28ರಂದು ರಾಷ್ಟ್ರೀಯ ಸಮ್ಮೇಳನ
ಗುಲ್ಬರ್ಗ: ಅಖಿಲ ಭಾರತ ವಿದ್ಯಾರ್ಥಿ ಒಕ್ಕೂಟದ 28ನೇ ರಾಷ್ಟ್ರೀಯ ಸಮ್ಮೇಳನದ ನ.28 ರಿಂದ 30 ರವರೆಗೆ 3 ದಿನಗಳ ಕಾಲ ಆಂಧ್ರಪ್ರದೇಶದಲ್ಲಿ ನಡೆಯಲಿದೆ ಎಂದು ಅಖಿಲ ಭಾರತ ವಿದ್ಯಾರ್ಥಿ ಫೆಡರೇಷನ್ ರಾಜ್ಯ ಸಂಚಾಲಕ ರಾಜೇಂದ್ರ ರಾಜವಾಳ ತಿಳಿಸಿದ್ದಾರೆ. ದೇಶದ ಎಲ್ಲ ರಾಜ್ಯಗಳಿಂದ 1000 ಪ್ರಮುಖ ವಿದ್ಯಾರ್ಥಿ ಮುಖಂಡರು ಭಾಗವಹಿಸಲಿದ್ದು, ದೇಶ ಎದುರಿಸುತ್ತಿರುವ ಶೈಕ್ಷಣಿಕ ಸಮಸ್ಯೆಗಳ ಕುರಿತು ಮತ್ತು ಅದರ ಭಾಗವಾಗಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು 3 ದಿನಗಳ ಕಾಲ ಸುದೀರ್ಘ ಚಿಂತನೆ ನಡೆಯಲಿದೆ ಎಂದು ತಿಳಿಸಿದ್ದಾರೆ.ಈ ಸಮ್ಮೇಳನಕ್ಕೆ ಶೈಕ್ಷಣಿಕ ತಜ್ಞರು, ವಿಚಾರವಾದಿಗಳು ಅತಿಥಿಯಾಗಿ ಆಗಮಿಸಲಿದ್ದಾರೆ. ಕರ್ನಾಟಕದಿಂದ 25 ಜನ ವಿದ್ಯಾರ್ಥಿ ಮುಖಂಡರು ಭಾಗವಹಿಸಲಿದ್ದಾರೆ.
ಪ್ರಾಧಿಕಾರಕ್ಕೆ ಆಯ್ಕೆ
ಗುಲ್ಬರ್ಗ: ನಗರದ ನೂತನ ವಿದ್ಯಾಲಯ ಕನ್ಯಾ ಪ್ರೌಢಶಾಲೆಯ ವಿದ್ಯಾರ್ಥಿನಿ ಭುವನೇಶ್ವರಿ ತಂದೆ ಶರಣಪ್ಪ ಬೆಳಮ ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಿ ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನ ಪಡೆದ ಪ್ರಯುಕ್ತ ಕನ್ನಡ ಪ್ರಾಧಿಕಾರಕ್ಕೆ ಆಯ್ಕೆಯಾಗಿದ್ದಾಳೆ.ನ.24 ರಂದು ನಗರದ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಹಮ್ಮಿಕೊಂಡಿರುವ ಕನ್ನಡ ಮಾಧ್ಯಮ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ವಿದ್ಯಾರ್ಥಿನಿಗೆ ಕನ್ನಡ ಮಾಧ್ಯಮ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಕೆ. ಮುರಳೀಧರ ತಿಳಿಸಿದ್ದಾರೆ.