ಉತ್ತಮ ಜೀವನಕ್ಕಾಗಿ ಕಾನೂನು ಅರಿವು ಮುಖ್ಯ'
ಅಫಜಲ್ಪುರ: ಕಾನೂನು ಅರಿವಿನಿಂದ ಮನುಷ್ಯ ತನ್ನ ಜೀವನವನ್ನು ಉತ್ತಮ ಪಡಿಸಿಕೊಂಡು ಒಳ್ಳೆಯ ಬಾಳ್ವೆಯನ್ನು ಮಾಡಬಹುದು ಎಂದು ಸಹಾಯಕ ಸರ್ಕಾರಿ ಅಭಿಯೋಜಕ ಪ್ರಶಾಂತಕುಮಾರ್ ಹೇಳಿದರು.
ಪಟ್ಟಣದ ಸರ್ಕಾರಿ ಬಾಲಕರ ವಸತಿ ನಿಲಯದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ನ್ಯಾಯವಾದಿಗಳ ಸಂಘ ಅಫಜಲ್ಪುರ ಇವರ ಸಂಯುಕ್ತಾಶ್ರಯದಲ್ಲಿ ನಡೆದ ರಾಷ್ಟ್ರಿಯ ಕಾನೂನು ಸೇವಾ ದಿನಾಚರಣೆಯ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾನೂನು ಜ್ಞಾನದಿಂದ ಮಕ್ಕಳು ಭವಿಷ್ಯದಲ್ಲಿ ಒಳ್ಳೆಯ ಪ್ರಜೆಗಳಾಗಿ ಬಾಳಬಹುದು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಮಹಿಳೆಯರಿಗೆ ತಾಲೂಕು ಕಾನೂನು ಸೇವಾ ಸಮಿತಿಯಿಂದ ಕಾನೂನಿನ ನೆರವನ್ನು ಪಡೆಯಲು ಆದಾಯದ ಯಾವುದೇ ಮಿತಿಯಿರುವುದಿಲ್ಲ. ಹೀಗಾಗಿ ಕಾನೂನು ಸೇವಾ ಪ್ರಾಧಿಕಾರದಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ಅರ್ಹ ವ್ಯಕ್ತಿಗಳು ಪಡೆದುಕೊಳ್ಳಬೇಕು ಎಂದು ಹೇಳಿದರು.
ನ್ಯಾಯವಾದಿ ಸಿ.ಎಸ್. ಹಿರೇಮಠ ಕಾನೂನಿನ ವಿಶೇಷ ಉಪನ್ಯಾಸ ನೀಡಿದರು. ತಾಲೂಕು ವಕೀಲರ ಸಂಘದ ಅಧ್ಯಕ್ಷ ಕೆ.ಜಿ. ಪೂಜಾರಿ, ವಸತಿ ನಿಲಯದ ಮೇಲ್ವಿಚಾರಕಿ ಶಾರದಾಬಾಯಿ, ಪ್ರಾಚಾರ್ಯ ಕಾಶಿನಾಥ ಬಗಲಿ, ಸಿದ್ದರಾಮಯ್ಯ ಹಿರೇಮಠ, ನ್ಯಾಯವಾದಿಗಳಾದ ಎಸ್.ಎಸ್. ಪಾಟೀಲ್ ಸೇರಿದಂತೆ ಇತರರು ಇದ್ದರು.
ವೆಂಕಟೇಶ ಪಾಟೀಲ್ ಸ್ವಾಗತಿಸಿದರು. ಸಿದ್ದಣ್ಣ ಕೊಳ್ಳಿ ಕಾರ್ಯಕ್ರಮ ನಿರೂಪಿಸಿದರು. ಸಿದ್ದಣ್ಣ ತಳಕೇರಿ ವಂದಿಸಿದರು.