ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಮುಸ್ಲಿಂ ಹಾಸ್ಟೆಲ್ ಕೆಡವಿ ಬೃಹತ್ ಕಟ್ಟಡ ನಿರ್ಮಾಣ ಅನಗತ್ಯ: ಮಹ್ಮದ್, ಸೈಯದ್

Vishwanath S
Updated On : 9 Nov 2013, 12:16 pm

ಗುಲ್ಬರ್ಗ: ನಗರದ ಡಾ. ಎಸ್.ಎಂ. ಪಂಡಿತ ರಂಗಮಂದಿರದ ಬಳಿಯ ಮದಿನಾ ಬಿಲ್ಡಿಂಗ್‌ನ ವಕ್ಫ್ ಆಸ್ತಿಯಾಗಿರುವ ಮುಸ್ಲಿಂ ವಸತಿ ನಿಲಯವನ್ನು ಅಕ್ರಮವಾಗಿ ತೆರವುಗೊಳಿಸಿ ಬೃಹತ್ ಕಟ್ಟಡ ನಿರ್ಮಿಸಲು ಹುನ್ನಾರ ನಡೆದಿದೆ. ಕೂಡಲೇ ಈ ಅಕ್ರಮ ಪ್ರಕ್ರಿಯೆ ತಡೆಯಬೇಕು ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಜಿಲ್ಲಾಧ್ಯಕ್ಷ ಮಹ್ಮದ್ ಮೌಸೀನ್ ಗೋಗಿ ಮತ್ತು ಸೈಯದ್ ಅಬ್ದುಲ್ ಅಲ್ಲಂ ಇಲಾಹಿ ಒತ್ತಾಯಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1978ರಲ್ಲಿ ವಕ್ಫ್ ಇಲಾಖೆಗೆ ಒಳಪಟ್ಟಿರುವ ಈ ಸ್ಥಳದಲ್ಲಿಯೇ ಮುಸ್ಲಿಂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಸತಿ ನಿಲಯ ಸ್ಥಾಪಿಸಿ ಶಫೀವುರ್ ರಹಿಮಾನ್ ಅವರಿಗೆ ಮೇಲ್ವಿಚಾರಕರಾಗಿ ನೇಮಿಸಲಾಗಿತ್ತು. ಯಾವುದೇ ಕಾರಣಕ್ಕೂ ಈ ಆಸ್ತಿ ಮಾರುವಂತಿಲ್ಲ, ವರ್ಗಾಯಿಸುವಂತಿಲ್ಲ ಎಂದು ಕಡ್ಡಾಯ ನಿಯಮವೂ ಸಹ ಹೇರಲಾಗಿತ್ತು ಎಂದರು.
ಆದರೆ, ಮೇಲ್ವಿಚಾರಕರಾದ ಶಫೀವುರ್ ರಹಿಮಾನ್ ಅವರು 1998 ರಲ್ಲಿ ಈ ವಸತಿ ನಿಲಯದ ಆಸ್ತಿಯನ್ನು ತಮ್ಮ ಹೆಸರಿಗೆ ನೋಂದಾಯಿಸಿಕೊಂಡು ಇದೀಗ ಈ ವಸತಿ ನಿಲಯ ತೆರವುಗೊಳಿಸಿ ಅಲ್ಲಿ ಬೃಹತ್ ಕಟ್ಟಡ (ಮಾಲ್) ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು.
ವಿದ್ಯಾರ್ಥಿಗಳು ಈ ವಸತಿ ನಿಲಯದಿಂದ ಅನಿವಾರ್ಯವಾಗಿ ಹೋಗುವಂತೆ ವಿದ್ಯುತ್ ಮತ್ತು ನೀರಿನ ಸರಬರಾಜು ಕಡಿತಗೊಳಿಸಿ ಮಾನಸಿಕ ಕಿರುಕುಳ ನೀಡಲಾಗುತ್ತಿದೆ. ಈ ಕುರಿತು ವಕ್ಫ್ ಸಚಿವ ಖಮರುಲ್ ಇಸ್ಲಾಂ ಅವರ ಗಮನಕ್ಕೆ ತರಲಾಗಿತ್ತು. ಆಗ ಸಚಿವರಿಗೆ ಮೇಲ್ವಿಚಾರಕರು ಹಳೆಯದಾದ ಕಟ್ಟಡ ತೆರವುಗೊಳಿಸಿ ಅಲ್ಲಿ ಹೊಸ ವಸತಿ ನಿಲಯ ನಿರ್ಮಿಸಲಾಗುವುದು ಎಂದು ತಪ್ಪು ಮಾಹಿತಿ ನೀಡಿದ್ದಾರೆ. ಹೀಗಾಗಿ, ಸಚಿವರು ಯಾವುದೇ ಕ್ರಮ ಕೈಗೊಳ್ಳದೆ ಮೌನ ವಹಿಸಿದ್ದಾರೆ ಎಂದರು.
ವಕ್ಫ್ ಇಲಾಖೆಗೆ ಒಳಪಟ್ಟಿರುವ ಮುಸ್ಲಿಂ ವಸತಿ ನಿಲಯವನ್ನು ತೆರವುಗೊಳಿಸಿ ವಿದ್ಯಾರ್ಥಿಗಳಿಗೆ ಬೀದಿಪಾಲು ಮಾಡಲಾಗುತ್ತಿದೆ. ಕೂಡಲೇ ಕ್ರಮ ಜರುಗಿಸಬೇಕು ಎಂದು ಕರ್ನಾಟಕ ವಕ್ಫ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೀರ ಅಲಿಸ್ ಮಹ್ಮದ್ ಅವರಿಗೆ ಭೇಟಿಯಾಗಿ ಮನವಿ ಮಾಡಲಾಗಿತ್ತು. ಅವರು ಯಾವುದೇ ಕಾರಣಕ್ಕೂ ವಸತಿ ನಿಲಯ ತೆರವುಗೊಳಿಸಬಾರದು. ತಮ್ಮ ವಿರುದ್ಧ ಬಂದಿರುವ ಆರೋಪ ಕುರಿತು ಸ್ಪಷ್ಟೀಕರಣ ನೀಡುವಂತೆ ವಸತಿ ನಿಲಯ ಮೇಲ್ವಿಚಾರಕ ಶಫೀವುರ್ ರಹಿಮಾನ್ ಅವರಿಗೆ ಪತ್ರ ಬರೆದು ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.
ಯಾವುದೇ ಕಾರಣಕ್ಕೂ ವಸತಿ ನಿಲಯ ತೆರವುಗೊಳಿಸಬಾರದು, ವಕ್ಫ್ ಆಸ್ತಿಯನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿರುವ ವಸತಿ ನಿಲಯದ ಮೇಲ್ವಿಚಾರಕರ ವಿರುದ್ಧ ಕ್ರಮ ಜರುಗಿಸಬೇಕು. ಒಂದು ವೇಳೆ  ಈ ಕುರಿತು ಯಾವುದೇ ಕ್ರಮ ಕೈಗೊಳ್ಳದಿದ್ದರೆ ಮದಿನಾ ಬಿಲ್ಡಿಂಗ್ ಎದುರಿನಲ್ಲಿ ರಸ್ತೆ ತಡೆ  ಚಳವಳಿ ನಡೆಸಲಾಗುವುದು ಮತ್ತು ವಕ್ಫ್ ಸಚಿವ ಖಮರುಲ್ ಇಸ್ಲಾಂ ಅವರಿಗೆ ಘೇರಾವ್ ಹಾಕಲಾಗುವುದು ಎಂದು ಎಚ್ಚರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement