ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

'ಮಾಮೂಲು ಅಧಿಕಾರಿಗಳು ತಾಲೂಕಿಗೆ ಬೇಕಿಲ್ಲ'

Lingaraj Badiger
Updated On : 7 Nov 2013, 11:20 am

ಕನ್ನಡಪ್ರಭ ವಾರ್ತೆ, ಆಳಂದ, ನ.6
ತಾಲೂಕಿನಲ್ಲಿ ಅಕ್ರಮ ಸಾರಾಯಿ ಮಾರಾಟ ತಡೆಗಟ್ಟಲು ವಿಫಲವಾದ ಅಬಕಾರಿ ಅಧಿಕಾರಿಗಳಿಗೆ ಶಾಸಕ ಬಿ.ಆರ್.ಪಾಟೀಲ್ ಅವರು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.
ತಾಲೂಕಿನ ಭೂಸನೂರ ಗ್ರಾಪಂ ವಾಪ್ತಿಯ ಭೂಸನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಏರ್ಪಡಿಸಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಬಕಾರಿ ಅಧಿಕಾರಿಗಳು ಹಳ್ಳಿಹಳ್ಳಿಗಳಲ್ಲಿ ಅಕ್ರಮ ಸಾರಾಯಿ ಮಾರಾಟ ಅವರ ಗಮನಕ್ಕೆ ಇದ್ದರು ಕೂಡ ಮೌನವಾಗಿದ್ದಾರೆ. ಇವರಿಗೆ ಹೆಂಡದ ದೊರೆಗಳಿಂದ ತಿಂಗಳ ಮಾಮುಲು ಪಡೆಯುತ್ತಿದ್ದಾರೆ. ಇಂಥ ಅಧಿಕಾರಿಗಳು ನಮ್ಮ ತಾಲೂಕಿಗೆ ಬೇಡ ಎಂದು ಕಿಡಿಕಾರಿದರು.
ಇದೆ ಸಂದರ್ಭ ಗ್ರಾಮದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ವಸುಂಧರಾ ಅವರು ಸತತ ಗೈರು ಹಾಜರಾಗುತ್ತಾರೆ. ತಿಂಗಳಲ್ಲಿ ಒಂದೆರಡು ಬಾರಿ ಮಾತ್ರ ಶಾಲೆಗೆ ಹಾಜರಾಗುತ್ತಾರೆ ಎಂದು ಗ್ರಾಮಸ್ಥರು ಸಭೆಯಲ್ಲಿ ದೂರಿದಾಗ ತಕ್ಷಣ ಅವರನ್ನು ಅಮಾನತು ಮಾಡುವಂತೆ ಶಿಕ್ಷಣ ಇಲಾಖೆಯವರಿಗೆ ತಾಕೀತು ಮಾಡಿದರು.
ಸಂಧ್ಯಾಸುರಕ್ಷಾ, ಅಂಗವಿಕಲ, ವಿಧವಾ ವೇತನ, ವೃದ್ಧಾಪ್ಯ ವೇತನ ಸೇರಿದಂತೆ 58ಕ್ಕೂ ಹೆಚ್ಚು ಪಿಂಚಣಿದಾರರಿಗೆ ಆದೇಶ ಪತ್ರಗಳು ನೀಡಿ ಆಳಂದನಿಂದ ಗಾಣಗಾಪುರ, ಲಾಡ ಚಿಂಚೋಳಿಯಿಂದ ಸಕ್ಕರೆ ಕಾರ್ಖಾನೆವರೆಗೆ ರಸ್ತೆ ಸುಧಾರಣೆ ಬಗ್ಗೆ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.
ಸಭೆಯಲ್ಲಿ ಗ್ರಾಮಗಳಲ್ಲಿ ಚರಂಡಿ, ರಸ್ತೆ, ಕುಡಿವ ನೀರು, ಉದ್ಯೋಗ ಖಾತ್ರಿ ಕಾಮಗಾರಿಗಳಿಗೆ ಹೆಸರು ಸೇರ್ಪಡೆ, ಪಶು ಆಸ್ಪತ್ರೆಗೆ ಸೌಕರ್ಯಗಳ ಕೊರತೆ, ಭೂಸನೂರ ಗ್ರಾಮದ ಹಿಂದೂ ಜನಾಂಗದವರಿಗೆ ರುದ್ರಭೂಮಿ ಕೊರತೆ, ಮತ್ತಿತರ ಸಮಸ್ಯೆಗಳ ಬಗ್ಗೆ ಭೂಸನೂರ, ದೇವಂತಿಗಿ, ಜವಳಿ(ಡಿ), ರಾಜವಾಳ ಗ್ರಾಮಸ್ಥರು ಪರಿಹಾರಕ್ಕಾಗಿ ಅರ್ಜಿಗಳನ್ನು ಸಲ್ಲಿಸಿದರು.
ತಹಸೀಲ್ದಾರ್ ಪರಮೇಶ್ವರಸ್ವಾಮಿ ಮಾತನಾಡಿ, ಸರ್ಕಾರದ ಪ್ರತಿಯೊಂದು ಯೋಜನೆಗಳು ಜನರ ಮನೆ ಬಾಗಿಲಿಗೆ ತಲುಪಲೆಂದು ಜನಸ್ಪಂದನ ಕಾರ್ಯಕ್ರಮ ಆಯೋಜಿಸಲಾಗಿದೆ. ಸಾರ್ವಜನಿಕರು ಪಾರದರ್ಶಕತೆಯಿಂದು ಇದರ ಲಾಭ ಪಡೆಯಬೇಕೆಂದು ತಿಳಿಸಿದರು.
ಗ್ರಾಪಂ ಅಧ್ಯಕ್ಷೆ ಕಲಾವತಿ ಜಗದೆ, ನಿಂಬರ್ಗಾ ಉಪ ತಹಸೀಲ್ದಾರ್ ಶಾಂತಕುಮಾರ್ ಪಟ್ಟಣ್ಣ, ಇಒ ಲಕ್ಷ್ಮಣ ಶ್ರೀಗೇಂರಿ, ಎಇಇ ಅಬ್ದುಲ್ ಸಲಾಂ, ಜೆಸ್ಕಾಂ ಅಧಿಕಾರಿ ವಿಶ್ವನಾಥ ರೆಡ್ಡಿ, ಗ್ರಾಪಂ ಪಿಡಿಒ ಮನ್ಮಥರಾವ, ಶಿರಸ್ತೇದಾರ ಪ್ರಕಾಶ ಸಿಂದಗಿ, ಕಂದಾಯ ನಿರೀಕ್ಷಕ ಪ್ರಭುಲಿಂಗ ತಟ್ಟೆ, ಮುಖಂಡ ಬಿ.ಕೆ.ಪಾಟೀಲ್, ಕಲ್ಯಾಣರಾವ್ ಪಾಟೀಲ್, ಪುರಸಭೆ ಮಾಜಿ ಅಧ್ಯಕ್ಷ ವಿಠ್ಠಲರಾವ್ ಪಾಟೀಲ್, ಗ್ರಾಮ ಲೇಖಪಾಲಕ ಬಸವರಾಜ ಖಂಡಾಳ ಇತರರು ಅಧಿಕಾರಿಗಳು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement