ಈರುಳ್ಳಿ ಬಿತ್ತನೆಗೆ ಸಿದ್ಧತೆ
ಆಳಂದ: ಮಾರುಕಟ್ಟೆಯಲ್ಲಿ ಈರುಳ್ಳಿ ಅಭಾವ ಸೃಷ್ಟಿಯಾಗಿ ಬೆಲೆ ಗಗನಕ್ಕೇರಿದ ಹಿನ್ನೆಲೆಯಲ್ಲಿ ಅನೇಕ ರೈತರು ಉತ್ಪಾದನೆಗೆ ಮುಂದಾಗಿದ್ದಾರೆ. ಹಲವು ಬಾರಿ ಈರುಳ್ಳಿಗೆ ಬೆಲೆ ಸಿಗದೆ ಕೈಸುಟ್ಟುಕೊಂಡ ರೈತರು ಈ ಬಾರಿಯಾದರೂ ಮಾರುಕಟ್ಟೆಯಲ್ಲಿ ತಕ್ಕಮಟ್ಟಿನ ಬೆಲೆ ದೊರೆತರೆ ಸಾಕು ಎಂದು ಈರುಳ್ಳಿ ಬೆಳೆ ಬೆಳೆಯುವಲ್ಲಿ ನಿರತರಾಗಿದ್ದಾರೆ.
ತಾಲೂಕಿನ ತಡಕಲ್, ಖಜೂರಿ, ಮಾದನಹಿಪ್ಪರಗಾ ಇನ್ನಿತರ ಕಡೆ ಈರಳ್ಳಿ ಉತ್ಪಾದನೆಗೆ ಬೆಳೆ ನಾಟಿ ಮಾಡಿದ್ದಾರೆ. ಆದರೆ ಕೆಲವು ಕಡೆ ನೀರಿನ ಕೊರತೆಯಾಗಿದೆ. ನೀರಾವರಿ ಹೊಂದಿರುವ ಪ್ರದೇಶಗಳಲ್ಲಿ ಈರಳ್ಳಿ ಬೆಳೆಯುವುದು ಸಾಮಾನ್ಯವಾಗಿದೆ. ಈ ಭಾಗದಲ್ಲಿ ಬೆಳೆದ ಈರುಳ್ಳಿಯನ್ನು ಲಾತೂರ್, ಹೈದ್ರಾಬಾದ್ಗೆ ಸಾಗಣೆ ಮಾಡುತ್ತಾರೆ.
ಇಲಾಖೆ ಅಧಿಕಾರಿಗಳು ಸಲಹೆ ನೀಡಲಿ: ಈರುಳ್ಳಿ ಬೆಳೆ ಕುರಿತು ರೈತರಿಗೆ ಉತ್ತಮ ತಳಿಯ ಬೀಜದ ಮಾಹಿತಿ, ಬೆಳೆಯುವ ವಿಧಾನ, ಜಮೀನು ಆಯ್ಕೆ ಕುರಿತು ಹೆಚ್ಚಿನ ಆಧುನಿಕ ತಂತ್ರಜ್ಞಾನ ಹಾಗೂ ಮಾಹಿತಿಯನ್ನು ಸಂಬಂಧಿತ ಇಲಾಖೆಯ ಅಧಿಕಾರಿಗಳು ಒದಗಿಸಲು ಮುಂದಾದರೆ ರೈತಾಪಿ ಜನರು ವಾಣಿಜ್ಯ ನಗರಗಳ ಮಾರುಕಟ್ಟೆಯ ಬೇಕು ಬೇಡಿಕೆ ಈಡೇರಿಸಬಲ್ಲರು.
ಈ ಭಾಗದಲ್ಲಿನ ಅಧಿಕ ರೈತರು ಸಾಂಪ್ರದಾಯಿಕ ಬೆಳೆಗಳನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ. ಆಧುನಿಕ ಮಾರುಕಟ್ಟೆಯ ಬೇಕು ಬೇಡಿಕೆಯ ಹಸಿವು ಹಿಂಗಿಸಲು ರೈತರಲ್ಲಿನ ಮಾನಸಿಕ ಬದಲಾವಣೆ ಹಾಗೂ ಪೂರಕ ವಾತಾವರಣ ಸೃಷ್ಟಿಸಬೇಕಿದೆ. ಇದು ಇಲಾಖೆಯ ಕರ್ತವ್ಯ ಕೂಡ.ದೂರದ ಮಹಾನಗರ, ನಗರ, ಪಟ್ಟಣಗಳಲ್ಲಿ ಈರುಳ್ಳಿ ಕೆಜಿಗೆ 80ರಿಂದ 100ರವರೆಗೆ ಮಾರಾಟವಾಗಿದೆ. ಆದರೆ ರೈತರಿಗೆ ಅದ್ಯಾವುದರ ಲಾಭ ಬಂದಿಲ್ಲ. ರೈತರಿಂದ ಈರುಳ್ಳಿಯನ್ನು ಕಡಿಮೆ ಬೆಲೆಗೆ ಮಧ್ಯವರ್ತಿಗಳು, ವ್ಯಾಪಾರಿಗಳು ಪಡೆದು ನಂತರ ದರ ಹೆಚ್ಚಿಸಿ ಮಾರಾಟ ಮಾಡುತ್ತಾರೆ. ಇದರಿಂದ ಗ್ರಾಹಕರು ಮತ್ತು ರೈತರಿಗೆ ತೀವ್ರ ತೊಂದರೆಯಾಗಿದೆ.
ಕ್ಷೇತ್ರ ಹೆಚ್ಚಳ: ತಾಲೂಕಿನ ತೋಟಗಾರಿಕೆ ಇಲಾಖೆಯ ಅಂದಾಜಿನಂತೆ ಈರುಳ್ಳಿ ಬೆಲೆ ಹೆಚ್ಚಿದ್ದರಿಂದ ಮಳೆಗಾಲದ ಉತ್ಪಾದನೆ ಪ್ರದೇಶವೂ ದ್ವಿಗುಣಗೊಂಡಿದೆ. ಖಜೂರಿ, ಜಿಡಗಾ, ರುದ್ರವಾಡಿ, ಕಡಗಂಚಿ, ತಡಕಲ್, ಮಾದನಹಿಪ್ಪರಗಾ ಗ್ರಾಮ ವಲಯದಲ್ಲಿ ಹೆಚ್ಚಾಗಿ ಬೆಳೆಯಲಾಗಿದೆ.ತಾಲೂಕಿನಲ್ಲಿ ಈರುಳ್ಳಿ 450 ಎಕರೆ, ಟೋಮಾಟೋ 210 ಎಕರೆ, ಮೆಣಸಿನಕಾಯಿ 150 ಎಕರೆ ಪ್ರದೇಶದಲ್ಲಿ ನಾಟಿಯಾಗಿದೆ ಎಂದು ತೋಟಗಾರಿಕೆ ಸಹಾಯಕ ನಿರ್ದೇಶಕ ರಾಹುಲ್ ಭಾವಿದೊಡ್ಡಿ ತಿಳಿಸಿದ್ದಾರೆ.