸಿ. ಬೆನಕನಹಳ್ಳಿ, ತಾಪಂ ಸದಸ್ಯ ಶಿವಾನಂದ ಗಾಡಿ ಸೌಕಾರ ಆಗ್ರಹಿಸಿದರು.
ತಾಲೂಕಿನಲ್ಲಿ ಅಧಿಕಾರಿಗಳು ಅಭಿವೃದ್ಧಿ ವಿಷಯದಲ್ಲಿ ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ. ತಾಪಂ ಸದಸ್ಯರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲದಂತಾಗಿದೆ. ಯಾವೊಬ್ಬ ಅಧಿಕಾರಿಗಳು ತಮ್ಮ ಇಲಾಖೆ ಬಗ್ಗೆ ವಿವರ ಮಾಹಿತಿಯೊಂದಿಗೆ ಸಾಮಾನ್ಯ ಸಭೆಗೆ ಬರುವುದಿಲ್ಲ. ಅಪೂರ್ಣ ಮಾಹಿತಿಯೊಂದಿಗೆ ಸಭೆಗೆ ಬಂದರೆ ಹೇಗೆ ಅಧಿಕಾರಿಗಳು ಅಭಿವೃದ್ಧಿಯತ್ತ ಗಮನಹರಿಸಿ ಕೆಲಸ ಮಾಡಿ. ಇದಕ್ಕೆ ತಾಪಂ ಸದಸ್ಯರ ಸಂಪೂರ್ಣ ಸಹಾಯ ಸಹಕಾರ ಬೆಂಬಲವಿದೆ ಎಂದು ತಾಪಂ ಸದಸ್ಯ ಶಿವಾನಂದ ಗಾಡಿ ಸೌಕಾರ ಹೇಳಿದರು.
ತಾಲೂಕು ವೈದ್ಯಾಧಿಕಾರಿಗಳು ತಮ್ಮ ಇಲಾಖೆ ಪ್ರಗತಿ ಬಗ್ಗೆ ವಿವರಿಸುವಾಗ ಮಧ್ಯ ಪ್ರವೇಶಿಸಿದ ಸಾ.ಸಿ. ಬೆನಕಳ್ಳಿ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ಹುದ್ದೆ ಖಾಲಿ ಇದ್ದು ವೈದ್ಯರು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಬರುವುದಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಗಳು ವಾಸಿಸುವ ವಸತಿ ನಿಲಯ ಕಟ್ಟಡವನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರದೆ ಕೆಡವಿ ಹಾಕಿದ್ದಿರಿ. ಕಟ್ಟಡವನ್ನು ಕೆಡವಲು ನಿಮಗೆ ಯಾರು ಅನುಮತಿ ನೀಡಿದರು? ಇದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕು ಎಂದು ಅಧಿಕಾರಿಗಳಿಗೆ ಹೇಳಿದಾಗ ಇದರ ಬಗ್ಗೆ ಗೊತ್ತಿಲ್ಲ ಸರ್ ಎಂದು ಅಧಿಕಾರಿಗಳು ಹಾರಿಕೆ ಉತ್ತರ ನೀಡಿದರು.
ಕರಜಗಿ ಗ್ರಾಮದಲ್ಲಿ ಭೂ ಸೇನಾ ನಿಗಮದವರು ಕಟ್ಟಿಸಿದ ಅಂಗನವಾಡಿ ಕೇಂದ್ರದ ಕಟ್ಟಡ ಪೂರ್ಣಗೊಂಡರು ಇನ್ನೂ ಹಸ್ತಾಂತರ ಮಾಡಿಲ್ಲ ಏಕೆ ಎಂದು ತಾಪಂ ಸದಸ್ಯೆ ಅನಿತಾ ಅಕ್ಕಲಕೋಟೆ ಸಭೆಯ ಗಮನಕ್ಕೆ ತಂದರು.
ತಾಲೂಕಿನಲ್ಲಿರುವ ಪಶು ಆಸ್ಪತ್ರೆಗಳಲ್ಲಿ ವೈದ್ಯರು ಕಾಲುಬಾಯಿ ಬೇನೆ ಬಂದಿರುವ ದನಕರುಗಳಿಗೆ ಲಸಿಕೆ ನೀಡಲು 300 ರಿಂದ 400 ವರೆಗೆ ಹಣ ತೆಗೆದುಕೊಳ್ಳುತ್ತಿದ್ದಾರೆ. ನಿಮ್ಮ ಇಲಾಖೆಯಲ್ಲಿ ಲಸಿಕೆ ಚುಚ್ಚುಮದ್ದುಗಳು ಸ್ಟಾಕ್ ಇಲ್ಲವೇನು? ಹೊರಗಿನಿಂದ ತರಿಸಿ ಚುಚ್ಚುಮದ್ದುಗಳನ್ನು ಕೊಡಬೇಕಾಗುತ್ತದೆ ಎಂದು ರೈತರಿಂದ ಬೇಕಾಬಿಟ್ಟಿಯಾಗಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಶಿವಾನಂದ ಗಾಡಿ ಸೌಕಾರ ಹೇಳಿದಾಗ ಇದಕ್ಕೆ ಪ್ರತಿಕ್ರಿಯೆ ನೀಡಿದ ಪಶು ವೈದ್ಯಾಧಿಕಾರಿ ಕೆ.ಎಂ.ಕೋಟೆ ಅವರು, ಯಾರು ಹಣ ತೆಗೆದುಕೊಂಡಿದ್ದಾರೆ ಅವರ ಬಗ್ಗೆ ಮಾಹಿತಿ ನೀಡಿದರೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಮುಂದೆ ನಡೆಯುವ ಸಭೆಗೆ ಬರುವಾಗ ಸರಿಯಾದ ಮಾಹಿತಿ ಜತೆಗೆ ಹಸ್ತಾಕ್ಷರದೊಂದಿಗೆ ಸಭೆಗೆ ಬರಲು ತಾಪಂ ಕಾರ್ಯನಿರ್ವಹಣಾಧಿಕಾರಿ ಎಸ್.ಪಿ. ನಂದಗಿರಿ ಎಲ್ಲ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾಪಂ ಅಧ್ಯಕ್ಷೆ ಶಾರದಾಬಾಯಿ ಗಂಡೋಳ್ಳಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಪಂ ಕಾರ್ಯನಿರ್ವಹಣಾಧಿಕಾರಿ ಎಸ್.ಪಿ. ನಂದಗಿರಿ, ತಾಪಂ ಸದಸ್ಯರಾದ ಪ್ರಭುಲಿಂಗ ಜಮಾದಾರ, ಶಿವಪುತ್ರಪ್ಪ ಕರೂರ, ನಂದಿನಿ ಕುಂಬಾರ, ಸುಜ್ಞಾನಿಭಾಯಿ ಪಾಟೀಲ್, ದತ್ತು ಸಿಂದೆ, ಹುಣಚಪ್ಪ ಅಂತರಗಂಗಿ, ವಿಟಾಭಾಯಿ ಬಂಡಗಾರ, ಅಧಿಕಾರಿಗಳಾದ ಕ್ಷೇತ್ರ ಶಿಕ್ಷಣಾಧಿಕಾರಿ ಚಿತ್ರಶೇಖರ ದೇಗಲಮಡಿ, ಜಿಪಂ ಎಇಇ ಶರಣಬಸಪ್ಪ, ಪಪಂ ಅಧಿಕಾರಿ ಎಂ.ಎ.ರೆಹಮಾನ, ಸಿಡಿಪಿಒ ನವದಿಗಿ, ಶ್ರಿಮಂತ ಕೊಟ್ರೆ, ಶಂಕರ ಪಟವಾರಿ ಸೇರಿದಂತೆ ಇತರ ಅಧಿಕಾರಿಗಳು ಇದ್ದರು. ವಿಷಯ ನಿರ್ವಾಹಕ ಮಲ್ಲಿಕಾರ್ಜುನ ಪಪ್ಪ ಕಳೆದ ಸಾಮಾನ್ಯ ಸಭೆಯ ಮಾಹಿತಿ ಓದಿ ಹೇಳಿದರು.