ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಬುಟ್ಟಿ ಮಣ್ಣೂ ಕಾಣದ ಗ್ರಾಮೀಣ ರಸ್ತೆಗಳು!

Vishwanath S
Updated On : 10 Nov 2013, 12:31 pm

ಕನ್ನಡಪ್ರಭ ವಾರ್ತೆ ,  ಗುಲ್ಬರ್ಗ ,  ನ.9
ಜಿಲ್ಲೆಯ ಗ್ರಾಮೀಣ ಸಂಪರ್ಕ ರಸ್ತೆಗಳ ಸುಧಾರಣೆ- ನಿರ್ವಹಣೆಗೆ ಜಿಲ್ಲಾ ಪಂಚಾಯ್ತಿ ಬಳಿ ದುಡ್ಡಿಲ್ಲವಂತೆ. ಇದರಿಂದಾಗಿ ಹಳ್ಳಿ ಮಂದಿ ಮಳೆಯಿಂದಾಗಿ ರಸ್ತೆಗಳು ಹರಿದು ಹೋದರೂ ಬುಟ್ಟಿ ಮಣ್ಣೂ ಸಹ ಕಾಣದೆ ಹೈರಾಣದಲ್ಲೇ ಬದುಕುವಂತಾಗಿದೆ.
ಹೀಗಾಗಿ ಹೈ-ಕ ಪ್ರದೇಶದ ಪ್ರಮುಖ ನಗರ, ವಿಭಾಗೀಯ ಕೇಂದ್ರ, ವಾರ್ಷಿಕ ಸಿಎಂ ಮತ್ತವರ ಸಂಪುಟದ ಸದಸ್ಯರೆಲ್ಲರೂ ಬಂದು ಸಂಪುಟ ಸಭೆ ನಡೆಯುವುದರೊಂದಿಗೆ ಸದಾಕಾಲ ಚರ್ಚೆಯಲ್ಲಿರುವ ಜಿಲ್ಲೆ ಎಂದೇ ಖ್ಯಾತಿ ಪಡೆದಿರುವ ಗುಲ್ಬರ್ಗದಲ್ಲೀಗ ಹರಕು- ಮುರುಕು ರಸ್ತೆಗಳದ್ದೇ ಕಾರುಬಾರು.
ಇದು ತಮಾಷೆಯಲ್ಲ.  ಸೆಪ್ಟೆಂಬರ್‌ನಲ್ಲಿ ಸಿಎಂ ಸಿದ್ದರಾಮಯ್ಯ ಜಿಲ್ಲೆಗೆ ಭೇಟಿ ನೀಡಿದ್ದ ಸಮಯದಲ್ಲೇ ಜಿಪಂ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ತಮ್ಮ ಬಳಿ ಹಣವಿಲ್ಲ ಎಂಬ ವಿಚಾರ ಹೇಳುವ ಮೂಲಕ ಎಲ್ಲರನ್ನು ಚಕಿತರನ್ನಾಗಿಸಿದ್ದರು. ಅತಿವೃಷ್ಟಿಯಿಂದ ರಸ್ತೆ, ಕಲ್ವರ್ಟ್, ಸೇತುವೆಗಳು ಕೊಚ್ಚಿ ಹೋಗಿರುವ ಜಿಲ್ಲೆಯಲ್ಲಿ ಗ್ರಾಮೀಣ ಭಾಗದ ಜನರ ಪಾಡು ದೇವರೇ ಬಲ್ಲ ಎಂಬಂತಾಗಿದೆ. ಹಳ್ಳಿಗಾಡಿನ ರಸ್ತೆ ಸಂಪರ್ಕ ಕಳೆದ 2 ತಿಂಗಳಿಂದ ಹದಗೆಟ್ಟು ಹೋಗಿದೆ. ಮೊದಲೇ ಹರಕುಮುರಕು ರಸ್ತೆಗಳು, ಬುಟ್ಟಿ ಮಣ್ಣೂ ಕಾಣದಂತಿದ್ದ ರಸ್ತೆಗಳೀಗ ಬಿರುಸಿನ ಮಳೆ ಹೊಡೆತಕ್ಕೆ ಸಿಲುಕಿ ಚಿಂದಿಯಾಗಿವೆ.
34.28 ಕೋಟಿ ಅಗತ್ಯ:  ಲಭ್ಯ ಮಾಹಿತಿ ಪ್ರಕಾರ ಜಿಲ್ಲಾ ಪಂಚಾಯತ್ ಅಡಿಯಲ್ಲಿ ರಸ್ತೆ ದುರಸ್ತಿ, ಮೂಲ ಸೌಕರ್ಯ ನಿರ್ವಹಣೆಗೆ ತುರ್ತಾಗಿ 34 ಕೋಟಿ ಬೇಕು. ರಾಜ್ಯದ ಇತರ ಎಲ್ಲಾ ಜಿಲ್ಲೆಗಳ ಪಂಚಾಯ್ತಿಗಳು ಯೋಜನೇತರ ವೆಚ್ಚದ ಬಾಬ್ತಿನಲ್ಲಿ ರಸ್ತೆ ನಿರ್ವಹಣೆಗೆ ಹಣ ಇಟ್ಟು ಅಗತ್ಯವಿದ್ದಾಗ ವೆಚ್ಚ ಮಾಡುತ್ತಿವೆ. ಆದರೆ ಗುಲ್ಬರ್ಗ ಜಿಪಂನಲ್ಲಿ ಯೋಜನೇತರ ವೆಚ್ಚದ ಹಣವನ್ನು ದಿನಗೂಲಿಗಳ ವೇತನಕ್ಕೆ ವೆಚ್ಚ ಮಾಡಲಾಗುತ್ತಿದೆ. ಈಗಾಗಲೇ ಆಗಸ್ಟ್ ತಿಂಗಳವರೆಗೂ ದಿನಗೂಲಿಗಳ ವೇತನ ಪಾವತಿಸಲಾಗಿದೆ. ಈ ಹಣ ವೇತನಕ್ಕೆ ಬಳಕೆಯಾದಾಗ ರಸ್ತೆ ನಿರ್ವಹಣೆಗೆ ಪ್ರತ್ಯೇಕ ದುಡ್ಡು ಎಲ್ಲಿಂದ ತರಬೇಕು ಎಂಬುದು ಇಂದಿಗೂ ಉತ್ತರ ಸಿಗದ ಪ್ರಶ್ನೆ.
ಜಿಪಂ ವಾರ್ಷಿಕ ಬಜೆಟ್ ರೂಪಿಸುವಾಗ ಯೋಜನೆಯಲ್ಲೇ ರಸ್ತೆ ನಿರ್ವಹಣೆಗೆ ಅಗತ್ಯ ಪ್ರಮಾಣದ ಹಣಕಾಸು ಮೀಸಲಿಡಲು ಅವಕಾಶವಿದೆ. ಆದರೆ, ಈ ಬಗ್ಗೆ ಕಿಂಚಿತ್ತೂ ಯೋಚಿಸದಿರುವುದು ಗ್ರಾಮೀಣ ರಸ್ತೆಗಳ ಅಧ್ವಾನಕ್ಕೆ ಕಾರಣವಾಗಿದೆ. ಜಿಪಂ ಕ್ರಿಯಾ ಯೋಜನೆ ರೂಪಿಸುವಾಗ ಯೋಜನೆಯಲ್ಲೇ ರಸ್ತೆ ನಿರ್ವಹಣೆಗೆ ವಾರ್ಷಿಕ ಅನುದಾನ ಬಾಬ್ತು ಮೀಸಲು ಇಡುವ ಕೆಲಸ ನಡೆಯುತ್ತಿಲ್ಲ.
ಯೋಜನೇತರ ಭಾಗವಾಗಿ ರಸ್ತೆಗಾಗಿ ಹಣ ಇಡಲಾಗುತ್ತದೆ. ಅದನ್ನು ಹೆಚ್ಚು ಸಂದರ್ಭಗಳಲ್ಲಿ ನಿಗದಿತ ಉದ್ದೇಶಕ್ಕಿಂತ ಅನ್ಯಉದ್ದೇಶಗಳಿಗೆ ಬಳಸಿದ್ದೇ ಹೆಚ್ಚು. ಹೀಗಾಗಿ, ಜಿಲ್ಲೆಯಲ್ಲಿನ ಹಳ್ಳಿಗಾಡಿನ ಸಂಪರ್ಕ ರಸ್ತೆಗಳು ತಮ್ಮ ಅಸ್ಥಿತ್ವ ಕಳೆದುಕೊಂಡಿವೆ. ರಸ್ತೆಗಳು ಎಂಬ ಅಸ್ತಿ ಪಂಜರಗಳ ಮೇಲೆ ಹಳ್ಳಿಗರ ನಿತ್ಯದ ಜೀವನ ಸಾಗಿದೆ.
ಎಲ್ಲಾ ರಸ್ತೆಗಳಿಗೂ ದುರ್ಗತಿ:  ಅಫಜಲ್ಪುರ, ಚಿತ್ತಾಪುರ, ಚಿಂಚೋಳಿ ಹಾಗೂ ಗುಲ್ಬರ್ಗ ತಾಲೂಕಿನ ಜಿಪಂ ರಸ್ತೆಗಳು ಹೆಚ್ಚು ಹದಗೆಟ್ಟಿವೆ. ಇದಲ್ಲದೆ, ಸೇಡಂ ಹಾಗೂ ಜೇವರ್ಗಿ ರಸ್ತೆಗಳೂ ಹದಗೆಟ್ಟಿವೆಯಾದರೂ ಅಲ್ಲಿ ಮೊದಲೇ ತುಸು ಪರವಾಗಿಲ್ಲ ಎನ್ನುವಷ್ಟರಮಟ್ಟಿಗೆ ರಸ್ತೆ ಸಂಪರ್ಕ ಇದ್ದ ಕಾರಣ ತೊಂದರೆ ಅಷ್ಟಾಗಿ ಗಮನಕ್ಕೆ ಬರುತ್ತಿಲ್ಲ. ಅಫಜಲ್ಪುರದಲ್ಲಂತೂ ಮಹಾರಾಷ್ಟ್ರ ಗಡಿಯಲ್ಲಿರುವ ಹಳ್ಳಿಗಾಡಲ್ಲಿ ಸಂಪರ್ಕ ರಸ್ತೆಗಳೇ ಕೊಚ್ಚಿಹೋಗಿವೆ. ಇನ್ನು ಆಳಂದದಲ್ಲಿಯೂ ಇದೇ ದುರವಸ್ಥೆ.
ಈ ಮಧ್ಯೆ ಗುಲ್ಬರ್ಗ ಭೇಟಿ ಸಂದರ್ಭ ಸಿಎಂ ಸಿದ್ದರಾಮಯ್ಯ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿ ರಸ್ತೆಗಳಿಗೆ ಟಾರ್ ಭಾಗ್ಯ ನೀಡಲಾಗುತ್ತದೆ ಎಂದಿದ್ದಾರೆ. ಆದರೆ, ಡಾಂಬರೀಕರಣ ಸೌಲಭ್ಯ ಎಷ್ಟರಮಟ್ಟಿಗೆ ದೊರೆಯುತ್ತದೆ ಎಂಬ ಚಿಂತೆ ಗ್ರಾಮಸ್ಥರದು.



-ಶೇಷಮೂರ್ತಿ ಅವಧಾನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement