ರೈತರ ಜಮೀನಿಗೆ ಜಲಾಶಯ ನೀರು ಬಿಡುಗಡೆ
ಯಾದಗಿರಿ: ಸೋಮವಾರ ಸಂಜೆ ತಾಲೂಕಿನ ಹತ್ತಿಕುಣಿ ಗ್ರಾಮದ ಜಲಾಶಯದಿಂದ ರೈತರ ಜಮೀನಿಗೆ ಕಾಲುವೆ ಮೂಲಕ ನೀರು ಬಿಡುಗಡೆ ಮಾಡಲಾಯಿತು. ಜಲಾಶಯದ ನೀರು ಬಳಕೆದಾರರ ಸಹಕಾರ ಸಂಘ ಮಹಾಮಂಡಳದ ಅಧ್ಯಕ್ಷ ವೀರಭದ್ರಪ್ಪ ಯಡ್ಡಳ್ಳಿ ನೇತೃತ್ವದಲ್ಲಿ ರೈತರು ಜಲಾಶಯದ ತೂಬಿಗೆ ಪೂಜೆ ಸಲ್ಲಿಸುವ ಮೂಲಕ ಕಾಲುವೆಗೆ ನೀರು ಹರಿಸಲಾಯಿತು.
ಈ ಸಂದರ್ಭದಲ್ಲಿ ನೀರು ಬಳಕೆದಾರ ಸಂಘದ ಅಧ್ಯಕ್ಷ ಶರಣಪ್ಪ ಗೌಡ ಮಾಲಿಪಾಟೀಲ, ಸಾಬಣ್ಣ ಪೂಜಾರಿ ಮುಂಡ್ರಗಿ, ಸದಾನಂದ ಕಂಬಾರ, ಸಾಯಿಬಣ್ಣ ನಾಟೇಕಾರ್ ಯಡ್ಡಳ್ಳಿ, ಜಲಾಶಯ ಸಹಾಯಕ ಇಂಜಿನಿಯರ್ ಬಸವರಾಜ ತೋಟ್ಲೂರ್, ಹಾಗೂ ನಿರಾವರಿ ಇಲಾಖೆ ಸಿಬ್ಬಂದಿ, ರೈತರು ಉಪಸ್ಥಿತರಿದ್ದರು.
ಜಲಾಶಯ ವ್ಯಾಪ್ತಿಯಲ್ಲಿ ಹತ್ತಿಕುಣಿ, ಕಟಗಿ ಶಹಾಪುರ, ಯಡ್ಡಳ್ಳಿ, ಬಂದಳ್ಳಿ ಹಾಗೂ ಹೊನಗೇರಾ ಗ್ರಾಮದ ರೈತರು ಸುಮಾರು 4 ಸಾವಿರ ಎಕರೆ ಜಮೀನಿನಲ್ಲಿ ಶೇಂಗಾ ಬೀಜ ಬಿತ್ತನೆ ಮಾಡಿ 40 ದಿನಗಳು ಕಳೆದಿವೆ. ನೀರಾವರಿ ಇಲಾಖೆ ಕಾಲುವೆಯ ಊಳು ತೆಗೆದು ಒಂದು ವಾರದ ಹಿಂದೆಯೇ ನೀರು ಬಿಡಬೇಕಾಗಿತ್ತು. ಬಿಡದ ಕಾರಣ ಶೇಂಗಾ ಬೆಳೆ ಒಣಗುತ್ತಿದೆ ಎಂದು ರೈತರು ಹೋರಾಟದ ಎಚ್ಚರಿಕೆ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡ ಅಧಿಕಾರಿಗಳು ತರಾತುರಿಯಲ್ಲಿ ಕಾಲುವೆ ಊಳು ತೆಗೆದು ನೀರು ಬಿಟ್ಟಿರುವುದಕ್ಕೆ ರೈತರು ನಿಟ್ಟುಸಿರು ಬಿಟ್ಟಿದ್ದಾರೆ.