ಸರ್ಕಾರದ ಧೋರಣೆ ಖಂಡಿಸಿ ಶಾಸಕರ ಧರಣಿ
ಕ.ಪ್ರ. ವಾರ್ತೆ ಗುಲ್ಬರ್ಗ ನ.11
ಆಳಂದ ತಾಲೂಕಿನಲ್ಲಿ ಕೆರೆಗಳನ್ನು ನಿರ್ಮಿಸಲು ಹಣ ಕೊಡದ ಸರ್ಕಾರದ ಕ್ರಮವನ್ನು ಖಂಡಿಸಿ ಆಳಂದ ವಿಧಾನಸಭಾ ಕ್ಷೇತ್ರದ ಕೆಜೆಪಿ ಶಾಸಕ ಬಿ.ಆರ್. ಪಾಟೀಲ್ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿದರು.
ಆಳಂದ ತಾಲೂಕಿನ ಅಂತರ್ಜಲ ಕುಸಿದು ಕಳೆದ ಬೇಸಿಗೆಯಲ್ಲಿ 50 ಹಳ್ಳಿಗಳಲ್ಲಿ ಕುಡಿಯುವ ನೀರನ್ನು ಟ್ಯಾಂಕರ್ಗಳಿಂದ ಸರಬರಾಜು ಮಾಡಲಾಯಿತು. ಬಾವಿಗಳಲ್ಲಿ ನೀರು ಹೋಗಿ ಕೃಷಿಯ ಮೇಲೆ ದೊಡ್ಡ ಪರಿಣಾಮ ಬಿದ್ದಿದೆ. ನಮ್ಮ ತಾಲೂಕಿನಲ್ಲಿ ಸಣ್ಣ ಕೆರೆಗಳನ್ನು ಕಟ್ಟಲು ಸುಮಾರು 300 ಮೇಲ್ಪಟ್ಟು ಸ್ಥಳಗಳು ಲಭ್ಯವಿದೆ. ಇದಕ್ಕಾಗಿ ಸರ್ಕಾರಕ್ಕೆ ಹಿಂದಿನಿಂದಲೂ ಬೇಡಿಕೆ ಇಡುತ್ತಾ ಬಂದಿರುವುದಾಗಿ ತಿಳಿಸಿದರು.
ಸರ್ಕಾರದ ತಾರತಮ್ಯ ಧೋರಣೆ: ಆದರೆ, ಈ ವರ್ಷ ಸರ್ಕಾರ ಚಿತ್ತಾಪುರ ತಾಲೂಕಿಗೆ 32 ಕೋಟಿ ಅನುದಾನ ನೀಡಿ ನಮ್ಮ ತಾಲೂಕಿಗೆ ಒಂದು ಪೈಸೆಯು ಕೊಡದೆ ಮಲತಾಯಿ ಧೋರಣೆ ತಾಳಿದೆ. ಜಿಲ್ಲೆಯಲ್ಲಿ ಅತೀ ಹೆಚ್ಚು ಕೆರೆ ಕಟ್ಟಲು ನಮ್ಮಲ್ಲಿ ಅವಕಾಶವಿದ್ದರೂ ಸರ್ಕಾರ ಪಕ್ಷಪಾತ ಮಾಡಿ ಘೋರ ಅನ್ಯಾಯ ಮಾಡಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ರೈತರ ಬೆಂಬಲ: ಈ ಧೋರಣೆಯನ್ನು ವಿರೋಧಿಸಿ ಆಳಂದ ತಾಲೂಕಿನ ವಿವಿಧ ಗ್ರಾಮಗಳ ರೈತರು, ರೈತ ಮುಖಂಡರು ಭಾಗವಹಿಸಿ ಬೆಂಬಲ ಸೂಚಿಸಿದರು. ಪ್ರತಿಭಟನಾ ಸ್ಥಳಕ್ಕೆ ಗುಲ್ಬರ್ಗ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರು ಭೇಟಿ ನೀಡಿ ಸಮಸ್ಯೆ ಆಲಿಸಿ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದ ನಂತರ ಶಾಸಕ ಬಿ.ಆರ್. ಪಾಟೀಲ್ ಅವರು ಸತ್ಯಾಗ್ರಹ ಹಿಂದಕ್ಕೆ ಪಡೆದುಕೊಂಡರು.