ಗುಣಮಟ್ಟದ ಕಾಮಗಾರಿಗೆ ಶಾಸಕರ ಸೂಚನೆ
ಸುರಪುರ: ಸರ್ಕಾರಿ ಕೆಲಸ ಹೇಗಾದರೂ ಮಾಡಿದರೆ ನಡೆಯುತ್ತದೆ ಎಂದು ಭಾವಿಸಬೇಡಿ. ನೀವು ಮಾಡಿದ ಕೆಲಸ ಸ್ಮರಣೆಯಲ್ಲಿ ಉಳಿಯುವಂತೆ ಕಾಮಗಾರಿಯಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ಭೂಸೇನಾ ನಿಗಮದ ಅಧಿಕಾರಿಗಳಿಗೆ ಸೂಚಿಸಿದರು.
ಪುರಸಭೆ ವ್ಯಾಪ್ತಿಯ ವೆಂಕಟಾಪೂರದಲ್ಲಿ ನಗರೋತ್ಥಾನ ಯೋಜನೆ ಅಡಿಯಲ್ಲಿ ಭೂ ಸೇನಾ ನಿಗಮ ಕೈಗೆತ್ತಿಕೊಂಡ ರು. 25 ಲಕ್ಷ ವೆಚ್ಚದ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಶುಕ್ರವಾರ ಅಡಿಗಲ್ಲು ನೆರವೇರಿಸಿ ಮಾತನಾಡಿದರು.
ಕಳಪೆ ಬೇಡ: ಒಳಚರಂಡಿ ಕಳಪೆ ಕಾಮಗಾರಿಯಿಂದ ಪಟ್ಟಣದ ಎಲ್ಲಾ ವಾರ್ಡ್ಗಳಲ್ಲಿನ ರಸ್ತೆ ಸಂಪೂರ್ಣ ಹಾಳಾಗಿ ಹೋಗಿವೆ. ಇದರಿಂದ ನಾಗರಿಕರ ಸಂಚಾರಕ್ಕೆ ತೊಂದರೆಯಾಗಿದೆ. ಅವೆಲ್ಲವುಗಳನ್ನು ಸರಿಪಡಿಸಿ ಉತ್ತಮ ರೀತಿಯ ರಸ್ತೆ ಮತ್ತು ಚರಂಡಿಗಳನ್ನು ನಿರ್ಮಿಸಬೇಕು. ಕಳಪೆ ಕಂಡು ಬಂದರೆ ಸಹಿಸಲಾಗುವುದಿಲ್ಲ ಎಂದು ಕಾಮಗಾರಿ ಉಸ್ತುವಾರಿ ವಹಿಸಿಕೊಂಡ ಭೂ ಸೇನಾ ಇಲಾಖೆ ಎಂಜಿನೀಯರರಿಗೆ ತಾಕೀತು ಮಾಡಿದರು.
ಸಹಕರಿಸಿ: ಮುಂಬರುವ ದಿನಗಳಲ್ಲಿ ಪಟ್ಟಣದ ಪ್ರತಿ ವಾರ್ಡ್ಗಳಲ್ಲಿ ಹಂತಹಂತವಾಗಿ ಸಿಸಿ ರಸ್ತೆ ಚರಂಡಿ ನಿರ್ಮಿಸಲಾಗುವುದು. ಅಭಿವೃದ್ಧಿ ಕಾಮಗಾರಿಯಲ್ಲಿ ಪುರಸಭೆ ಸದಸ್ಯರು ಪಕ್ಷಬೇಧ ಮರೆತು ಸಹಕರಿಸಬೇಕು. ಜಿಲ್ಲೆಯಲ್ಲಿಯೇ ಸುರಪುರವನ್ನು ಮಾದರಿ ಪಟ್ಟಣವನ್ನಾಗಿ ಮಾಡುವ ಸಂಕಲ್ಪಕ್ಕೆ ತಾವು ಬದ್ಧರಿರುವುದಾಗಿ ಹೇಳಿದರು.
ಪುರಸಭೆ ಅಧ್ಯಕ್ಷ ದೇವಿಂದ್ರಪ್ಪ ಕಳ್ಳಿಮನಿ, ಸದಸ್ಯರಾದ ಜ್ಯೋತಿ ವೆಂಕಟರಡ್ಡಿ ಭೋವಿ, ಮಹಿಬೂಬ್ ಹುಸೇನ್ ಒಂಟಿ, ಅಪ್ಸರ್ ಹುಸೇನ್ ದಲಾಲ್, ವೆಂಕಟೇಶ ನಾಯಕ, ಮುಖಂಡರಾದ ಶಿವಣ್ಣ ಮಂಗ್ಯಾಳ, ಸೂಲಪ್ಪ ಕಮತಗಿ, ವಿಠ್ಠಲ ಯಾದವ್, ವೆಂಕೋಬ ಮಂಗಳೂರ, ಸೂಗೂರೇಶ ವಾರದ, ಅಬ್ದುಲ್ ಗಫಾರ ನಗನೂರಿ, ನಾಗಪ್ಪ ಕಟ್ಟಿಮನಿ, ಶಿವುಕುಮಾರ ಎಲಿಗಾರ, ಪುರಸಭೆ ಮುಖ್ಯಾಧಿಕಾರಿ ಏಜಾಜ ಹುಸೇನ್, ಭೂ ಸೇನಾ ಇಲಾಖೆ ಸಹಾಯಕ ನಿರ್ದೇಶಕ ಎಲ್.ಜೆ. ಪಾಟೀಲ್, ಜೆಇ ಗಳಾದ ಸದಾನಂದ, ಸೂರ್ಯಪ್ರಕಾಶ ಇದ್ದರು.