ಕಾಲುವೆ ಕಾಮಗಾರಿ ಕೈಗೊಳ್ಳಲು ಅಧಿಕಾರಿಗಳಿಂದ ಸೂಚನೆ
ಯಾದಗಿರಿ: ತಾಲೂಕಿನ ಹತ್ತಿಕುಣಿ ಹಾಗೂ ಸೌದಾಗರ ಜಲಾಶಯದ ಮುಖ್ಯ ಕಾಲುವೆಗಳ ಕಾಮಗಾರಿ ಕೈಗೊಳ್ಳಲು ಕರ್ನಾಟಕ ನೀರಾವರಿ ನಿಗಮದ ಕಾರ್ಯನಿರ್ವಹಕ ಅಭಿಯಂತರ ಎ.ಎಫ್.ಮುಲ್ಲಾ ಜಲಾಶಯ ವ್ಯಾಪ್ತಿಯ ನೀರು ಬಳಕೆದಾರರ ಸಹಕಾರ ಸಂಘಗಳಿಗೆ ಸೂಚಿಸಿದ್ದಾರೆ.
ಎರಡು ಜಲಾಶಯಗಳು ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿದ್ದರೂ ಕಾಲುವೆಗಳಲ್ಲಿ ಹೂಳು ತುಂಬಿದ್ದರಿಂದ ರೈತರ ಜಮೀನಿಗೆ ನೀರು ಹರಿಸದಿರುವುದನ್ನು ಪತ್ರಿಕೆಗಳಲ್ಲಿ ವರದಿಗೆ ಎಚ್ಚೆತ್ತುಕೊಂಡ ಇಲಾಖೆಯ ಅಧಿಕಾರಿಗಳು ಮೂರು ದಿನಗಳಲ್ಲಿ ಮೊದಲ ಹಂತವಾಗಿ ಯಂತ್ರಗಳನ್ನು ಬಳಕೆ ಮಾಡಿ ಕಾಲುವೆಗಳ ಹೂಳು ತೆಗೆಯಲು ಹಾಗೂ ಸಣ್ಣಪುಟ್ಟ ದುರಸ್ತಿ ಕಾಮಗಾರಿಗಳನ್ನು ಪೂರ್ಣಗೊಳಿಸಿ ಕಾಲುವೆ ಸಂಖ್ಯೆ 3ರವರೆಗೆ ಸೋಮವಾರ ಸಂಜೆ ಜಲಾಶಯದಿಂದ ನೀರು ಹರಿಸಲು ನಿರ್ಧರಿಸಿದ್ದಾರೆ. ಸೂಚನೆ ಹಿನ್ನೆಲೆಯಲ್ಲಿ ಜಲಾಶಯದ ಸಹಾಯಕ ಎಂಜಿನಿಯರ್ ಬಸವರಾಜ ತೊಟ್ಲೂರ, ನೀರು ಬಳಕೆದಾರ ಸಂಘದ ಅಧ್ಯಕ್ಷರಾದ ವೀರಭದ್ರಪ್ಪ ಯಡ್ಡಳ್ಳಿ, ಶರಣಪ್ಪಗೌಡ ಮಾಲಿಪಾಟೀಲ್, ಭೀಮರೆಡ್ಡಿ ರಾಂಪೂರಹಳ್ಳಿ ಇನ್ನಿತರರು ಇಟಾಚಿ ಯಂತ್ರ ಬಳಕೆಯಿಂದ ಕಾಲುವೆ ಸ್ವಚ್ಛತೆ ಹಾಗೂ ಊಳು ತೆಗೆಯುವ ಕಾಮಗಾರಿ ಆರಂಭಿಸಿದ್ದಾರೆ. ಅಲ್ಲದೆ ಕಾಲುವೆಗಳ ಸಣ್ಣಪುಟ್ಟ ದುರಸ್ತಿ ಕಾಮಗಾರಿ ಕೈಗೊಂಡಿದ್ದಾರೆ.