ಕಬ್ಬಿಗೆ ಬೆಂಬಲ ಬೆಲೆ ಕೊಡಿ: ಆಗ್ರಹ
ಅಫಜಲ್ಪುರ: ತಾಲೂಕಿನ ಹವಳಗಾದ ರೇಣುಕಾ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯ ಬೇಜವಾಬ್ದಾರಿತನದಿಂದ ರೈತರು ಕಂಗಾಲಾಗಿದ್ದು, ಕೂಡಲೇ ಕಬ್ಬಿಗೆ ಸೂಕ್ತ ಬೆಂಬಲ ಬೆಲೆ ನಿಗದಿಪಡಿಸಬೇಕು. ಹಿಂದಿನ ಕಬ್ಬಿನ ಬಾಕಿ ಹಣ ಪಾವತಿ ಮಾಡಬೇಕು ಇಲ್ಲದಿದ್ದರೆ ಅಲ್ಲಿಯವರೆಗೂ ಕಬ್ಬು ನುರಿಸುವುದನ್ನು ಸ್ಥಗಿತ ಮಾಡಬೇಕೆಂದು ತಾಲೂಕು ಕಬ್ಬು ಬೆಳೆಗಾರರ ರೈತ ಸಂಘದ ಅಧ್ಯಕ್ಷ ರಮೇಶ ಹೂಗಾರ ಆಗ್ರಹಿಸಿದ್ದಾರೆ. ಅವರು ತಹಸೀಲ್ದಾರ್ ಗೌಸುದ್ದೀನ್ ಅವರಿಗೆ ಮನವಿ ಸಲ್ಲಿಸಿ ಮಾತನಾಡುತ್ತ, ರೇಣುಕಾ ಸಕ್ಕರೆ ಕಾರ್ಖಾನೆಯು ಕಳೆದ ವರ್ಷದ ಕಬ್ಬಿನ ಬಾಕಿ ಹಣ ರೈತರಿಗೆ ಸಂದಾಯ ಮಾಡದೆ ಕಣ್ಣಾ ಮುಚ್ಚಾಲೆಯಾಡುತ್ತಿದೆ. ಪ್ರಸಕ್ತ ಸಾಲಿನಲ್ಲಿ ರೈತರಿಗೆ ಸೂಕ್ತ ಬೆಂಬಲ ಬೆಲೆ ನಿಗದಿಪಡಿಸದೆ ಕಾಡುತ್ತಿದ್ದು, ಇದರಿಂದ ರೈತರು ತೀವ್ರ ತೊಂದರೆಗೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ, ಕೂಡಲೇ ಈ ಕುರಿತು ತಾಲೂಕು ಆಡಳಿತ ಪರಿಶೀಲಿಸಿ ರೈತರ ಆಶೋತ್ತರಗಳಿಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು. ರೈತರ ಬೇಡಿಕೆಗಳನ್ನು ಕಾರ್ಖಾನೆಯ ಅಧಿಕಾರಿಗಳು ಈಡೇರಿಸುವಲ್ಲಿ ಈ ಬಾರಿ ವಿಫಲರಾದರೆ ಮುಂಬರುವ ದಿನಗಳಲ್ಲಿ ತಾಲೂಕಿನ ರೈತರೆಲ್ಲರೂ ಸೇರಿ ಉಗ್ರ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಕಲ್ಯಾಣಿ ಸಿಂದಗೆರಿ, ಮಲ್ಲು ಬಳೂರ್ಗಿ, ಅಮಾಗಿ ಪೂಜಾರಿ, ಶಿವಶರಣ ಕೋಗನೂರ, ಧರೆಪ್ಪ ಸಾಲೂಟಗಿ, ಲಚ್ಚಪ್ಪ ಪೂಜಾರಿ, ಕಲ್ಯಾಣಿ ಮೇತ್ರಿ, ಭಾಗಪ್ಪ ಆಯೇರಿ, ಬಸಣ್ಣ ಶಿವಣಗಿ ಇದ್ದರು.