ಗುರುವಿಗಿಂತ ದೊಡ್ಡವರು ಯಾರಿಲ್ಲ: ಅರುಣಿ
ಯಾದಗಿರಿ: ಯಾದಗಿರಿ ತಾಲೂಕಿನ ಗಾಜರಕೋಟ ಗ್ರಾಮದ ಕಾಳಿಕಾ ದೇವಿ ದೇವಸ್ಥಾನದ ಆವರಣದಲ್ಲಿ ಬನ್ನಪ್ಪ ತಾತ ಶಿಷ್ಯ ವೃಂದದವರಿಂದ ಶ್ರೀ ಬನ್ನಪ್ಪ ತಾತನವರ ಸ್ಮರಣಾರ್ಥ ಗುರುವಂದನಾ ಕಾರ್ಯಕ್ರಮ ಜರುಗಿತು. ಮೊದಲಿಗೆ ಶ್ರೀಗುರುಗಳ ಭಾವಚಿತ್ರಕ್ಕೆ ಪೂಜೆ ನೆರವೇರಿಸಲಾಯಿತು. ವೀರಭದ್ರಪ್ಪ ಕಾಳೇಬೆಳಗುಂದಿ ಅಧ್ಯಕ್ಷತೆ ವಹಿಸಿದ್ದರು.
ಅತಿಥಿಗಳಾದ ಶಂಭುಲಿಂಗಪ್ಪ ಅರುಣಿ ಮಾತನಾಡಿ, ಗುರುವಿಗಿಂತ ಅಧಿಕ ಯಾರಿಲ್ಲ. ಗುರುವೇ ಪ್ರಥಮ, ಗುರುವೇ ಪರಮ, ಗುರುವನ್ನು ತ್ರಿಮೂರ್ತಿಗಳಿಗೆ ಹೋಲಿಸಿದ್ದಾರೆ. ಹರ ಮುನಿದರೆ ಗುರು ಕಾಯುವನು ಎನ್ನುವ ಮಾತುಗಳು ಮಾರ್ಮಿಕವಾಗಿವೆ. ನಮ್ಮೆಲ್ಲರ ಸನ್ಮಾರ್ಗಕ್ಕೆ ದಾರಿ ತೋರಿಸುವವನು ಗುರು. ಅಂಥಾ ಗುರುಗಳ ಸೇವೆ ಮಾಡಿ ನಾವುಗಳೆಲ್ಲ ಪುನೀತರಾಗಬೇಕೆಂದು ಹೇಳಿದರು. ಗುರುವನ್ನು ನಿಂದಿಸುವುದು ಮಹಾಪಾಪವಾಗಿದೆ. ಗುರುವಿನ ಕರುಣೆಯನ್ನು, ಆಶೀರ್ವಾದ ಸಂಪಾದಿಸಬೇಕು. ಇತ್ತೀಚಿನ ದಿನಗಳದಲ್ಲಿ ಯುವಜನರಲ್ಲಿ ಗುರುವಿನ ಬಗೆಗಿನ ಒಲವು ಕಡಿಮೆಯಾಗುತ್ತಿರುವುದು ವಿಷಾದನೀಯ ಎಂದರು.
ಮುಖ್ಯ ಅತಿಥಿಗಳಾಗಿದ್ದ ವೆಂಕಟರೆಡ್ಡಿ ಯದ್ಲಾಪೂರ ಮಾತನಾಡಿ, ಎಲ್ಲಾ ಜೀವರಾಶಿಗಳಲ್ಲೂ ಮಾನವ ಜನ್ಮ ದೊಡ್ಡದು. ಇದನ್ನು ನಾವು ಗುರುವಿನ ಮಾರ್ಗದರ್ಶನದಲ್ಲಿ ಸಾರ್ಥಕಪಡಿಸಿಕೊಳ್ಳಬೇಕೆಂದು ಹೇಳಿದರು. ಶಾಂತಪ್ಪ ಕಾಳೆಬೆಳಗುಂದಿ, ಆಶೆಪ್ಪ ದಳಪತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಶೈಲ ರಂಗಪನೋರ್ ಸ್ವಾಗತಿಸಿದರು. ಮೋನಯ್ಯ ಅಗ್ಸಾಲ, ನಾಗರೆಡ್ಡಿ ಗುನ್ನಿ, ರಾಮಣ್ಣ ಸಾಣೆ, ಮೋನಯ್ಯ ಮುಗುಲಿ ಮತ್ತು ತಾತನವರ ನೂರಾರು ಶಿಷ್ಯಂದಿರು ಭಾಗವಹಿಸಿದ್ದರು.