ಕನಿಷ್ಠ ವೇತನ, ಸೇವಾ ಭದ್ರತೆಗೆ ಆಗ್ರಹ: ಪ್ರತಿಭಟನೆ
ಗುಲ್ಬರ್ಗ: ಗುಲ್ಬರ್ಗ ವಿಭಾಗದ ಜೆಸ್ಕಾಂ ವ್ಯಾಪ್ತಿಯ ಜಿಲ್ಲೆಗಳಾದ ಗುಲ್ಬರ್ಗ, ಬೀದರ್, ರಾಯಚೂರು, ಬಳ್ಳಾರಿ, ಯಾದಗಿರಿ ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಗ್ರಾಮ ವಿದ್ಯುತ್ ಪ್ರತಿನಿಧಿಗಳು ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಬುಧವಾರ ಗುಲ್ಬರ್ಗದಲ್ಲಿ ಪ್ರತಿಭಟನೆ ನಡೆಸಿದರು.
ಶ್ರಮಜೀವಿಗಳ ವೇದಿಕೆ ಅಧ್ಯಕ್ಷ ಚಂದ್ರಶೇಖರ ಹಿರೇಮಠ ನೇತೃತ್ವದಲ್ಲಿ ನಗರದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಜೆಸ್ಕಾಂ ಕಚೇರಿ ಎದುರು ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ನಡೆಸಿ ಅಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಿದರು.
ಗ್ರಾಮ ವಿದ್ಯುತ್ ಪ್ರತಿನಿಧಿಗಳು ಸೇವಾ ಭದ್ರತೆ ಇಲ್ಲದೆ ಕನಿಷ್ಠ ವೇತನ ಕೂಡ ಇಲ್ಲದೆ ಕಠಿಣ ಪರಿಸ್ಥಿತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕೂಡಲೇ ಅವರಿಗೆ ಕನಿಷ್ಠ ವೇತನ ನೀಡುವುದರ ಜತೆಗೆ ಸೇವಾ ಭದ್ರತೆ ಕಲ್ಪಿಸಬೇಕು ಎಂಬಿತ್ಯಾದಿ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದರು.
ವೇದಿಕೆ ರಾಜ್ಯಾಧ್ಯಕ್ಷ ಚಂದ್ರಶೇಖರ ಹಿರೇಮಠ, ನಾಗರಾಜ ಹರಸೂರ್, ಸಂಗಮೇಶ, ಪ್ರಭುದೇವ, ರೇವಣಸಿದ್ದಯ್ಯ, ಮಲ್ಲಿಕಾರ್ಜುನ ಸಿಂಧನೂರ, ಹಣಮಂತ, ಖಂಡಪ್ಪ, ಕಾಮರಾಜ, ಈರಣ್ಣ, ಬಸವರೆಡ್ಡಿ, ಶಂಕರ, ಶಿವಕುಮಾರ್, ಪ್ರಹ್ಲಾದ, ಈರಣ್ಣ, ರಾಚಪ್ಪ ಸೇರಿದಂತೆ ನೂರಾರು ವಿದ್ಯುತ್ ಪ್ರತಿನಿಧಿಗಳು ಭಾಗವಹಿಸಿದ್ದರು.
ಇಂದು ಧರಣಿ
ಗುಲ್ಬರ್ಗ: ಕಂಪನಿ ಕೃಷಿ ವಿರೋಧಿಸಿ ಹಾಗೂ ತೊಗರಿ ಕ್ವಿಂಟಲ್‌ಗೆ 6450 ಬೆಂಬಲ ಬೆಲೆ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತಸಂಘದ ನೇತೃತ್ವದಲ್ಲಿ ರೈತ ಕೃಷಿ ಕಾರ್ಮಿಕರು ನ.7 ರಂದು ಗುಲ್ಬರ್ಗ ಜಿಲ್ಲಾಧಿಕಾರಿ ಕಚೇರಿ ಎದುರು 48 ಗಂಟೆಗಳ ಕಾಲ ಅಹೋರಾತ್ರಿ ಧರಣಿ ಸತ್ಯಾಗ್ರಹ ಕೈಗೊಳ್ಳಲಿದ್ದಾರೆ.