ಅಂಬೇಡ್ಕರ್ ಪ್ರತಿಮೆ ಸ್ಥಳ ಬದಲಿಸಲು ಆಗ್ರಹ
ಗುಲ್ಬರ್ಗ: ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದ ಡಾ. ಅಂಬೇಡ್ಕರ್ ಚೌಕ್ನಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಪ್ರತಿಮೆಯನ್ನು ಪಟ್ಟಣದ ಇಂದಿರಾ ಕಾಲೋನಿಯ ಅಂಬೇಡ್ಕರ್ ಕಲ್ಯಾಣ ಮಂಟಪ ಸ್ಥಳದ ಖಾಲಿ ನಿವೇಶನದಲ್ಲಿ ಸ್ಥಾಪಿಸಬೇಕೆಂದು ರಾಜ್ಯ ದಲಿತ ಸಂಘರ್ಷ ಸಮಿತಿ ತಾಲೂಕು ಸಂಘಟನಾ ಸಂಚಾಲಕ ಶರಣಬಸು ಸಿರೂರಕರ್ ಶಾಸಕ ಪ್ರಿಯಾಂಕ್ ಖರ್ಗೆ ಅವರನ್ನು ಆಗ್ರಸಿದ್ದಾರೆ.
ಡಾ. ಅಂಬೇಡ್ಕರ್ ಸ್ವಾತಂತ್ರ್ಯ ಪೂರ್ವದಲ್ಲಿ ವಾಡಿ ಪಟ್ಟಣಕ್ಕೆ ಆಗಮಿಸಿ ಕೆಲಕಾಲ ವಿಶ್ರಾಂತಿ ಪಡೆದು ಹೈದ್ರಾಬಾದಿಗೆ ಪ್ರಯಾಣ ಬೆಳೆಸಿದ್ದರ ನೆನಪಿಗಾಗಿ ಪಟ್ಟಣದ ರೈಲು ನಿಲ್ದಾಣದ ಮುಂಭಾಗದ ವೃತ್ತಕ್ಕೆ ಅಂಬೇಡ್ಕರ್ ಹೆಸರು ನಾಮಕರಣ ಮಾಡಲಾಗಿದೆ ಎಂದಿದ್ದಾರೆ.
ಸಮಾಜದ ಹಿರಿಯರು ಇಲ್ಲಿ ಅಂಬೇಡ್ಕರ್ ಮೂರ್ತಿ ಸ್ಥಾಪಿಸಿದ್ದರು. ಆದರೆ ಕಳೆದ ಮೂರು ವರ್ಷದ ಹಿಂದೆ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ನಡೆದ ಅತಿಕ್ರಮಣ ಕಟ್ಟಡಗಳ ತೆರವು ಕಾರ್ಯಾಚರಣೆ ಸಂದರ್ಭದಲ್ಲಿ ಪಟ್ಟಣದಲ್ಲಿದ್ದ ವಿವಿಧ ಧಾರ್ಮಿಕ ಕಟ್ಟಡಗಳ ಜತೆಗೆ ಡಾ. ಅಂಬೇಡ್ಕರ್ ಪ್ರತಿಮೆಯೂ ತೆರವುಗೊಳಿಸಲಾಗಿತ್ತು. ಆದರೆ, ಸ್ಥಳೀಯ ಪುರಸಭೆ ಆಡಳಿತ ಪುನ: ಅದೇ ಸ್ಥಳದಲ್ಲಿ ನಿಂತ ಪ್ರತಿಮೆ ನಿರ್ಮಿಸಲು ಸಿದ್ಧತೆ ನಡೆಸಿದೆ. ಹೀಗೆ ಮೊದಲಿನ ಸ್ಥಳದಲ್ಲಿಯೇ ಪ್ರತಿಮೆ ನಿರ್ಮಿಸಿದರೆ ಮತ್ತೊಂದು ದಿನ ತೆರವಿಗೆ ಕಾರಣವಾಗಬುದು ಎಂಬುವುದನ್ನು ಗಮನದಲ್ಲಿ ಇಟ್ಟುಕೊಂಡು, ಸುರಕ್ಷಿತ ಸ್ಥಳದಲ್ಲಿ ಪ್ರತಿಮೆ ನಿರ್ಮಿಸುವತ್ತ ಪುರಸಭೆ ಆಡಳಿತ ಹಾಗೂ ಶಾಸಕರು ಯೋಚಿಸಬೇಕೆಂದು ಒತ್ತಾಯಿಸಿದ್ದಾರೆ.
ಡಾ. ಅಂಬೇಡ್ಕರ್ ಕಲ್ಯಾಣ ಮಂಟಪಕ್ಕೆಂದು ಮೀಸಲಿರುವ ಸ್ಥಳದಲ್ಲಿ ಭವ್ಯ ಕಟ್ಟಡ ಅಥವಾ ಸುಂದರ ಉದ್ಯಾನವನ ನಿರ್ಮಿಸುವ ಮೂಲಕ ಅಲ್ಲಿಯೇ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಬೇಕು. ಅಲ್ಲದೆ ಈ ಹಿಂದೆ ಸ್ಥಾಪಿಸಲಾದ ಅಂಬೇಡ್ಕರ್ ಚಿಕ್ಕ ಮೂರ್ತಿಯನ್ನು ಅಂಬೇಡ್ಕರ್ ವೃತ್ತದ ಸ್ಮಾರಕ ಭವನದ ಎದುರು ಸ್ಥಾಪಿಸಲು ಕರಾದಸಂಸ ಸಂಪೂರ್ಣ ಸಹಕಾರ ಹಾಗೂ ಬೆಂಬಲ ನೀಡುತ್ತದೆ ಎಂದು ಶರಣಬಸು ಸಿರೂರಕರ್ ತಿಳಿಸಿದ್ದಾರೆ.