'ಕಾನೂನಿನ ಅರಿವಿನಿಂದ ಸಮಸ್ಯೆ ಬಗೆಹರಿಸಿಕೊಳಿ' ಕಾನೂನು ಅರಿವು ಕಾರ್ಯಕ್ರಮದಲ್ಲಿ ನ್ಯಾ. ಡಿ.ಪಿ.ನಾಯಕ
ಗುಲ್ಬರ್ಗ/ಶಹಾಬಾದ್: ಸಮಾಜದಲ್ಲಿ ಎಲ್ಲರಿಗೂ ಸಮಸ್ಯೆಗಳು ಎದುರಾಗುತ್ತವೆ. ಸಮಸ್ಯೆಗಳು ಎದುರಾದಾಗ ದುಡುಕಿ ಕಾನೂನು ಕೈಗೆ ತೆಗೆದುಕೊಳ್ಳದೆ, ಸೂಕ್ತ ಕಾನೂನು ಸಲಹೆ ಪಡೆಯಬೇಕು. ಕಾನೂನು ಚೌಕಟ್ಟಿಲ್ಲಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಅರಿವು ಮುಖ್ಯ ಎಂದು ಚಿತ್ತಾಪುರ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ, ಹಿರಿಯ ಸಿವಿಲ್ ನ್ಯಾಯಾಧೀಶರಾದ ಡಿ.ಪಿ.ನಾಯಕ ಸಲಹೆ ನೀಡಿದರು.
ಇಲ್ಲಿನ ನಾಲವಾರ ವಲಯದ ಸೂಗೂರ(ಎನ್) ಗ್ರಾಮದಲ್ಲಿ ಸಂಚಾರಿ ನ್ಯಾಯಾಲಯ, ಕಾನೂನು ಅರಿವು ಜಾಥಾ ಅಂಗವಾಗಿ ಚಿತ್ತಾಪುರ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘದ ಆಶ್ರಯದಲ್ಲಿ ನಡೆದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಾರ್ವಜನಿಕ ವಲಯದಲ್ಲಿ ಕೌಟುಂಬಿಕ ಕಲಹಗಳು ಹುಟ್ಟುತ್ತವೆ. ಸಮಸ್ಯೆಗಳಿಗೆ ಅವಿವೇಕದಿಂದ ವರ್ತಿಸಿ ಕಾನೂನು ಉಲ್ಲಂಘನೆ ಮಾಡದೆ, ಕಾನೂನು ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಂಡು, ಸಮಸ್ಯೆ ರಹಿತ ಜೀವನವನ್ನು ಸಾಗಿಸಬೇಕೆಂದು ಹೇಳಿದರು.
ನ್ಯಾಯವಾದಿ ಚಂದ್ರಶೇಖರ ಅವಂಟಿ ಮಾತನಾಡಿದರು. ಈಶ್ವರ ಅಳ್ಳೊಳ್ಳಿ ಅವರು ವರದಕ್ಷಿಣೆ ಕಾಯ್ದೆ, ಸಿ.ಎಸ್. ಪೂಜಾರಿ ಅವರು ಮಕ್ಕಳ ಶಿಕ್ಷಣ, ಮಕ್ಕಳಿಗೆ ಮಾನಸಿಕ ಹಿಂಸೆ, ಒತ್ತಡ ಕುರಿತು ಮಾತನಾಡಿದರು.
ಶಿರಸ್ತೇದಾರ ಶ್ರೀನಿವಾಸ ಚಾಪೇಲ್, ಬಸವರಂತರೆಡ್ಡಿ ಪಾಟೀಲ್, ನ್ಯಾಯವಾದಿ ಎಸ್.ಟಿ. ಪಾಟೀಲ್, ಎಸ್.ಎನ್. ಜೋಶಿ, ಉಪತಹಸೀಲ್ದಾರ್ ಚಂದು ಜಾಧವ್, ವಾಮನರಾವ್ ಕುಲ್ಕರ್ಣಿ, ಮಲ್ಲಣ್ಣಗೌಡ ಪೊಲೀಸ್ ಪಾಟೀಲ್, ಶ್ರೀಮಂತ ಬಾವಿ, ಮರೆಪ್ಪ ಬಡಿಗೇರ, ಪರ್ವತರೆಡ್ಡಿ, ಮಹೇಶ ಗೌಡ, ಶರಣಗೌಡ ಬೆನಕನಳ್ಳಿ, ಮಹಿಪಾಲರೆಡ್ಡಿ ಇದ್ದರು.
ಕಾರ್ಯಕ್ರಮದಲ್ಲಿ ಕಡಬೂರ ಗ್ರಾಪಂ ಅಧ್ಯಕ್ಷ ಸಿದ್ದಮ್ಮ ಮರಲಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು.