ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಧರ್ಮಗಳ ಕುರಿತು ಖಚಿತ ತಿಳವಳಿಕೆ ಅಗತ್ಯ

Lingaraj Badiger
Updated On : 11 Nov 2013, 11:29 am

ಕ.ಪ್ರ. ವಾರ್ತೆ  ಗುಲ್ಬರ್ಗ  ನ. 10
ದೇಶದಲ್ಲಿ ಶಾಂತಿ, ಸಹಬಾಳ್ವೆ, ಕೋಮು ಸೌಹಾರ್ದ ನೆಲೆಸಬೇಕಾದರೆ, ಧರ್ಮಗಳ ಕುರಿತಂತೆ ಅತ್ಯಂತ ಸ್ಪಷ್ಟ ಮತ್ತು ಖಚಿತವಾದ ತಿಳವಳಿಕೆ ಇರಬೇಕಾದುದು ಅತ್ಯಗತ್ಯ ಎಂದು ಗುಲ್ಬರ್ಗ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ಅಭಿಪ್ರಾಯಪಟ್ಟರು.
ಅವರು ಶಾಂತಿ ಪ್ರಕಾಶನ- ರಜತ ಮಹೋತ್ಸವದ ಅಂಗವಾಗಿ ಗುಲ್ಬರ್ಗದಲ್ಲಿ ಶಾಂತಿಗಾಗಿ ಸಾಹಿತ್ಯ ಬೃಹತ್ ಪುಸ್ತಕ ಮೇಳ ಉದ್ಘಾಟಿಸಿ ಮಾತನಾಡಿದರು. ಧರ್ಮವನ್ನು ಕೇವಲ ಆಚಾರ, ವಿಚಾರ, ನಂಬಿಕೆಯ ವಸ್ತುವಾಗಿಸಿರುವ ಇಂದಿನ ಸಮಾಜದಲ್ಲಿ ಧರ್ಮ ಅಂದರೆ ಮನುಷ್ಯನ ಆಧ್ಯಾತ್ಮಿಕ, ಕೌಟುಂಬಿಕ, ಸಾಮಾಜಿಕ, ರಾಜಕೀಯ, ಆರ್ಥಿಕ, ವ್ಯವಹಾರಿಕ ಮುಂತಾದ ಬದುಕಿನ ಎಲ್ಲ ವಿಭಾಗಗಳಿಗೆ ಅನ್ವಯವಾಗುವ ಸಮಗ್ರ ಜೀವನ ಪದ್ಧತಿ ಎಂಬುವುದನ್ನು ಸಮಾಜಕ್ಕೆ ಶಾಂತಿ ಪ್ರಕಾಶನವು ಪರಿಚಯಿಸಿರುವುದು ಶ್ಲಾಘನೀಯ ಎಂದರು.
ಪರಿಚಯ: ಇಂದು ವಿವಿಧ ಧರ್ಮೀಯರ ಮಧ್ಯೆ ಕೋಮು ಗಲಭೆಗೆ ಪ್ರಮುಖ ಕಾರಣ ಅವರಿಗೆ ಧರ್ಮದ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲದಿರುವುದೇ ಆಗಿದೆ. ಶಾಂತಿ ಪ್ರಕಾಶನವು ಪವಿತ್ರ ಕುರ್ ಆನ್ ಮತ್ತು ಪ್ರವಾದಿ ವಚನಗಳನ್ನು ಕನ್ನಡಕ್ಕೆ ಭಾಷಾಂತರಿಸಿ ಇಸ್ಲಾಂ ಅಂದರೇನು ಎಂಬುವುದನ್ನು ಕನ್ನಡ ಜನತೆಗೆ ಪರಿಚಿಸಿದೆ ಎಂದರು.
ಮಾಜಿ ಸಚಿವ ವೈಜನಾಥ ಪಾಟೀಲ್ ಮಾತನಾಡಿ, ದೇಶದಲ್ಲಿ ಅಶಾಂತಿಯನ್ನುಂಟು ಮಾಡಲು ಕೆಲವು ಸಂಘಟನೆಗಳು ನಿರಂತರ ಪ್ರಯತ್ನ ಮಾಡುತ್ತಲೇ ಇರುತ್ತವೆ. ಧರ್ಮಗಳ ಮತ್ತು ಜಾತಿಗಳ ನಡುವೆ ವಿಷ ಬೀಜ ಬಿತ್ತಿ ಕೋಮುಗಲಭೆಗಳಿಗೆ ಎಡೆಮಾಡಿಕೊಡುತ್ತಿವೆ ಎಂದರು.
ಶ್ಲಾಘನೀಯ: ಧರ್ಮಗಳ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಿ ಅಪನಂಬಿಕೆಗಳ ಗೋಡೆಯನ್ನು ಕೆಡವಿ ಎಲ್ಲ ಜಾತಿ ಧರ್ಮಗಳ ಹೃದಯಗಳನ್ನು ಬೆಸೆಯುವ ನಿಟ್ಟಿನಲ್ಲಿ ಶಾಂತಿ ಪ್ರಕಾಶನ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಜಮಾಅತೆ ಇಸ್ಲಾಮಿ ಹಿಂದ್‌ನ ಗುಲ್ಬರ್ಗ ಅಧ್ಯಕ್ಷ ಝಾಕೀರ್ ಹುಸೇನ್, ಗುಲ್ಬರ್ಗ ವಲಯ ಸಂಚಾಲಕ ಮಹ್ಮದ್ ಯೂಸುಫ್ ಕನ್ನಿ, ಅಬ್ದುಲ್ ಹಮೀದ್ ಫಾರಾನ್, ಆರ್. ಸಿ. ಘಾಳೆ, ಶಿವರಾಯ ದೊಡ್ಮನಿ, ಮೇರಾಜ ಪಟೇಲ್, ಮಸ್ತಾನ್ ಬಿರಾದಾರ ಇತರರು ಉಪಸ್ಥಿತರಿದ್ದರು.
ಮಹ್ಮದ್ ಸನಾಉಲ್ಲಾ ಅವರು ಕುರ್ ಆನ್ ಕುರ್ ಆನ್ ಪಠಿಸಿದರು. ಬಾಬಾ ಸಾಹೇಬ್ ಹುಂಡೇಕರ್ ಕುರ್ ಆನ್ ಕನ್ನಡ ಭಾವಾನುವಾದ ಮಾಡಿದರು. ಮಹ್ಮದ್ ಝಿಯಾಉಲ್ಲಾ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ತಫಿಮುಲ್ ಕುರ್ ಆನ್ ಭಾಗ- 1, ತಫಿಮುಲ್ ಕುರ್ ಆನ್ ಭಾಗ- 2, ಯಶಸ್ವಿ ಜೀವನ ಮತ್ತು ಇಸ್ಲಾಂ ಭಯೋತ್ಪಾದನೆಯ ಧರ್ಮವಲ್ಲ ಎಂಬ ಕೃತಿಗಳನ್ನು ಬಿಡಗುಡೆಗೊಳಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement