ಕಾನೂನು ಅರಿವಿನಿಂದ ಅಪರಾಧ ಮುಕ್ತ ಜೀವನ
ಕನ್ನಡಪ್ರಭ ವಾರ್ತೆ, ಚಿತ್ತಾಪುರ, ನ.6
ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಶಿಸ್ತು, ಸಂಯಮ, ಸರಳ ಜೀವನ ಅಳವಡಿಸಿಕೊಂಡಲ್ಲಿ ಅಪರಾಧ ಮುಕ್ತರಾಗಿ ಜೀವನ ನಡೆಸಬಹುದು ಎಂದು ಸದಸ್ಯ ಕಾರ್ಯದರ್ಶಿ ಮತ್ತು ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ಕಿರಿಯ ಶ್ರೇಣಿ ನ್ಯಾಯಾಧೀಶ ಕೆ.ಎಸ್. ರೋಟ್ಟೇರ್ ಹೇಳಿದರು.
ಇಲ್ಲಿನ ತಹಸೀಲ್ ಕಚೇರಿಯಲ್ಲಿ ಮಂಗಳವಾರ ನಡೆದ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘ ಮತ್ತು ತಾಲೂಕು ಆಡಳಿತದ ಆಶ್ರಯದಲ್ಲಿ ನಡೆದ ಕಾನೂನು ಅರಿವು -ನೆರವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂದಿನ ಯುವ ಪೀಳಿಗೆ ದೃಶ್ಯ ಮಾಧ್ಯಮ ಮತ್ತು ಅಂರ್ತಜಾಲ ಹಾಗೂ ಮೊಬೈಲ್ಗಳ ಪ್ರಭಾವದಿಂದ ದೇಶದಲ್ಲಿ ಅನೇಕ ಅಪರಾಧ ಪ್ರಕರಣಗಳು ಜರುಗುತ್ತಿವೆ. ಇವುಗಳನ್ನು ತಡೆಯಲು ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ. ಆದರೆ, ಇದರಿಂದ ನಾವು ದೂರವಿದ್ದು, ಅವುಗಳ ಪರುಪಯೋಗ ಪಡಿಸಿಕೊಳ್ಳದೇ ಜೀವನ ನಡೆಸಲು ತಿಳಿಸಿದರು.
ಅಧ್ಯಕ್ಷರು ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ಹಿರಿಯ ಶ್ರೇಣಿ ನ್ಯಾಯಾಧೀಶ ಡಿ.ಪಿ. ನಾಯಕ ಕಾರ್ಯಕ್ರಮವನ್ನು ಉದ್ಘಾಟಿಸಿ ಕಾನೂನು ಅರಿವು ಅದರ ಪಾಲನೆ ಕುರಿತು ಮಾತನಾಡಿದರು.
ತಹಸೀಲ್ದಾರ್ ಮಲ್ಲೇಶ ತಂಗಾ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾನೂನು ಅರಿವು ಕಾರ್ಯಕ್ರಮಗಳಿಂದ ಜನರಲ್ಲಿ ಕಾನೂನಿನ ಬಗ್ಗೆ ತಿಳಿವಳಿಕೆ ಮೂಡುವುದು. ಆಪ್ತ ಸಮಾಲೋಚನೆ ಮಾಡಿದಲ್ಲಿ ಅಪರಾಥ ಪ್ರಕರಣಗಳು ಕಡಿಮೆಯಾಗಲು ಸಹಕಾರಿಯಾಗುತ್ತವೆ ಎಂದು ಹೇಳಿದರು.
ನ್ಯಾಯವಾದಿ ಎಸ್.ಎನ್. ಜೋಶಿ ಕರ್ನಾಟಕ ಭೂ ಕಂದಾಯದ ಕಾಯ್ದೆ ಹಾಗೂ ವರ್ಗಾವಣೆ ಕುರಿತು ಮಾಹಿತಿ ನೀಡಿದರು. ನ್ಯಾಯವಾದಿ ಮಲ್ಲಿಕಾರ್ಜುನ ಹೋನಗುಂಟಿ ಮಾಹಿತಿ ಹಕ್ಕು ಕಾಯ್ದೆ ಕುರಿತಾಗಿ ಮಾಹಿತಿ ಮಾತನಾಡಿದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ಎಸ್.ಜಿ. ನಾಗಾವಂದ, ಸಹಾಯಕ ಅಭಿಯೋಜಕ ಬಸವಂತರೆಡ್ಡಿ ಪಾಟೀಲ್, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಗಂಗಾಧರ ಸಾಲಿಮಠ ಮಾತನಾಡಿದರು.
ಶಿಶು ಅಭಿವೃದ್ಧಿ ಅಧಿಕಾರಿ ರವೀಂದ್ರ ರತ್ನಾಕರ, ನ್ಯಾಯವಾದಿ ಚಂದ್ರಶೇಖರ ಅವಂಟಿ, ಎಸ್.ಟಿ ಪಾಟೀಲ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶಿರಸ್ತೇದಾರ ಶ್ರೀನಿವಾಸ ಚಾಪೆಲ್ ನಿರೂಪಿಸಿದರು. ಗಂಗಾಧರ ಹಾಲು ವಂದಿಸಿದರು.