ಗ್ರಾಪಂಗಳಿಗೆ ಹೆಚ್ಚಿನ ಅನುದಾನ: ಶಾಸಕ ಗುರುಪಾಟೀಲ
ಕನ್ನಡಪ್ರಭ ವಾರ್ತೆ ಶಹಾಪುರ ನ.12
ಮತಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರಿಗಾಗಿ ಬರುವ ಅನುದಾನ ಕೇವಲ ರು. 2 ಕೋಟಿಯಷ್ಟು. ಆದರೆ ಪ್ರತಿಯೊಂದು ಗ್ರಾಪಂಗಳಿಗೆ ಇದಕ್ಕಿಂತಲೂ ಹೆಚ್ಚಿನ ಅನುದಾನ ಬರುತ್ತಿದ್ದು, ಗ್ರಾಪಂಗಳು ಸೂಕ್ತ ಯೋಜನೆಗಳನ್ನು ಅನುಷ್ಠಾನಕ್ಕೆ ತಂದು, ಸರ್ವರಿಗೂ ಸಮಬಾಳು ತರುವ ನಿಟ್ಟಿನಲ್ಲಿ ಪ್ರಯತ್ನ ಶರವೇಗದಲ್ಲಿ ಸಾಗಬೇಕಾಗಿದೆ ಎಂದು ಶಾಸಕ ಗುರುಪಾಟೀಲ ಶಿರವಾಳ ತಿಳಿಸಿದರು.
ತಾಲೂಕಿನ ಸಗರ ಗ್ರಾಮದಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ವ್ಯಕ್ತಿಗತ ಮತ್ತು ಸಾಮೂಹಿಕ ಕಾಮಗಾರಿಗಳನ್ನು ಸರ್ಕಾರ ಬಿಡುಗಡೆ ಮಾಡಿದ್ದು, ಅವುಗಳ ಅನುಷ್ಠಾನಕ್ಕೆ ತರುವುದಕ್ಕೆ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಉಪಯೋಗ ಹೊಂದಿ: ಈ ಹಿಂದೆಯೂ ಉದ್ಯೋಗ ಖಾತ್ರಿ ಕಾಮಗಾರಿಗಳಿದ್ದವು. ಆದರೆ ಪ್ರಸ್ತುತವಾಗಿ ಸರ್ಕಾರ ಯೋಜನೆಯಲ್ಲಿ ಪಾರದರ್ಶಕತೆ ತರಲು ಹಲವು ಬದಲಾವಣೆ ಮಾಡಿದ್ದು, 5 ಎಕರೆಯೊಳಗಿನ ಭೂಮಿಯುಳ್ಳ ರೈತರು 3 ಲಕ್ಷದ ವರೆಗೆ ಭೂಮಿಯಲ್ಲಿ ಹಲವಾರು ಕಾಮಗಾರಿಗಳನ್ನು ಕೈಗೊಳ್ಳಬಹುದು. ಎಲ್ಲಾ ವರ್ಗದ ಸಣ್ಣ ಮತ್ತು ಅತಿಸಣ್ಣ ರೈತರು ಕೃಷಿ ಹೊಂಡ, ಭೂ ಅಭಿವೃದ್ಧಿ, ಎರೆಹುಳು ಸಾಕಾಣಿಕೆ, ರೇಷ್ಮೆ ಕೃಷಿ ಇಂಗು ಗುಂಡಿ, ತೋಟಗಾರಿಕೆ, ಜಾನುವಾರು ಕೊಟ್ಟಿಗೆ, ಕುರಿದೊಡ್ಡಿ, ಭೂ ಸುಧಾರಣೆ, ನಮ್ಮ ಹೊಲ ನಮ್ಮ ದಾರಿ ಹೀಗೆ ಹಲವಾರು ಕಾಮಗಾರಿಗಳನ್ನು ನಿರ್ವಹಿಸಿಕೊಂಡು ಸಮಸ್ತ ರೈತವರ್ಗ ದುಡಿಯುವ ವರ್ಗ ಆರ್ಥಿಕವಾಗಿ ಸ್ಥಿತಿವಂತರಾಗಲು ಸರ್ಕಾರ ಯೋಜನೆಯನ್ನು ಮಾಹಿತಿ ನೀಡಲು ಹಳ್ಳಿಗೆ ಬಂದಿದ್ದು, ಅದರ ಸಾರ್ಥಕ ಪ್ರಯೋಜನ ಪಡೆಯಬೇಕು. ಸರ್ಕಾರದ ಉದ್ದೇಶ ಸಾರ್ಥಕಪಡಿಸಲು ಯೋಜನೆಗಳು ಪೂರಕವಾಗಲಿ ಎಂದರು.
ಪ್ರಗತಿಗೆ ಪೂರಕ: ಜಿಪಂ ಸದಸ್ಯರಾದ ನಾಗನಗೌಡ ಸುಬೇದಾರ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಕೃಷಿಯೇ ನಮ್ಮ ಜೀವಾಳವಾಗಿದೆ. ಸರ್ಕಾರ ರೈತರಿಗಾಗಿ ರಾ.ಗ್ರಾ.ಉ.ಖಾತ್ರಿ ಯೋಜನೆಯಡಿಯಲ್ಲಿ ಆರ್ಥಿಕ ಸಹಕಾರ ಕಲ್ಪಿಸಿದ್ದು, ಯೋಜನೆಯ ಸದುಪಯೋಗ ಪಡೆಯಬೇಕು ಎಂದರು. ಜಿಪಂ ಉಪಕಾರ್ಯದರ್ಶಿ ಮಹ್ಮದ್ ಯೂಸುಫ್ ಮಾತನಾಡಿ, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ ಇಲಾಖೆ ಗ್ರಾಮಗಳ ಅಭ್ಯುದಯಕ್ಕಾಗಿ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು, ಮುಖ್ಯವಾಗಿ ನಮ್ಮ ಹೊಲ, ನಮ್ಮ ದಾರಿ, ರೈತ ಕಣ, ಕುರಿ, ದನದ ದೊಡ್ಡಿ, ನಮ್ಮಹಳ್ಳಿ ನಮ್ಮನೀರು, ಮನೆಗೊಂದು ಶೌಚಾಲಯ, ಸೇವಾ ಕೇಂದ್ರ, ಜೊತೆಗೆ ಶಾಲಾ ಮಕ್ಕಳಿಗಾಗಿ, ಗ್ರಾಮಸ್ಥರಿಗಾಗಿ ಆಟದ ಮೈದಾನ ಕಾಮಗಾರಿ ಕೈಗೊಳ್ಳಲು ಅವಕಾಶ ನೀಡಿದೆ.
ರಾ.ಉ. ಖಾತ್ರಿಗೆ ಸಂಬಂದಿಸಿದಂತೆ ಹೋಬಳಿ ಮಟ್ಟದಲ್ಲಿ, ಜಾಬ್ ಕಾರ್ಡ್, ಎನ್ಎಂಆರ್ ಬ್ಯಾಂಕ್ ಅಕೌಂಟಿಗೂ ತೊಂದರೆಯಾಗದಂತೆ ಸರ್ಕಾರ ಮನೆ ಬಾಗಿಲಿಗೆ ಬಂದಿದ್ದು, ಗ್ರಾಮಸ್ಥರು ಇದರ ಲಾಭ ಪಡೆದಾಗ ಮಾತ್ರ ಯೋಜನೆ ಫಲಪ್ರದವಾಗುತ್ತದೆ ಎಂದರು.
ಎನ್ಎಂಆರ್ ಜಾಬ್ಕಾರ್ಡ್ಗಳನ್ನು ಸಾಂಕೇತಿವಾಗಿ ಶಾಸಕ ಗುರುಪಾಟೀಲರು ಮತ್ತು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಎಸ್.ಎ. ಜಿಲಾನಿ ವಿತರಿಸಿದರು. ವೇದಿಕೆ ಮೇಲೆ ಕೆಂಭಾವಿ ಜಿ.ಪಂ. ಸದಸ್ಯ ಸಿದ್ದನಗೌಡ ಪಾಟೀಲ, ಗ್ರಾ.ಪಂ ಅಧ್ಯಕ್ಷೆ ಸಿದ್ದಮ್ಮ ಶೇಖರಪ್ಪ ಸೂಗೂರು, ತಾಪಂ ಅಧ್ಯಕ್ಷೆ ಲಕ್ಷ್ಮೀಬಾಯಿ ಬಾಗಣ್ಣಾ ಕೂಡ್ಲೂರು, ತಾ.ಪಂ. ಸದಸ್ಯ ಸುಜಾತಾ ಅಮರಣ್ಣ ಸಾಹು, ಶರಣಪ್ಪ ಪೋಮುನಾಯಕ, ನಾಗನಟಿಗಿ ಗ್ರಾಪಂ ಅಧ್ಯಕ್ಷೆ ಶ್ರೀದೇವಿ ಮಲ್ಲಣ್ಣ, ರಸ್ತಾಪುರ ಗ್ರಾಪಂ ಅಧ್ಯಕ್ಷ ಮಲ್ಲಿಕಾರ್ಜುನ ನಾಯ್ಕೋಡಿ, ಜಿಪಂ ಮುಖ್ಯ ಯೋಜನಾಧಿಕಾರಿ ಬಸವರಾಜ ಸುಣ್ಣದ ಸೇರಿದಂತೆ ಅಧಿಕಾರಿಗಳು, ಗಣ್ಯರು ಉಪಸ್ಥಿತರಿದ್ದರು.ಕಾರ್ಯ ನಿರ್ವಣಾಧಿಕಾರಿ ನರಸಿಂಗರಾವ್ ಮುತಾಲಿಕ್ ಸ್ವಾಗತಿಸಿ, ರಾಯಪ್ಪಗೌಡ ಹುಡೇದ ನಿರ್ವಹಿಸಿದರು. ವಂದನಾರ್ಪಣೆಯನ್ನು ಬಿ.ಕೆ. ಬಿರಾದಾರ ಮತ್ತು ಪ್ರಾರ್ಥನೆಯನ್ನು ಸ್ಥಳೀಯ ಸರ್ಕಾರಿ ಶಾಲಾ ಮಕ್ಕಳು ನೆರವೇರಿಸಿದರು.