ದಲಿತ ಕೋಬ್ರಾ ಪದಾಧಿಕಾರಿಗಳ ಆಯ್ಕೆ
ಚಿತ್ತಾಪುರ: ರಾಷ್ಟ್ರಮಟ್ಟದ ಜಾತಿರಹಿತ ರಾಜಕೀಯ ಸಂಘಟನೆಯಾದ ಭಾರತೀಯ ದಲಿತ ಕೋಬ್ರಾ ರಾಜ್ಯ ಅಧ್ಯಕ್ಷ ಸಿದ್ಧಾರ್ಥ ಸಿಂದೆ ನೇತೃತ್ವದಲ್ಲಿ ಸಭೆ ಸೇರಿ ಚಿತ್ತಾಪುರ ತಾಲೂಕಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಮಹಾದೇವ ಕಾಸನೂರ, ಉಪಾಧ್ಯಕ್ಷರಾಗಿ ಹುಲಿಗೆಪ್ಪ ಪೂಜಾರಿ, ಕಾರ್ಯದರ್ಶಿರಾಗಿ ಭರತ ಪೋತನಕರ್, ಸಹ ಕಾರ್ಯದರ್ಶಿಯಾಗಿ ನಾಗರಾಜ ಬಡಿಗೇರ, ಖಜಾಂಚಿಯಾಗಿ ಶಾಮರಾವ್ ಹೋಸಮನಿ ಅವರನ್ನು ನೇಮಕ ಮಾಡಲಾಗಿದೆ.
ವೇಣುಮಾಧವ ವಿಪಕ್ಷ ನಾಯಕ
ಸುರಪುರ: ಮಾಜಿ ಸಚಿವ ರಾಜುಗೌಡ ಬಣದ ಮತ್ತು ಕಬಾಡಗೇರಾ ವಾರ್ಡ್ನ ವೇಣುಮಾಧವ ನಾಯಕ ಪುರಸಭೆ ವಿರೋಧ ಪಕ್ಷದ ನಾಯಕನಾಗಿ ಆಯ್ಕೆಯಾದರು. ಪುರಸಭೆ ಸಭಾಂಗಣದಲ್ಲಿ ಜರುಗಿದ ಸಾಮಾನ್ಯ ಸಭೆಯಲ್ಲಿ ಪ್ರತಿಪಕ್ಷದ ಎಲ್ಲ ಸದಸ್ಯರು ಪ್ರತಿಪಕ್ಷ ಸ್ಥಾನಕ್ಕೆ ವೇಣುಮಾಧವ ನಾಯಕರ ಹೆಸರು ಸೂಚಿಸಿ ಮನವಿ ಪತ್ರವನ್ನು ಅಧ್ಯಕ್ಷ ದೇವಿಂದ್ರಪ್ಪ ಕಳ್ಳಿಮನಿಗೆ ಸಲ್ಲಿಸಿದರು. ನಂತರ ಅಧ್ಯಕ್ಷರು ವೇಣುಮಾಧವ ಅವರ ಆಯ್ಕೆಯನ್ನು ಅಧಿಕೃತವಾಗಿ ಪ್ರಕಟಿಸಿದರು. ಉಪಾಧ್ಯಕ್ಷೆ ಗುರುಬಾಯಿ ವಾಲಿ, ರಾಜೂಗೌಡ ಬಣದ ಪುರಸಭೆ ಸದಸ್ಯರಾದ ಭೀಮಾಶಂಕರ ಬಿಲ್ಲವ್, ರಾಜಾ ಜೈರಾಮ ನಾಯಕ, ಪಾರಪ್ಪ ಗುತ್ತೇದಾರ್, ಮಾನಪ್ಪ ಚೆಳ್ಳಿಗಿಡ, ಏಕ್ಬಾಲ್ ವರ್ತಿ ಇನ್ನಿತರರಿದ್ದರು.
ರಿಯಾಯತಿಯಲ್ಲಿ ಪುಸ್ತಕ ಮಾರಾಟ
ಗುಲ್ಬರ್ಗ: ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನವಕರ್ನಾಟಕ ಪ್ರಕಾಶನ ಸಂಸ್ಥೆಯು ಪ್ರತಿ ವರ್ಷದಂತೆ ಈ ವರ್ಷವೂ ನವೆಂಬರ್ ತಿಂಗಳಾದ್ಯಂತ ಕನ್ನಡ ಪುಸ್ತಕಗಳನ್ನು ವಿಶೇಷ ರಿಯಾಯತಿ ದರದಲ್ಲಿ ಮಾರಾಟ ಮಾಡಲು ನಿರ್ಧರಿಸಿದೆ.
ಪ್ರಕಾಶನದ ಕನ್ನಡ ಪುಸ್ತಕಗಳನ್ನು ಶೇ.20 ರಷ್ಟು ಹಾಗೂ ಅನ್ಯ ಪ್ರಕಾಶನದ ಕನ್ನಡ ಪುಸ್ತಕಗಳನ್ನು ಶೇ.15ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ರಿಯಾಯತಿ ಸೌಲಭ್ಯವು ನವಕರ್ನಾಟಕ ಪ್ರಕಾಶನ ಸಂಸ್ಥೆಯ ಎಲ್ಲ ಪುಸ್ತಕ ಮಳಿಗೆಗಳಲ್ಲೂ ಲಭ್ಯವಿದೆ. ಈ ಸಂದರ್ಭಕ್ಕಾಗಿ ಇಡೀ ನವೆಂಬರ್ನಲ್ಲಿ ನವಕರ್ನಾಟಕ ಪುಸ್ತಕ ಮಳಿಗೆಗಳಲ್ಲಿ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ, ವೈಜ್ಞಾನಿಕ ಇತರ ಅನೇಕ ವಿಷಯಗಳ ಕುರಿತಾದ ಪುಸ್ತಕಗಳನ್ನು ಹಾಗೂ ಮಕ್ಕಳ ನೀತಿ, ನಡತೆ, ವಿನೋದ ಸಾಹಿತ್ಯದ ಪುಸ್ತಕಗಳನ್ನು ಅಧಿಕ ಸಂಖ್ಯೆಯಲ್ಲಿ ಇಡಲಾಗುವುದು. ನಗರದ ನವಕರ್ನಾಟಕ ಪುಸ್ತಕ ಮಳಿಗೆಯು ಪ್ರತಿದಿನ ಬೆಳಗ್ಗೆ 9.30 ರಿಂದ ರಾತ್ರಿ 8ರವರೆಗೆ ತೆರೆದಿರುತ್ತದೆ. ಇದರ ಸೌಲಭ್ಯ ಪಡೆಯಲು ಶಾಖಾ ವ್ಯವಸ್ಥಾಪಕರಾದ ಸಂಜಯ ಪಾಟೀಲ್ ಕೋರಿದ್ದಾರೆ.