ಬತ್ತದ ಎರಡನೇ ಬೆಳೆಗೆ ನೀರು ಕೊಡಿ
ಕನ್ನಡಪ್ರಭ ವಾರ್ತೆ ಕೆಂಭಾವಿ ನ.11
ಬತ್ತದ ಎರಡನೇ ಬೆಳೆಗೆ ನೀರು ಕೊಡುವಲ್ಲಿ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಶಾಸಕರು ಮತ್ತು ಸಚಿವರು ಮುತುವರ್ಜಿವಹಿಸಿ, ಎರಡನೇ ಬೆಳೆಗೆ ನೀರು ಕೊಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಿ ಎಂದು ಕೃಷ್ಣಾ ಅಚ್ಚುಕಟ್ಟು ಪ್ರದೇಶದ ರೈತರು ಆಗ್ರಹಿಸಿದ್ದಾರೆ.
ಗುಲ್ಬರ್ಗ, ಯಾದಗಿರಿ, ರಾಯಚೂರು, ಬಿಜಾಪುರ, ಬಾಗಲಕೋಟೆ ಜಿಲ್ಲೆಯ ಕ್ಷೇತ್ರಗಳಿಗೆ ಪ್ರತಿನಿಧಿಸುವ ಸಚಿವರು, ಶಾಸಕರು, ಸಂಸದರು ಇದ್ದು, ಈ ಭಾಗವೆಲ್ಲ ನೀರಾವರಿಗೆ ಒಳಪಡುತ್ತಿದ್ದು, ಸುಮಾರು 6 ಲಕ್ಷ ಹೆಕ್ಟರ್ ಪ್ರದೇಶ ನೀರಾವರಿ ಸೌಲಭ್ಯ ಪಡೆದಿದೆ. ಲಕ್ಷಾಂತರ ಜನ ರೈತರು ಈ ಯೋಜನೆಯ ಲಾಭ ಪಡೆಯುತ್ತಿದ್ದು, ಇದೀಗ ಕಳೆದ ಎರಡು ವರ್ಷಗಳಿಂದ ನಾರಾಯಣಪುರ ಎಡದಂಡೆ ಕಾಲುವೆಗೆ ಬೇಸಿಗೆ ಬೆಳೆಗೆ ನೀರು ಹರಿಸದ ಕಾರಣ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ.
ಬತ್ತದ ಕಣಜವೆಂದೇ: ಈ ಪ್ರದೇಶದಲ್ಲಿ ಹತ್ತಿ, ಮೆಣಸಿನಕಾಯಿ, ಸೇಂಗಾ, ಸಜ್ಜೆ, ಬಿಳಿಜೋಳ ಹಾಗೂ ಅತಿಹೆಚ್ಚು ಬತ್ತ ಬೆಳೆಯುವ ಮೂಲಕ ಬತ್ತದ ಕಣಜವೆಂದೇ ಹೆಸರಾಗಿದೆ. ಕಾಲುವೆಯಲ್ಲಿ ಸಮರ್ಪಕವಾಗಿ ಕಳೆದ ಎರಡು ವರ್ಷಗಳಿಂದ 2ನೇ ಬೆಳೆಗೆ ನೀರು ಹರಿಸದ ಕಾರಣ ರೈತರಲ್ಲಿ ಆತಂಕ ಮೂಡಿದ್ದು ನಿಜ. ಆದರೆ ಈ ಬಾರಿ ಸಮರ್ಪಕವಾಗಿ ಮಳೆ ಬಿದ್ದ ಕಾರಣ ಆಣೆಕಟ್ಟಿನಲ್ಲಿ ನೀರು ಸಮರ್ಪಕವಾಗಿದ್ದು, ಹಿಂಗಾರು ಹಂಗಾಮಿನ ಬೆಳೆಗಳು ಬರಬೇಕಾದರೆ ಏಪ್ರೀಲ್ ತಿಂಗಳವರೆಗೆ ನೀರು ಹರಿಸಬೇಕು ಅಂದಾಗ ಮಾತ್ರ, ಶೇಂಗಾ, ಭತ್ತ ಸೇರಿದಂತೆ ಎಲ್ಲಾ ಬೆಳೆಗಳು ಬರುತ್ತವೆ. ಎಪ್ರಿಲ್ ಕೊನೆವರೆಗೆ ನೀರು ಹರಿಸದಿದ್ದರೆ ಬೇಸಿಗೆ ಬತ್ತದ ಬೆಳೆ ಬರಲು ಸಾದ್ಯವಿಲ್ಲ ಎನ್ನುತ್ತಾರೆ ರೈತರು.
2012ರಲ್ಲಿ ಎಡದಂಡೆ ಕಾಲುವೆ ನವೀಕರಣ ಹಾಗೂ ನೀರಿನ ಕೊರತೆ ಎಂದು ಹೇಳಿ ನೀರು ಬಿಡಲಿಲ್ಲ, ಈ ಬಾರಿಯೂ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಕಾಲುವೆಗಳ ನವೀಕರಣಕ್ಕೆಂದು 4800 ಕೋಟಿ ಬಿಡುಗಡೆ ಮಾಡಿದ್ದು, ಈ ಬಾರಿಯೂ ಬೇಸಿಗೆ ಬೆಳೆಗೆ ನೀರು ಬರುವುದಿಲ್ಲ ಎಂಬ ಆತಂಕ ರೈತರಲ್ಲಿ ಕಾಡುತ್ತಿದೆ. ಈ ಭಾಗದ ಸಚಿವರು, ಶಾಸಕರು ಮುಖ್ಯಮಂತ್ರಿಗೆ ಮನವರಿಕೆ ಮಾಡಿ ರೈತರ ಹಿತ ಕಾಪಾಡಲು ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಭಾಗವಹಿಸಿ ರೈತರ ಸಂಕಷ್ಟವನ್ನು ಅಧಿಕಾರಿಗಳೊಂದಿಗೆ ಚರ್ಚಿಸಿ ಏಪ್ರಿಲ್ನಲ್ಲಿ ತಿಂಗಳವರೆಗೆ ಕಾಲುವೆಗೆ ನೀರು ಹರಿಸುವ ಮೂಲಕ ಅನ್ನದಾತನ ಹಿತ ಕಾಪಾಡಬೇಕೆಂದು ರೈತರು ಒತ್ತಾಯಿಸಿದ್ದಾರೆ.
ನೀರು ಹರಿಸುವ ಸಮಯವನ್ನು ಈ ಭಾಗದ ಜನಪ್ರತಿನಿಧಿಗಳು ಮತ್ತು ಪಕ್ಕದ ಜಿಲ್ಲೆಯವರೇ ಆದ ನೀರಾವರಿ ಮಂತ್ರಿಗಳು ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಪಾಲ್ಗೊಂಡು ಪ್ರಾಮಾಣಿಕ ಪ್ರಯತ್ನ ಮಾಡಲು ರೈತರು ಆಗ್ರಹಿಸಿದ್ದಾರೆ.