ರಸ್ತೆ ದುರಸ್ತಿ ನಿರ್ಲಕ್ಷಿಸಿದರೆ ಶಿಸ್ತು ಕ್ರಮ
ಯಾದಗಿರಿ: ಶೀಘ್ರದಲ್ಲೇ ಜಿಲ್ಲೆಯ ಎಲ್ಲಾ ರಸ್ತೆಗಳನ್ನು ದುರಸ್ತಿ ಮಾಡಬೇಕು. ಈ ನಿಟ್ಟಿನಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜವಳಿ, ಬಂದರು, ಒಳನಾಡು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಾಬುರಾವ್ ಚಿಂಚನಸೂರ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಇಲ್ಲಿನ ಜಿಲ್ಲಾಧಿಕಾರಿ ಸಂಭಾಗಣದಲ್ಲಿ ಬುಧವಾರ ಅಭಿವೃದ್ಧಿ ಕಾಮಗಾರಿಗಳ ಪರೀಶಿಲನೆ ಸಭೆ ನಡೆಸಿದ ಅವರು, ರಸ್ತೆಗಳಲ್ಲಿ ವಾಹನ, ಬಂಡಿಗಳು ಓಡಾಡಲು ಆಗದಷ್ಟು ಅಧ್ವಾನವೆದ್ದಿವೆ. ಪರಿಸ್ಥಿತಿ ಬಗ್ಗೆ ಮಾಧ್ಯಮಗಳಲ್ಲಿ ದಿನನಿತ್ಯ ದೂರುಗಳು ಬರುತ್ತಿವೆ. ಆದರೂ ಎಚ್ಚೆತ್ತುಕೊಳ್ಳದೇ ನಿರ್ಲಕ್ಷ್ಯ ತೋರುತ್ತಿರುವುದೇಕೆ ಎಂದು ಅಧಿಕಾರಿಗಳ ಮೇಲೆ ಹರಿಹಾಯ್ದರು.
ತಕ್ಷಣ ಅಧಿಕಾರಿಗಳು ರಸ್ತೆ ಕಾಮಗಾರಿ ಸಮಗ್ರ ಮಾಹಿತಿಯನ್ನು ನೀಡಿ ಅಂದಾಜು ವೆಚ್ಚದ ಬಗ್ಗೆ ವರದಿ ಸಲ್ಲಿಸಿ ಕಾಮಗಾರಿ ಕೈಗೆತ್ತುಕೊಳ್ಳಬೇಕೆಂದು ಸೂಚಿಸಿದರು. ಈಗಾಗಲೇ ಅನುಮೋದನೆಗೊಂಡು ಹಣ ಬಿಡುಗಡೆಯಾಗಿದ್ದರೂ ಕಾಮಗಾರಿ ಕೈಗೊಂಡಿಲ್ಲದ ಬಗ್ಗೆ ಸಚಿವರು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಅತಿವೃಷ್ಟಿ ಸಂದರ್ಭ ರಸ್ತೆ ದುರಸ್ತಿಗೆಂದು ಬಿಡುಗಡೆ ಮಾಡಿದ 50 ಲಕ್ಷಗಳನ್ನು ಸರಿಯಾಗಿ ಬಳಕೆ ಮಾಡಿಕೊಳ್ಳದೇ ಬಿಡುಗಡೆ ಮೊತ್ತಕ್ಕೆ ಅಂದಾಜು ವೆಚ್ಚದ ಅಂದಾಜು ಪತ್ರಿಕೆ ಸಿದ್ಧಪಡಿಸಿ ನೀಡಿಲ್ಲವೇಕೆ? ಅಭಿವೃದ್ಧಿ ಕಾಮಗಾರಿಗೆ ವಿಳಂಬ ಮಾಡಿದಲ್ಲಿ ಶಿಸ್ತು ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಗುರುಮಠಕಲ್ ಮತಕ್ಷೇತ್ರದ ವ್ಯಾಪ್ತಿಯ ಗ್ರಾಮಾಂತರ ಪ್ರದೇಶದಲ್ಲಿ ಶೇ.80ರಷ್ಟು ವಿದ್ಯುತ್ ಪರಿವರ್ತಕಗಳು ಸುಟ್ಟು ಹೋಗುತ್ತಿವೆ. ಈ ಬಗ್ಗೆ ಜೆಸ್ಕಾಂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ ಎಂದು ಸಚಿವರು ಎಚ್ಚರಿಸಿದರು.
ಸಚಿವರ ಆರೋಪಕ್ಕೆ ಪ್ರತಿಕ್ರಿಯಿಸಿದ ಜೆಸ್ಕಾಂ ಅಧಿಕಾರಿಗಳು ತಾವು ಹೊಸದಾಗಿ ಬಂದಿದ್ದು, ಕಳೆದ ಒಂದು ತಿಂಗಳಿನಿಂದ ಶೇ.50ರಷ್ಟು ಸಮಸ್ಯೆ ಬಗೆಹರಿದಿದೆ. ಇನ್ನುಳಿದ ಸಮಸ್ಯೆಯನ್ನು ಶೀಘ್ರದಲ್ಲೇ ಬರೆಹರಿಸಲಾಗುದು ಎಂದು ಸಚಿವರಿಗೆ ವಿವರಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ್ ಸೇರಿದಂತೆ ಜಿಲ್ಲಾಮಟ್ಟದ ಆದಿಕಾರಿಗಳು ಉಪಸ್ಥಿತರಿದ್ದರು.