'ಗ್ರಾಮಸ್ಥರಿಗೆ ಅಧಿಕಾರಿಗಳ ನೆರವು ಅವಶ್ಯ'
ಕನ್ನಡಪ್ರಭ ವಾರ್ತೆ, ಜೇವರ್ಗಿ, ನ.5
ಜನಸ್ಪಂದನಾ ಕಾರ್ಯಕ್ರಮದಿಂದ ಯೋಜನೆಗಳು ಗ್ರಾಮಸ್ಥರ ಮನೆ ಬಾಗಿಲಿಗೆ ಹಾಗೂ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಅಧಿಕಾರಿಗಳ ತಂಡ ಗ್ರಾಮಗಳಿಗೆ ಬರುತ್ತಿದೆ. ಅಂತಹ ಸಂದರ್ಭದಲ್ಲಿ ಸಮಸ್ಯೆಗಳಿಗೆ ಗ್ರಾಮಸ್ಥರು ಪರಿಹಾರ ಕಲ್ಪಿಸಿಕೊಳ್ಳುವುದು ಅಗತ್ಯ ಎಂದು ತಾಪಂ ಅಧ್ಯಕ್ಷ ಮಲ್ಲಣ್ಣಗೌಡ ಪಾಟೀಲ್ ನೆದಲಗಿ ಹೇಳಿದರು.
ತಾಲೂಕಿನ ನೆದಲಗಿ ಗ್ರಾಮದಲ್ಲಿ ಮಂಗಳವಾರ ಜನಸ್ಪಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾಮದಲ್ಲಿರುವ ಸಮಸ್ಯೆಗಳ ಕುರಿತು ಬೆಳಕು ಚೆಲಿದರು.
ಗ್ರಾಮದಲ್ಲಿ 2011- 12ನೇ ಸಾಲಿನಲ್ಲಿ ಬಸವ ಇಂದಿರಾ ಅವಾಜ್ ಯೋಜನೆಯಡಿ ಆಯ್ಕೆಯಾದ 55 ಮನೆಗಳು ಬಹುತೇಕರು ಕಟ್ಟಿಕೊಂಡಿದ್ದಾರೆ. ಆದರೆ, ಫಲಾನುಭವಿಗಳಿಗೆ ಪೂರ್ಣ ಪ್ರಮಾಣದ ಹಣ ಬಿಡುಗಡೆ ಯಾಗಿಲ್ಲ. ಕೂಡಲೇ ಬಿಡುಗಡೆಗೊಳಿಸುವಂತೆ ಫಲಾನುಭವಿಗಳು ಸ್ಪಂದನಾ ಸಭೆಯಲ್ಲಿ ಅಳಲು ತೊಡಿಕೊಂಡರು.
ಸಭೆ ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಮಲ್ಲಿಕಾರ್ಜುನರೆಡ್ಡಿ ಪಾಟೀಲ್ ಅವರು, ಜನರ ಸಮಸ್ಯೆಗೆ ಅಲ್ಲಿಯೆ ಇದ್ದ ಕೆಲವು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಇಲಾಖಾವಾರು ಸಮಸ್ಯೆಗಳ ಪರಿಹಾರಕ್ಕಾಗಿ ತಹಸೀಲ್ದಾರರು ಅಧಿಕಾರಿಗಳಿಗೆ ಗಡುವು ನೀಡಿದರು.
ಗ್ರಾಮದಲ್ಲಿ ರುದ್ರಭೂಮಿ ಮಂಜುರು ಮಾಡಬೇಕು, ಗ್ರಂಥಾಲಯ, ಸಮುದಾಯ ಭವನ ನಿರ್ಮಿಸಲು ಗ್ರಾಮಸ್ಥರು ಮನವಿ ಮಾಡಿದರು.
ಸಭೆಯಲ್ಲಿ ಗ್ರಾಪಂ ಉಪಾಧ್ಯಕ್ಷ ಪಿರಪ್ಪ ಬಿಲ್ಲಾಡ, ಚಿದಾನಂದ ಪೊಲೀಸ್ ಪಾಟೀಲ್, ಸೂರ್ಯಕಾಂತ ನಾಯ್ಕೊಡಿ, ಸಾಹೇಬಗೌಡ ಪಾಟೀಲ್, ಲಕ್ಷ್ಮಣ ಕಲ್ಲೂರ, ನಾನಾಗೌಡ ಬಳ್ಳುಂಡಗಿ, ಶಿವಾನಂದ ಕಲ್ಲೂರ್, ಸೋಮಣ್ಣ ಗುತ್ತೇದಾರ, ಭೀಮರಾಯ ಯಲಗೋಡ, ತಿಪ್ಪಣ್ಣ ಕರಗಾರ, ಶ್ರೀಶೈಲ್ ಪಾಟೀಲ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳಾದ ಪಲ್ಲಾನರಸಿಂಹ ರೆಡ್ಡಿ, ಮಜರ್ ಹುಸೇನ್, ಅಶೋಕ ನಾಯಕ, ಭೀಮಸೇನರಾವ ವಕೀಲ, ಚಂದ್ರಕಾಂತ ಬಿರಾದಾರ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರಕಾಶ ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದೇವಿಂದ್ರ ಬಿರಾದಾರ ನಿರೂಪಿಸಿ ವಂದಿಸಿದರು.