ಟಿಪ್ಪು ಸುಲ್ತಾನ್ ಜನ್ಮದಿನ: ಅದ್ಧೂರಿ ಆಚರಣೆ
ಯಾದಗಿರಿ: ನಗರದ ಟಿಪ್ಪು ಸುಲ್ತಾನ್ ಸಂಯುಕ್ತ ರಂಗ ವೇದಿಕೆಯಿಂದ ಟಿಪ್ಪು ಸುಲ್ತಾನ್ ಜನ್ಮದಿನವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಯಿತು.
ವೇದಿಕೆ ಅಧ್ಯಕ್ಷ ಅಬ್ದುಲ್ ಕರೀಮ್ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಬೆಳಿಗ್ಗೆ ಹತ್ತಿಕುಣಿ ಕ್ರಾಸ್ ಹತ್ತಿರವಿರುವ ಟಿಪ್ಪು ಸುಲ್ತಾನ್ ವೃತ್ತದಿಂದ ಭಾವಚಿತ್ರ ಮೆರವಣಿಗೆ ಗಾಂಧಿವೃತ್ತ ಮೂಲಕ ಪ್ರಮುಖ ಬೀದಿಗಳ ಮುಖಾಂತರ ಜಿಲ್ಲಾಧಿಕಾರಿ ಕಚೇರಿವರೆಗೆ ನಡೆಸಿದರು.
ನಂತರ ಈ ಸಂದರ್ಭದಲ್ಲಿ ಮಾತನಾಡಿದ ಅಬ್ದುಲ್ ಕರೀಮ್, ರಾಜ್ಯ ಸರ್ಕಾರ ನ.10ರಂದು ಸಾರ್ವಜನಿಕ ರಜಾ ದಿನವನ್ನಾಗಿ ಘೋಷಣೆ ಮಾಡಬೇಕು. ಅಲ್ಲದೆ ಟಿಪ್ಪು ಸುಲ್ತಾನ್ ಜಯಂತಿಯನ್ನು ಸರ್ಕಾರದಿಂದಲೇ ಆಚರಿಸಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿ ಮುಖಾಂತರ ರಾಜ್ಯ ಕಂದಾಯ ಇಲಾಖೆ ಮುಖ್ಯ ಕಾರ್ಯದರ್ಶಿಗೆ ಮನವಿ ಪತ್ರ ಸಲ್ಲಿಸಿದರು. ನಂತರ ಸಾರ್ವಜನಿಕ ಆಸ್ಪತ್ರೆಗೆ ತೆರಳಿ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಅಲ್ಲಾ ಪಟೇಲ್, ಜಹೀರ್ ಜಾಗಿರ್ದಾರ್, ಜಹೀರ್ ಖುರೇಷಿ, ಶೇಖ ಮಹಿಬೂಬ್, ಮುಜುಮೀರ್, ಜಾವೀದ್ ಪಾಟೇಲ್ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.