ಬಾಲ ಬಿಚ್ಚಿದರೆ ಹುಷಾರ್..!
ಗುಲ್ಬರ್ಗ: ಗುಲ್ಬರ್ಗ, ಬೀದರ್, ಕೊಪ್ಪಳ, ರಾಯಚೂರು ಹಾಗೂ ಯಾದಗಿರಿ ವ್ಯಾಪ್ತಿಯಲ್ಲಿರುವ ಹೈ-ಕ ನೆಲದ ಈಶಾನ್ಯ ಪೊಲೀಸ್ ವಲಯದಲ್ಲಿ ರೌಡಿ ಶೀಟರ್ಗಳ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಕೈಗೆತ್ತಿಕೊಂಡಿರುವ ಪೊಲೀಸ್ ಇಲಾಖೆ ಈಗಾಗಲೇ 4 ಸಾವಿರ ರೌಡಿಗಳನ್ನು ಗುರುತಿಸಿದೆ. ಇಂತಹ ರೌಡಿಗಳ ಚಲನವಲನಗಳ ಬಗ್ಗೆ ನಿಗಾ ಇಡಲಾಗುತ್ತಿದೆ. ಜೊತೆಗೇ ಇವರು ಬಾಲ ಬಿಚ್ಚದಂತೆ ಸೂಕ್ತ ಪ್ರತಿಬಂಧಕ ಉಪಾಯಗಳನ್ನು ಸಹ ಇಲಾಖೆ ಕೈಗೊಳ್ಳುತ್ತಿದೆ ಎಂದು ಗೃಹ ಸಚಿವ ಕೆಜೆ ಜಾರ್ಜ್ ಹೇಳಿದ್ದಾರೆ. ಗೃಹ ಸಚಿವರಾಗಿ ಗುಲ್ಬರ್ಗಕ್ಕೆ ಚೊಚ್ಚಲ ಭೇಟಿ ನೀಡಿದ್ದ ಜಾರ್ಜ್, ಈಶಾನ್ಯ ವಲಯ ಐಜಿಪಿ ವಜೀರ್ ಅಹ್ಮದ್ ಹಾಗೂ ವಲಯದ ಎಲ್ಲಾ ಜಿಲ್ಲೆಗಳ ಎಸ್ಪಿಗಳು, ಹೆಚ್ಚುವರಿ ಎಸ್ಪಿಗಳೊಂದಿಗಿನ ಪರಿಶೀಲನಾ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.
4000 ಸಾವಿರ ರೌಡಿಗಳ ಮೇಲೆ ತೀವ್ರ ನಿಗಾ: ಹೈ- ಕ ಭಾಗದ ಪಂಚ ಜಿಲ್ಲೆಗಳಲ್ಲಿ ಹಳೆಯ 700 ಹಳೆಯ ರೌಡಿಗಳ ವಿರುದ್ಧದ ಪ್ರಕರಣಗಳನ್ನು ಕೈಬಿಡಲಾಗಿದೆ. ವೃದ್ಧಾಪ್ಯ, ಸನ್ನಡತೆ ಸೇರಿದಂತೆ ಹಲವು ಕಾರಣಗಳು ಈ ಕ್ರಮದ ಹಿಂದೆ ಅಡಗಿವೆ. ಪರಿಷ್ಕೃತ ಪಟ್ಟಿಯಂತೆ ಹೈ- ಕ ನೆಲದಲ್ಲಿ 4 ಸಾವಿರ ರೌಡಿಗಳ ವಿರುದ್ಧ ತೀವ್ರ ನಿಗಾ ಇಡಲಾಗುತ್ತಿದೆ ಎಂದರು.
ಕುಖ್ಯಾತ ರೌಡಿಗಳ ಮೇಲೆ ಇಲಾಖೆ ಹೆಚ್ಚಿನ ನಿಗಾ ಇಡುತ್ತಿದೆ. ಇವರು ಯಾವ ಕಾರಣಕ್ಕೂ ಬಾಲ ಬಿಚ್ಚದಂತೆ ಎಚ್ಚರ ವಹಿಸಲಾಗುತ್ತದೆ. ರೌಡಿಗಳು ಮತ್ತೆ ಅಪರಾಧದಲ್ಲಿ ತೊಡಗಿದರೆ ಅಂಥವರ ವಿರುದ್ಧ ಕಠಿಣ ಕ್ರಮಗಳಿಗೂ ಇಲಾಖೆ ಮುಂದಾಗುತ್ತದೆ ಎಂದರು.
ಗೂಂಡಾ ಕಾಯ್ದೆ ಪ್ರಯೋಗ?: ರೌಡಿಗಳ ನಿಗಾದಿಂದಷ್ಟೇ ಕಾನೂನು- ಸುವ್ಯವಸ್ಥೆ ಮೇಲೆ ಹಿಡಿತ ಸಾಧಿಸಲು ಸಾಧ್ಯ ಎಂದ ಸಚಿವರು, ರಾಜ್ಯಾದ್ಯಂತ ರೌಡಿ ಶೀಟರ್ಗಳ ಪರಿಷ್ಕರಣೆ ಸಾಗಿದೆ. ರೌಡಿಗಳ ವಿರುದ್ಧ ಗೂಂಡಾ ಕಾಯ್ದೆ ಪ್ರಯೋಗಿಸಲು ಸರ್ಕಾರ ಹಿಂಜರಿಯದು ಎಂದು ಹೇಳಿದ್ದಾರೆ.
ಗುಲ್ಬರ್ಗದಲ್ಲಿ ಪೊಲೀಸ್ ಮಕ್ಕಳ ವಸತಿ ಶಾಲೆ: ಪ್ರತಿಯೊಂದು ಪೊಲೀಸ್ ರೇಂಜ್ಗೆ ವಸತಿ ಶಾಲೆಯನ್ನು ಗೃಹ ಇಲಾಖೆ ಮಂಜೂರು ಮಾಡುತ್ತಿದೆ. ಅದರಂತೆಯೇ ಈಶಾನ್ಯ ವಲಯದ ಮುಖ್ಯ ಕೇಂದ್ರವಾಗಿರುವ ಗುಲ್ಬರ್ಗಕ್ಕೆ ಪೊಲೀಸ್ ಮಕ್ಕಳ ಕಲಿಕೆಗೆ ಅನುಕೂಲವಾಗುವಂತಹ ಸಿಬಿಎಸ್ಇ ಪಠ್ಯವಿರುವ ವಸತಿ ಶಾಲೆ ಮಂಜೂರು ಮಾಡಲಾಗಿದೆ. ಶೀಘ್ರವೇ ಈ ಶಾಲೆ ಪೂರ್ಣ ಪ್ರಮಾಣದಲ್ಲಿ ಇಲ್ಲಿ ಕಾರ್ಯಾರಂಭಿಸಲಿದೆ ಎಂದರು.
ಇದಲ್ಲದೆ ಸೈಬರ್ ಠಾಣೆಯನ್ನೂ ಗುಲ್ಬರ್ಗಕ್ಕೆ ಮಂಜೂರು ಮಾಡಲಾಗಿದ್ದು ಇಲ್ಲಿನ ಸೈಬರ್ ಅಪರಾಧ ಲೋಕದ ಮೇಲೆ ಈ ಠಾಣೆ ಕಣ್ಗಾವಲು ಇಡಲಿದೆ. ಪ್ರತಿಯೊಂದು ಅಪರಾಧದ ಸುತ್ತಮುತ್ತ ಸೈಬರ್ ಜಾಲ ಕಾಣಬರುತ್ತಿರುವುದರಿಂದ ಗುಲ್ಬರ್ಗಕ್ಕೆ ಸೈಬರ್ ಠಾಣೆ ಮಂಜೂರು ಮಾಡಲಾಗಿದೆ. ಈ ಠಾಣೆಯ ಮೂಲಕ ಈ ಭಾಗದ ಸೈಬರ್ ಅಪರಾಧ ಜಗತ್ತಿನ ಮೇಲೆ ಪೊಲೀಸ್ ಕಾವಲು ಹಾಕಲಾಗುವುದು ಎಂದು ಜಾರ್ಜ್ ಹೇಳಿದರು.
ಪೊಲೀಸ್ ಕಮೀಷನರೇಟ್ ಬೇಡಿಕೆ ಗಣನೆ: ಗುಲ್ಬರ್ಗಕ್ಕೆ ಪ್ರತ್ಯೇಕ ಪೊಲೀಸ್ ಕಮಿಷನರೇಟ್ ಬೇಕು ಎಂಬ ಬೇಡಿಕೆ ಸರ್ಕಾರದ ಗಮನದಲ್ಲಿದೆ. ಈ ಸಾರಿ ಬೆಳಗಾವಿಗೆ ಕಮಿಷನರೇಟ್ ಮಂಜೂರಾಗಿದೆ. ಬರುವ ದಿನಗಳಲ್ಲಿ ಗುಲ್ಬರ್ಗ ಬೇಡಿಕೆಯನ್ನೂ ಗಮನಿಸಲಾಗುತ್ತದೆ ಎಂದು ಜಾರ್ಜ್ ಭರವಸೆ ನೀಡಿದರು.
ರಾಜ್ಯದಲ್ಲಿ ಶೀಘ್ರವೇ ಹೊಸತಾಗಿ 25 ಪೊಲೀಸ್ ಠಾಣೆ ಆರಂಭಿಸಲಾಗುತ್ತಿದೆ. ಈ ಪೈಕಿ ಹಿಂದಿನ ಸರ್ಕಾರದ ಪ್ರಸ್ತಾವನೆಗಳಂತೆ 12 ಠಾಣೆ ಆರಂಭವಾಗಲಿವೆ. ಈ ಸರ್ಕಾರ ಬಂದ ಮೇಲೆ ಸೂಕ್ತ ಸ್ಥಳಗಳ ಶೋಧ ಸಾಗಿದೆ. ಆ ವರದಿ ಆಧರಿಸಿ ಎಲ್ಲ ಠಾಣೆಗಳ ಆರಂಭಕ್ಕೆ ಕ್ರಮ ಜರುಗಿಸಲಾಗುತ್ತದೆ ಎಂದರು.
ಠಾಣೆ- ವ್ಯಾಪ್ತಿ ವಿಚಾರ, ಎಸ್ಪಿ- ಎಎಸ್ಪಿಗಳಿಗೆ ತಾಕೀತು: ಪೊಲೀಸ್ ಠಾಣೆಗಳ ಪಿಎಸ್ಐ, ಸಿಪಿಐ, ಡಿವೈಎಸ್ಪಿಗಳ ಹಂತದ ಅಧಿಕಾರಿಗಳು ಅಪರಾಧ ಸಂಭವಿಸಿದ ತಕ್ಷಣ ಜನರ ಕರೆಯಂತೆ ಅಲ್ಲಿಗೆ ಧಾವಿಸದೆ ಠಾಣೆಯ ಸೀಮೆಯ ಲೆಕ್ಕ ಹಾಕುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲ, ಮೊದಲು ನೊಂದ ಜನರಿಗೆ ನೆರವಿನ ಹಸ್ತ ಚಾಚುವ ಕೆಲಸವಾಗಲಿ. ನಂತರ ಠಾಣೆಯ ವ್ಯಾಪ್ತಿ- ವಿಸ್ತಾರ ನಿರ್ಧರಿಸಿ ಪ್ರಕರಣದ ದಾಖಲೆ, ವಿಚಾರಣೆಗಳು ನಡೆಯಲಿ.
ಮೊದ್ಲು ಠಾಣೆಯ ವ್ಯಾಪ್ತಿ ಚರ್ಚೆ ಮಾಡಿ ಸಮಯ ಹಾಳು ಮಾಡುತ್ತ ಯಾರಾದರೂ ಕುಳಿತುಕೊಂಡ ವಿಚಾರ ಗಮನಕ್ಕೆ ಬಂದಲ್ಲಿ ಅಂತಹ ಜಿಲ್ಲೆಗಳ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ಗೃಹ ಸಚಿವರು ಎಲ್ಲ ಜಿಲ್ಲೆಗಳ ಎಸ್ಪಿ- ಹೆಚ್ಚುವರಿ ಎಸ್ಪಿಗಳಿಗೆ ತಾಕೀತು ಮಾಡಿದರು.
ಸರಗಳ್ಳತನ ಹಾವಳಿಯಲ್ಲಿ ರಾಜ್ಯದ, ಅಕ್ಕಪಕ್ಕದ ರಾಜ್ಯಗಳ ಅಪರಾಧಿಗಳೂ ಸೇರಿಕೊಳ್ಳುತ್ತಿದ್ದಾರೆ. ಈ ಉಪಟಳ ಶಮನಕ್ಕೆ ಕಟ್ಟುನಿಟ್ಟು ಕ್ರಮ ಕೈಗೊಳ್ಳುತ್ತದೆ. ಪದೇ ಪದೇ ಯಾರು ಸರಗಳ್ಳತನದಲ್ಲಿ ತೊಡಗಿದ್ದಾರೋ ಅವರನ್ನು ಗೂಂಡಾ ಕಾಯ್ದೆಯಡಿಯಲ್ಲಿ ಶಿಕ್ಷಿಸುತ್ತೇವೆ. ಅವರನ್ನೂ ಗಡಿಪಾರು ಮಾಡಲೂ ಹಿಂದೆ ಮುಂದೆ ನೋಡುವುದಿಲ್ಲ.
ಎಂ. ಎನ್. ರೆಡ್ಡಿ,
ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ)