21ರಿಂದ ಮೆಗಾ ಲೋಕ್ ಅದಾಲತ್
ಕನ್ನಡಪ್ರಭ ವಾರ್ತೆ ಗುಲ್ಬರ್ಗ ನ.8
ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರವು ನವೆಂಬರ್ 23 ರಂದು ರಾಜ್ಯಮಟ್ಟದಲ್ಲಿ ಮೆಗಾ ಲೊಕ್ ಅದಾಲತ್ ನಡೆಸುತ್ತಿರುವುದರಿಂದ ಗುಲ್ಬರ್ಗ ಜಿಲ್ಲೆಗೆ ಸಂಬಂಧಿಸಿದಂತೆ ಜಿಲ್ಲೆಯ ಎಲ್ಲ ನ್ಯಾಯಲಯಗಳಲ್ಲಿ ಒಟ್ಟು 30080 ಪ್ರಕರಣಗಳು ಬಾಕಿ ಇದ್ದು, ಇದರಲ್ಲಿ ಅಕ್ಟೋಬರ್ 31ರವರೆಗೆ ಸುಮಾರು 523 ಪ್ರಕರಣಗಳು ಹಾಗೂ ನ.5 ರಂದು 100 ಪ್ರಕರಣಗಳು ಹೀಗೆ ಒಟ್ಟು 623 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸಿದೆ.
ಮೆಗಾ ಲೋಕ್ ಅದಾಲತ್ ನಡೆಯವ ದಿನಾಂಕದವರೆಗೆ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಗುಲ್ಬರ್ಗ ಮತ್ತು ಜಿಲ್ಲೆಯ ಎಲ್ಲ ತಾಲೂಕು ನ್ಯಾಯಲಯಗಳಲ್ಲಿ ನವೆಂಬರ್ 5 ರಿಂದ 23ರವರೆಗೆ ಪ್ರತಿದಿನ ನಡೆಯುವ ಲೋಕ್ ಅದಾಲತ್ನಲ್ಲಿ ವಿಚಾರಣೆಗೆ ಬಾಕಿ ಇರುವ ಪ್ರಕರಣಗಳಲ್ಲಿ ರಾಜಿ ಸಂಧಾನ ಮೂಲಕ ಕನಿಷ್ಠ 2000-300 ಪ್ರಕರಣಗಳು ಇತ್ಯರ್ಥಪಡಿಸಲು ಗುಲ್ಬರ್ಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಗುರಿ ಹೊಂದಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಡಿ.ಆರ್. ವೆಂಕಟಸುದರ್ಶನ ತಿಳಿಸಿದ್ದಾರೆ.
ಪ್ರತಿದಿನ ನಡೆಯುವ ಈ ಲೋಕ್ ಅದಾಲತ್, ಜನತಾ ಅದಾಲತ್ನಲ್ಲಿ ಒಬ್ಬ ಸೇವೆಯಲ್ಲಿರುವ ಅಥವಾ ನಿವೃತ್ತ ನ್ಯಾಯಾಧೀಶರು ಹಾಗೂ ನುರಿತ ವಕೀಲರು ಉಪಸ್ಥಿತರಿದ್ದು, ಅವರ ಉಭಯ ಪಕ್ಷಗಾರರಿಗೆ ರಾಜಿ ಸಂಧಾನ ಮೂಲಕ ಇತ್ಯರ್ಥಪಡಿಸಲು ಮಾರ್ಗದರ್ಶನ ನೀಡುತ್ತಾರೆ. ಇದಕ್ಕಾಗಿ ಜಿಲ್ಲಾ ನ್ಯಾಲಯದಲ್ಲಿ 4 ಪೀಠಗಳನ್ನು ಅಳವಡಿಸಲಾಗಿದೆ.
ಲೋಕ್ ಅದಾಲತ್ನಿಂದ ಲಾಭಗಳು: ಲೋಕ್ ಅದಾಲತ್ನಲ್ಲಿ ಪ್ರಕರಣಗಳು ಇತ್ಯರ್ಥಪಡಿಸಿಕೊಳ್ಳುವ ಪಕ್ಷಕಾರರಿಗೆ ಜನತಾ ನ್ಯಾಯಲಯಗಳಲ್ಲಿ ಉಭಯ ಪಕ್ಷಕಾರರು ರಾಜಿ ಮಾಡಿಕೊಳ್ಳಲು ಮಾರ್ಗದರ್ಶನ ನೀಡಲಾಗುವುದು, ಜನತಾ ನ್ಯಾಯಾಲಯದಲ್ಲಿ ಕೊಡುವ ತೀರ್ಪು ನ್ಯಾಯಲಯದಲ್ಲಿ ಕೊಡುವ ತೀರ್ಪಿನಷ್ಠೆ ಪರಿಣಾಮಕಾರಿಯಾಗುತ್ತದೆ. ಪಕ್ಷಗಾರರು ತಮ್ಮ ವ್ಯಾಜ್ಯವನ್ನು ಜನತಾ ನ್ಯಾಯಾಲಯದ ಮೂಲಕ ಕಡಿಮೆ ಖರ್ಚಿನಲ್ಲಿ ಮತ್ತು ಶೀಘ್ರವಾಗಿ ಇತ್ಯರ್ಥಗೊಳಿಸಿಕೊಳ್ಳಬಹುದು. ಜನತಾ ನ್ಯಾಯಾಲಯದಲ್ಲಿ ಪಕ್ಷಗಾರರು ವಕೀಲರ ಮುಖಾಂತರವೇ ಭಾಗವಹಿಸಬೇಕೆನ್ನುವ ನಿಯಮ ಇರದಿರುವುದರಿಂದ ಪಕ್ಷಗಾರರು ನೇರವಾಗಿ ಭಾಗವಹಿಸಬಹುದು.
ರಾಜಿ ಸಂಧಾನದ ಮೂಲಕ ಪ್ರಕರಣವನ್ನು ಇತ್ಯರ್ಥಪಡಿಸಿಕೊಂಡಲ್ಲಿ ನ್ಯಾಯಲಯಕ್ಕೆ ಪಾವತಿಸಲಾದ ನ್ಯಾಯಲಯದ ಶುಲ್ಕವನ್ನು ಪೂರ್ಣವಾಗಿ ಹಿಂದಿರುಗಿಸಲಾಗುವುದು ಮತ್ತು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡ ಪ್ರಕರಣಗಳಿಗೆ ಮೇಲ್ಮನವಿ ಅವಕಾಶ ಇರುವುದಿಲ್ಲ.
ಲೋಕ್ ಅದಾಲತ್ಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಗುಲ್ಬರ್ಗ ಜಿಲ್ಲಾ ಮತ್ತು ತಾಲೂಕು ಕಾನೂನು ಸೇವಾ ಪ್ರಾಧಿಕಾರವನ್ನು ಸಂಪರ್ಕಿಸಿ ಇದರ ಲಾಭವನ್ನು ಕಕ್ಷಿದಾರರು ಪಡೆಯಲು ಕೋರಲಾಗಿದೆ.