8 ಕೋಟಿ ವೆಚ್ಚದ 108 ಅಡಿ ಪಂಚಮುಖಿ ಪರಮೇಶ್ವರ ಸ್ಥಾಪನೆಗೆ ಅಡಿಗಲ್ಲು
ಕನ್ನಡಪ್ರಭ ವಾರ್ತೆ ಆಳಂದ ನ.8
ಆಳಂದ ತಾಲೂಕಿನ ಕೊರಳ್ಳಿ ಸಮೀಪದ ಅಮರ್ಜಾ ಡ್ಯಾಂನಲ್ಲಿರುವ ನಿರಗುಡಿಯ ಮಲ್ಲಯ್ಯ ಮುತ್ತ್ಯಾ ಅವರ ಕೈಲಾಸ ಆಶ್ರಯದಲ್ಲಿ ಸುಮಾರು 8 ಕೋಟಿ ವೆಚ್ಚದಲ್ಲಿ 108 ಅಡಿಯ ಪಂಚಮುಖಿ ಪರಮೇಶ್ವರಮೂರ್ತಿ ಪ್ರತಿಷ್ಠಾಪನೆಗೆ ಶಾಸಕ ಬಿ.ಆರ್. ಪಾಟೀಲ್ ಶಂಕುಸ್ಥಾಪನೆ ನೆರವೇರಿಸಿದರು.
ಬಳಿಕ ಸಮಾರಂಭ ಉದ್ದೇಶಿಸಿ ಮಾತನಾಡಿದ ಶಾಸಕರು, ನಿರುಗುಡಿಯ ಮುತ್ತ್ಯಾ ಅವರು ಬಹುದೊಡ್ಡ ತಪ್ಪಸ್ವಿಗಳಾಗಿದ್ದು, ನಾನಾ ಭಾಗದಲ್ಲಿ ಬಹುದೊಡ್ಡ ಪ್ರಮಾಣದಲ್ಲಿ ಧಾರ್ಮಿಕವಾಗಿ ಸರ್ಕಾರ ಮಾಡದೆ ಇರುವ ಕೆಲಸವನ್ನು ಅವರು ಮಾಡಿ ತೋರಿಸಿದ್ದಾರೆ ಎಂದರು.
ಈ ಭಾಗದಲ್ಲಿ 108 ಅಡಿ ಬೃಹತ್ ಪ್ರಮಾಣದ ಹಣದಿಂದ ಮೂರ್ತಿ ಸ್ಥಾಪನೆಗೆ ಮುಂದಾಗಿರುವುದು ಅವರ ಈ ಸತ್ಕಾರ್ಯಕ್ಕೆ ಎಲ್ಲರೂ ಮೆಚ್ಚಿ ಬೆಂಬಲಿಸಬೇಕಾಗಿದೆ. ಮೂರ್ತಿ ಸ್ಥಾಪನೆಯಿಂದ ಈ ಭಾಗದ ಪ್ರೇಕ್ಷಣಿಕ ಸ್ಥಳವಾಗಿ ರೂಪುಗೊಳ್ಳಲಿದೆ. ಪ್ರವಾಸೋದ್ಯಮ ಇಲಾಖೆಯಿಂದ ಅನುದಾನಕ್ಕಾಗಿ ಪ್ರಯತ್ನಿಸಲಾಗುವುದು. ಈ ಯೋಜನೆಯಿಂದ ಜಿಲ್ಲೆಯ ಪ್ರವಾಸಿ ತಾಣವಾಗಿ ಈ ತಾಲೂಕು ಹೊರಹೊಮ್ಮಲಿದೆ ಎಂದರು.
ಆಶ್ರಮಾಧಿಪತಿ ನಿರುಗುಡಿ, ಬಿಗವಾನದ ಮಲ್ಲಯ್ಯ ಮುತ್ತ್ಯಾ ಅವರು ಸಾನ್ನಿಧ್ಯ ವಹಿಸಿ ಮಾತನಾಡಿದರು. ಮಾಜಿ ಸಚಿವ ರೇವುನಾಯಕ ಬೆಳಮಗಿ, ಜೈಕರವೇ ಜಿಲ್ಲಾಧ್ಯಕ್ಷ ಈರಣ್ಣ ಸಾರವಾಡ ಕೊರಳ್ಳಿ, ಜಿಪಂ ಅಧ್ಯಕ್ಷ ರಮೇಶ ಮರಗೊಳ ಮಾತನಾಡಿದರು. ಮಾಜಿ ಶಾಸಕ ಅಣ್ಣರಾವ ಕೊರಳ್ಳಿ, ಜಿಪಂ ಸದಸ್ಯೆ ಮೀನಾಕ್ಷಿದೇವಿ ಗುರುಶರಣ ಪಾಟೀಲ್, ಸಾಯಬಣ್ಣ ಅಡೆಜಿ, ದುಧನಿಯ ಸಾತಲಿಂಗಪ್ಪ ಮೇತ್ರೆ, ರವಿಂದ್ರ ಜಿ. ಗಾಯಕವಾಡ, ಪುರಸಭೆ ಮಾಜಿ ಅಧ್ಯಕ್ಷ ವಿಠ್ಠಲರಾವ್ ಪಾಟೀಲ್, ಕೆಜೆಪಿ ತಾಲೂಕು ಅಧ್ಯಕ್ಷ ಶಿವುಪುತ್ರಪ್ಪ ಪಾಟೀಲ್, ತಾಪಂ ಮಾಜಿ ಅಧ್ಯಕ್ಷ ಮೋಹನಗೌಡ ಪಾಟೀಲ್ ಇತರರಿದ್ದರು.