ಗಳಿಗೆ ಪುರುಸೊತ್ತಿಲ್ಲ,ಗಳಿಕೆಯೂ ಇಲ್ಲ!!
ಕನ್ನಡಪ್ರಭ ವಾರ್ತೆ ಟಿ ಗುಲ್ಬರ್ಗ ಟಿ ನ.8
ನಿತ್ಯವೂ ಹದಗೆಟ್ಟ ರಸ್ತೆಗಳ ಹಳ್ಳಿ-ತಾಂಡಾಗಳಲ್ಲಿ ನೂರಾರು ವಿದ್ಯುತ್ ಸ್ಥಾವರಗಳಿಗೆ ಭೇಟಿ ನೀಡಬೇಕು. ಬಿಲ್ ಕೊಟ್ಟು ದುಡ್ಡು ಪಡೆಯಬೇಕು. ಹೀಗೆ ಪಡೆದ ದುಡ್ಡನ್ನು ಆಯಾ ದಿನದಂದೇ ತಾಲೂಕು ಕೇಂದ್ರಕ್ಕೆ ಹೋಗಿ ಭರಿಸಬೇಕು....!
ಗ್ರಾಮ ವಿದ್ಯುತ್ ಪ್ರತಿನಿಧಿಗಳು (ಜಿವಿಪಿ) ಮಾಡುವ ಈ ಕೆಲಸಗಳಿಗೆ ಗುಲ್ಬರ್ಗ ವಿದ್ಯುತ್ ಕಂಪನಿ(ಜೆಸ್ಕಾಂ)ಯಿಂದ ಯಾವುದೇ ಭತ್ಯೆ ನೀಡುವುದಿಲ್ಲ. ಕೆಲಸದ ಮಧ್ಯೆ ಇವರಿಗೆ ಅನಾರೋಗ್ಯ ಕಾಡಿದರೂ ಕರುಣೆ- ಅನುಕಂಪ ಕನಸಿನ ಮಾತು. ಸೇವಾ ಭದ್ರತೆಯೂ ಇಲ್ಲ. ಕೆಲಸದಿಂದಲೇ ತೆಗೆಯುತ್ತಾರೆ.
ಈ ಜಿವಿಪಿಗಳು ಜೆಸ್ಕಾಂ ಅಡಿಯಲ್ಲಿ ಕಳೆದೊಂದು ದಶಕದಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಂಪನಿಯ ನಿಲವಿಗೆ ಬೇಸತ್ತ ಈ ಜಿವಿಪಿಗಳು ಇದೀಗ ಹೋರಾಟಕ್ಕೆ ಇಳಿದಿದ್ದಾರೆ. ಕಳೆದ 3 ದಿನಗಳಿಂದ ತಮ್ಮೆಲ್ಲ ಕೆಲಸಗಳನ್ನೂ ಬಿಟ್ಟು ಮುಷ್ಕರ ಆರಂಭಿಸಿದ್ದಾರೆ.
ಗ್ರಾಪಂಗೆ ಒಬ್ಬ ಪ್ರತಿನಿಧಿ: ಜಿವಿಪಿ ಯೋಜನೆಯಲ್ಲಿ ರೋಸ್ಟರ್, ಮೆರಿಟ್ ಆಧಾರದಲ್ಲಿ ಆಯ್ಕೆಯಾಗಿರುವ ಇವರೆಲ್ಲರನ್ನೂ ಕಂಪನಿ ಮೈಕ್ರೋ ಫೀಡರ್ ಪ್ರಾಂಚೈಸೀಸ್ (ಎಂಎಫ್ಎಫ್) ಎಂದು ನೇಮಿಸಿಕೊಂಡಿದೆ. ಗ್ರಾಪಂಗೆ ಒಬ್ಬರಂತೆ ಕಂಪನಿ ವ್ಯಾಪ್ತಿಯಲ್ಲಿ ಬರುವ ಆರು ಜಿಲ್ಲೆಗಳಲ್ಲಿ 999 ಮಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ಹಳ್ಳಿಗಾಡಿನಲ್ಲಿ ವಿದ್ಯುತ್ ಬಿಲ್ ಪಾವತಿಯಲ್ಲಿ ನಿಖರತೆ ಹೆಚ್ಚಿಸುವ ಉದ್ದೇಶದಿಂದ ಜಾರಿಗೆ ಬಂದ ಈ ಯೋಜನೆ ಕಂಪನಿ ಪಾಲಿಗೆ ವರದಾನವಾಗಿದೆ. ಇವರಿಂದಲೇ ಕಂಪನಿಯ ಆದಾಯದಲ್ಲಿ ಹೆಚ್ಚಳ ಕಂಡಿದೆ. ಕಮಿಷನ್ ಆಧಾರದ ಮೇಲೆ ಇವರನ್ನು ನೇಮಿಸಿಕೊಂಡ ಕಂಪನಿ ಈಗ ಉಪದ್ರವ ನೀಡಲು ಆರಂಭಿಸಿದೆ.
ಮಾಸಿಕ ವೇತನ ಬೇಕಲ್ಲವೆ?: ಕಂಪನಿ ಇವರು ಸಂಗ್ರಹಿಸುವ ಬಿಲ್ಗೆ ತಕ್ಕಂತೆ ಕಮಿಷನ್ ನಿಗದಿಪಡಿಸಿದೆಯೇ ಹೊರತು ಮಾಸಿಕ ವೇತನವನ್ನೇ ನೀಡುತ್ತಿಲ್ಲ. ಮಧ್ಯದಲ್ಲಿ ಯಾರಾದರೂ ಬಿಲ್ ಬಾಕಿ ಉಳಿಸಿಕೊಂಡರೋ, ಇವರಿಗೆ ಗುರಿ ಮುಟ್ಟುವುದು ಕಷ್ಟ. ಅಲ್ಲದೇ ಕಂಪನಿಯೇ ಇವರಿಗೆ ದಂಡ ವಿಧಿಸುತ್ತದೆ. ಇದೀಗ ಜಿವಿಪಿಗಳು ಮಾಸಿಕ 15 ಸಾವಿರ ವೇತನ, ಸೇವಾ ಭದ್ರತೆ ನೀಡಬೇಕೆಂದು ಜಿವಿಪ ಸಂಘದ ಅಧ್ಯಕ್ಷರಾದ ಚಂದ್ರಶೇಖರ್ ಹಿರೇಮಠ ನೇತೃತ್ವದಲ್ಲಿ ಕಳೆದ ಮೂರು ದಿನಗಳಿಂದ ಧರಣಿ ನಡೆಸುತ್ತಿದ್ದಾರೆ. ಸರ್ಕಾರ ಸ್ಪಂದಿಸುವವರೆಗೂ ಧರಣಿ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಜೆಸ್ಕಾಂಗೆ ಲಕ್ಷಾಂತರ ನಷ್ಟ: ಜೆಸ್ಕಾಂ ವ್ಯಾಪ್ತಿಯಲ್ಲಿರುವ 23.97 ಲಕ್ಷ ಗ್ರಾಹಕರಿಗಾಗಿ ಗುಲ್ಬರ್ಗ, ಬಳ್ಳಾರಿ, ರಾಯಚೂರು, ಕೊಪ್ಪಳ, ಬೀದರ್, ಯಾದಗಿರಿ ಸೇರಿದಂತೆ 6 ಜಿಲ್ಲೆಗಳ ವ್ಯಾಪ್ತಿಯಲ್ಲಿ 999 ಜಿವಿಪಿಗಳಿದ್ದಾರೆ. ಈ ಪೈಕಿ ಇದೀಗ 896 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ಇವರು ಧರಣಿ ಕೂತಿರುವುದರಿಂದ ಕಂಪನಿಗೆ ಲಕ್ಷಾಂತರ ರುಪಾಯಿ ನಷ್ಟವಾಗುತ್ತಿದೆ.
ಸ್ಥಳೀಯವಾಗಿ ಜೆಸ್ಕಾಂ ಎಂಡಿ ಪಲ್ಲವಿ ಆಕುರಾತಿ ಮಾತುಕತೆ ನಡೆಸಿದ್ದಾರೆ. ಪ್ರತಿನಿಧಿಗಳ ಮೇಲಿನ ಕಿರುಕುಳ ತಪ್ಪಿಸಲು ಅಗತ್ಯ ಬಿದ್ದಲ್ಲಿ ಸಮಿತಿ ರಚಿಸುವ ಭರವಸೆ ನೀಡಿದ್ದಾರೆ. ಆದರೆ ಮಾಸಿಕ ವೇತನದ ವಿಚಾರ, ಸೇವಾ ಭದ್ರತೆ ಬಗ್ಗೆ ಇವರು ಸರ್ಕಾರಕ್ಕೆ ಬರೆಯುವುದಾಗಿ ಹೇಳಿದ್ದಾರೆ.
- ಚಂದ್ರಶೇಖರ ಹಿರೇಮಠ, ಅಧ್ಯಕ್ಷ, ಗ್ರಾಮ ವಿದ್ಯುತ್ ಪ್ರತಿನಿಧಿಗಳ ಸಂಘ.
-ಶೇಷಮೂರ್ತಿ ಅವಧಾನಿ