ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಮಾರ್ಚ್‌ಗೆ ರಸ್ತೆ ಸಂಪೂರ್ಣ

Vishwanath S
Updated On : 9 Nov 2013, 12:17 pm

ಕನ್ನಡಪ್ರಭ ವಾರ್ತೆ ಟಿ ಚಿಂಚೋಳಿ ಟಿ ನ.8
ಹಲವು ದಿನಗಳಿಂದ ಮಂದಗತಿಯಲ್ಲಿ ಸಾಗಿದ ತಾಲೂಕಿನ ಸುಲೇಪೇಟ್-ಮಹಾಗಾಂವ ರಸ್ತೆ ಅಭಿವೃದ್ಧಿ ಕಾಮಗಾರಿ ಬರುವ ಮಾರ್ಚ್ ಅಂತ್ಯಕ್ಕೆ ಪೂರ್ಣಗೊಳಿಸಲಾಗುವುದೆಂದು ಬೆಂಗಳೂರಿನ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಸಹಾಯಕ ಕಾರ್ಯಪಾಲಕ ಅಭಿಯಂತರ ಎ.ಯೋಗಾನಂದ ಹೇಳಿದರು.
ತಾಲೂಕಿನ ಸುಲೇಪೇಟ್- ಮಹಾಗಾಂವ ರಸ್ತೆ ಅಭಿವೃದ್ಧಿಯಲ್ಲಿ ಬರುವ ಕೊರವಿ ರಾಮನಗರ ಹತ್ತಿರ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದ ನಂತರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಸುಲೇಪೇಟ್- ಮಹಾಗಾಂವ ಒಟ್ಟು 47.58 ಕಿ.ಮೀ. ರಸ್ತೆ ಅಭಿವೃದ್ಧಿಗೆ ಸರ್ಕಾರದಿಂದ 29 ಕೋಟಿ ಮಂಜೂರು ಮಾಡಿದೆ. ಕಾಮಗಾರಿ ತುಂಬಾ ಮಂದಗತಿಯಲ್ಲಿ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರ ಮತ್ತು ಜನಪ್ರತಿನಿಧಿಗಳ ಅಭಿಪ್ರಾಯದ ಮೇರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಪರಿಶೀಲನೆ ನಡೆಸಲಾಗುತ್ತಿದೆ. ಕಾಮಗಾರಿಯ ಗುಣಮಟ್ಟವನ್ನು ಕಾಯ್ದುಕೊಳ್ಳುವಂತೆ ಗುತ್ತಿಗೆದಾರರ ಬೀದರಿನ ಕೊಟ್ರಕಿ ಕಂಸ್ಟ್ರಕ್ಷನ್ ಕಂಪನಿ ತಿಳಿಸಲಾಗಿದೆ ಎಂದು ಹೇಳಿದರು.
ತಾಲೂಕಿನ ರಸ್ತೆಗಳು ತುಂಬಾ ಕಳಪೆಮಟ್ಟದಿಂದ ನಡೆಯುತ್ತಿದ್ದು, ಅವುಗಳ ಪರಿಶೀಲನೆ ಯಾಕೆ ನಡೆಸುತ್ತಿಲ್ಲವೆಂದಾಗ ಬೇರೆ ರಸ್ತೆಗಳ ಮಾಹಿತಿಯನ್ನು ಕೇಳಿ ನನಗೆ ಹಿಂಸೆ ನೀಡಬೇಡಿರಿ. ಈಗ ನಡೆಯುತ್ತಿರುವ ರಸ್ತೆ ಕಾಮಗಾರಿ ಉತ್ತಮ ಗುಣಮಟ್ಟದಿಂದ ನಡೆಯುತ್ತಿದೆ ಎಂದರು.
ತಾಲೂಕಿನ ಶಹಾಪುರ- ಶಿವರಾಮಪುರ ರಾಜ್ಯಹೆದ್ದಾರಿ 132 ಕಿ.ಮೀ.ದಿಂದ 197 ಕಿ.ಮೀ. ರಸ್ತೆ ಡಾಂಬರೀಕರಣಕ್ಕಾಗಿ 23.95 ಕೋಟಿ ಮಂಜೂರಾಗಿದೆ. ಭಾಲ್ಕಿ- ಚಿಂಚೋಳಿ ರಾಜ್ಯ ಹೆದ್ದಾರಿ 57.06 ರಿಂದ 92 ಕಿ.ಮೀ. ರಸ್ತೆವರೆಗೆ (24.06 ಕಿ.ಮೀ.) 32.50 ಕೋಟಿ ನೀಡಿದೆ ಎಂದರು.
ಫಿರೋಜಾಬಾದ್-ಕಮಲಾಪುರ ರಸ್ತೆಗೆ 4 ಕೋಟಿ ಸಿಆರ್‌ಎಫ್ ಯೋಜನೆಯಡಿ ಮಂಜೂರಿಗೊಂಡಿದೆ. 2ನೇ ಹಂತದಲ್ಲಿ ಬಿಟ್ಟುಹೋಗಿರುವ ರಾಜ್ಯ ಹೆದ್ದಾರಿಗಳನ್ನು ಎಸ್‌ಎಚ್‌ಡಿಪಿ ಯೋಜನೆಯಡಿ ತೆಗೆದುಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಶಾಸಕ ಡಾ.ಉಮೇಶ ಜಾಧವ್, ಮಾಜಿ ಶಾಸಕ ವಿಶ್ವನಾಥ ಪಾಟೀಲ್ ಹೆಬ್ಬಾಳ, ಗುತ್ತಿಗೆದಾರ ಪ್ರಭುರಾವ್ ಕೊಟ್ರಕಿ, ಎಇಇ ವಿಜಯಕುಮಾರ್ ಚತುರೆ, ಕಾಳಗಿ ವಲಯದ ಎಇಇ ಶಾಮರಾವ್ ಕುಲಕರ್ಣಿ, ಡಾ. ತುಕಾರಾಮ ಪವಾರ, ಅರುಣ ಪವಾರ ಇತರರು ಇದ್ದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement